ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ವೀರಭದ್ರೇಶ್ವರ ದೇವಸ್ಥಾನಕ್ಕೆ ಮೆರಗು ನೀಡಲಿರುವ ಉದ್ಯಾನ

Published 29 ಜನವರಿ 2024, 15:32 IST
Last Updated 29 ಜನವರಿ 2024, 15:32 IST
ಅಕ್ಷರ ಗಾತ್ರ

ಮುಂಡರಗಿ: ‘ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನವು ಜಿಲ್ಲೆಯ ಒಂದು ಪವಿತ್ರ ಯಾತ್ರಾ ಕ್ಷೇತ್ರವಾಗಿದ್ದು, ಈಗ ಇಲ್ಲಿ ನೂತನವಾಗಿ ನಿರ್ಮಿಸಿರುವ ಉದ್ಯಾನವು ಈ ಭಾಗಕ್ಕೆ ಹೆಚ್ಚಿನ ಮೆರಗು ನೀಡಲಿದೆ.  ಪ್ರವಾಸೋದ್ಯಮ ಇಲಾಖೆಯಿಂದ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನ ನೀಡಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದರು.

ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನದಲ್ಲಿ ₹2ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವೀರಭದ್ರೇಶ್ವರ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವೀರಭದ್ರೇಶ್ವರ ದೇವಸ್ಥಾನದ ಮುಂದೆ ಹರಿದಿರುವ ತುಂಗಭದ್ರಾ ನದಿಗೆ ತೂಗು ಸೇತುವೆ ನಿರ್ಮಾಣ ಹಾಗೂ ಯಾತ್ರಿ ನಿವಾಸ ನಿರ್ಮಾಣಕ್ಕೆ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಪ್ರವಾಸೋದ್ಯಮ ಇಲಾಖೆಯು ನೀಡುವ ₹1ಕೋಟಿ ಅನುದಾನವನ್ನು ಅಗತ್ಯವಿರುವುದಕ್ಕೆ ಆದ್ಯತೆ ನೀಡಿ ಬಳಸಲಾಗುವುದು’ ಎಂದು ತಿಳಿಸಿದರು.

‘ಐಷಾರಾಮಿ ಪ್ರವಾಸಕ್ಕೆ ಮೀಸಲಾಗಿರುವ ಗೋವಾದಂತಹ ಪ್ರವಾಸಿ ಕೇಂದ್ರಗಳನ್ನು ಮಾತ್ರ ಅಭಿವೃದ್ಧಿ ಪಡಿಸುವುದು ಪ್ರವಾಸೋದ್ಯಮ ಇಲಾಖೆಯ ಕಾರ್ಯವಲ್ಲ. ನಮ್ಮ ಭಾಗದ ಜನಪ್ರೀಯ ಹಾಗೂ ಹೆಚ್ಚು ಜನರನ್ನು ಆಕರ್ಷಿಸುವ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ. ಈ ಕಾರಣದಿಂದ ಈ ಭಾಗದಲ್ಲಿರುವ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಶಿಂಗಟಾಲೂರ ವೀರಭದ್ರೇಶ್ವರ ಉದ್ಯಾನದಲ್ಲಿ ಗ್ರಾಮೀಣ ಭಾಗದ ಜನ ಜೀವನ ಸೊಗಸಾಗಿ ರೂಪಗೊಂಡಿದ್ದು, ನೋಡುಗರ ಮನ ಸೆಳೆಯುತ್ತಿದೆ. ಇಲ್ಲಿ ನಿರ್ಮಿಸಿರುವ ಹಳ್ಳಿಮನೆ, ಗೌಡರ ಮನೆ, ಗುರಿದೊಡ್ಡಿ, ಎತ್ತು, ಚಕ್ಕಡಿ ಮೊದಲಾವುಗಳು ಮಕ್ಕಳ ಮನಸ್ಸು ಗೆಲ್ಲುವಂತಿವೆ. ಇಂತಹ ಪ್ರವಾಸಿ ಕೇಂದ್ರಗಳ ಜೊತೆಗೆ ನಮ್ಮ ಭಾಗದಲ್ಲಿರುವ ಶೈಕ್ಷಣಿ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಅದಕ್ಕೂ ಪೂರ್ವದಲ್ಲಿ ಸಚಿವ ಎಚ್.ಕೆ.ಪಾಟೀಲ ಹಾಗೂ ಮತ್ತಿತರ ಗಣ್ಯರು ಉದ್ಯಾನ ವೀಕ್ಷಿಸಿದರು. ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ.ವಿ.ಹಂಚಿನಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಗಡ್ಡದೇವರಮಠ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೈಲಾರೆಪ್ಪ ಉದಂಡಿ, ಭೀಮಸಿಂಗ್ ರಾಠೋಡ, ವಿ.ಎಲ್.ನಾಡಗೌಡರ, ಡಿ.ಡಿ.ಮೋರನಾಳ, ಎಸ್.ವಿ.ಪಾಟೀಲ, ಸುಜಾತಾ ದೊಡ್ಡಮನಿ ಉಪಸ್ಥಿತರಿದ್ದರು.

ಕೆಪಿಸಿಸಿ ಕಾರ್ಯದರ್ಶಿ ವೈ.ಎನ್.ಗೌಡರ ಸ್ವಾಗತಿಸಿದರು. ಉಮೇಶ ಪುರದ ಕಾರ್ಯಕ್ರಮ ನಿರೂಪಿಸಿದರು.

ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ದೇವಸ್ಥಾನದ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ದೇವಸ್ಥಾನದ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT