ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಂಬಳ | ವೇಗ ಪಡೆದ ಕೃಷಿ ಚಟುವಟಿಕೆ

ಸಗಣಿ ಗೊಬ್ಬರಕ್ಕೆ ಮತ್ತೆ ಹೆಚ್ಚಿದ ಬೇಡಿಕೆ; ಮಣ್ಣಿನ ಫಲವತ್ತತೆ ಹೆಚ್ಚಿಸುವ ಗುರಿ
Published 14 ಮೇ 2024, 4:43 IST
Last Updated 14 ಮೇ 2024, 4:43 IST
ಅಕ್ಷರ ಗಾತ್ರ

ಡಂಬಳ: ರಾಸಾಯನಿಕ ಗೊಬ್ಬರ ಬಳಕೆಯಿಂದ ಸಗಣಿ ಗೊಬ್ಬರ ಕೇಳುವವರೇ ಇಲ್ಲದಂತಾಗಿತ್ತು. ಕೆಲ ವರ್ಷಗಳಿಂದ ರೈತರು ಸಾವಯವ ಕೃಷಿ ಪದ್ದತಿಗೆ ಹೆಚ್ಚು ಒಲವು ತೂರುತ್ತಿರುವುದರಿಂದ ಸಗಣಿ ಗೊಬ್ಬರಕ್ಕೆ ಭಾರೀ ಬೇಡಿಕೆ ಬಂದಿದೆ. ಹೆಚ್ಚು ಇಳುವರಿ ಪಡೆಯಬೇಕು, ಆದಾಯ ಚನ್ನಾಗಿ ಬರಬೇಕೆಂದು ಮಣ್ಣಿನ ರಕ್ಷಣೆಗೂ ಆದ್ಯತೆ ನೀಡುವ ಮೂಲಕ ರಾಸಾಯನಿಕ ಗೊಬ್ಬರ ಬಿತ್ತನೆಗೆ ಮುಂದಾಗಿದ್ದ ಹಲವು ರೈತರು, ಈಗ ಸಗಣಿ ಗೊಬ್ಬರ ಬಳಸಿಕೊಂಡು ಕೃಷಿ ಚಟುವಟಿಕೆಗೆ ಮುಂದಾಗಿದ್ದು ಮುಂಗಾರು ಪೂರ್ವ ಕೃಷಿ ಚುಟುವಟಿಕೆಯ ಸಿದ್ಧತೆಗಳು ವೇಗ ಪಡೆದುಕೊಂಡಿವೆ.

ಗ್ರಾಮೀಣ ಪ್ರದೇಶದಲ್ಲಿ ರೈತರು ಜಾನುವಾರುಗಳ ಸಗಣಿ, ಮೂತ್ರ ಪ್ರತ್ಯೇಕವಾಗಿ ಸಂಗ್ರಹಿಸುತ್ತಿದ್ದರು. ಇದರೊಟ್ಟಿಗೆ ಕಸಕಡ್ಡಿ, ರಸ್ತೆಯಲ್ಲಿನ ಸಗಣಿ ಸಂಗ್ರಹಿಸಿ ಪ್ರತ್ಯೇಕವಾಗಿ ತಿಪ್ಪೆಗುಂಡಿ ಮಾಡಿಕೊಂಡಿರುತ್ತಿದ್ದರು. ರೈತನ ಮಿತ್ರ ಎರೆಹುಳ ತಿಪ್ಪೆಯಲ್ಲಿನ ತ್ಯಾಜ್ಯ ಫಲವತ್ತಾಗಿಸುವ ಮೂಲಕ ಭೂಮಿಯ ಫಲವತ್ತತೆಗೆ ಹೆಚ್ಚು ಸಹಕಾರಿಯಾಗಿತ್ತು. ಅತ್ಯಂತ ಕಡಿಮೆ ದರದಲ್ಲಿ ಪೂರೈಕೆ ಆಗುತ್ತಿದ್ದ ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ಕಂಪನಿಗಳ ರಸಗೊಬ್ಬರ ಬಳಕೆಯಿಂದ ಹೆಚ್ಚಿನ ಫಸಲಿನ ನಿರೀಕ್ಷೆಯ ಭ್ರಮೆಗೆ ಒಳಗಾದ ರೈತರು ಭೂಮಿ ಫಲವತ್ತತೆ ಕಳೆದುಕೊಳ್ಳವ ಜತೆಗೆ ಪೋಷಕಾಂಶವುಳ್ಳ ಆಹಾರ ಧಾನ್ಯ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ದರ ಪಡೆಯುವಲ್ಲಿಯು ವಿಫಲರಾಗುತ್ತಿದ್ದರು. ಈಚೆಗೆ ಸಾವಯವ ಕೃಷಿ ಪದ್ದತಿ ಪ್ರಚಾರಕ್ಕೆ ಬರುತ್ತಿದ್ದಂತೆ ಮತ್ತೆ ರೈತರು ಸಾಂಪ್ರದಾಯಕ ಸಗಣಿ ಗೊಬ್ಬರದ ಬಳಕೆಯತ್ತ ಹೆಚ್ಚು ಒಲವು ತೊರಿಸುತ್ತಿದ್ದಾರೆ ಎನ್ನುತ್ತಾರೆ ರೈತರಾದ ಮುದಿಯಪ್ಪ ಗದಗಿನ ಹಾಗೂ ಶರಣು ಬಂಡಿಹಾಳ.

ಎರಡು ಮೂರು ದಶಕದಿಂದ ಏಳೆಂಟು ಎಮ್ಮೆಗಳನ್ನು ಸಾಕುತ್ತಿದ್ದೇವೆ. ಪ್ರತಿ ವರ್ಷ 10 ರಿಂದ 15 ಟ್ರ್ಯಾಕ್ಟರ್‌ ಸಗಣಿ ಗೊಬ್ಬರ ಸಂಗ್ರಹವಾಗುತ್ತಿದೆ. ಅತ್ಯಂತ ಗುಣಮಟ್ಟದ ಗೊಬ್ಬರಕ್ಕೆ ₹5,500ರಿಂದ ₹6000 ಇದೆ. ಸಾಮಾನ್ಯ ಗೊಬ್ಬರ ₹4 ಸಾವಿರದಿಂದ ₹4500 ವರೆಗೆ ಮಾರಾಟ ಮಾಡುತ್ತಿದ್ದೇವೆ. ರೈತರಿಂದಲೂ ಹೆಚ್ಚು ಬೇಡಿಕೆ ಇದೆ. ಎಮ್ಮೆಯಿಂದ ಬರುವ ಹಾಲು, ಸಗಣೆಯಿಂದ ನಮ್ಮ ಕುಟುಂಬ ನಿರ್ವಹಣೆಗೆ ತುಂಬಾ ಆಸರೆಯಾಗಿದೆ. ಎಮ್ಮೆ ಸಾಕಣೆಕೆಯಿಂದ ಉತ್ತಮ ಆದಾಯ ಬರುತ್ತದೆ. ಆದರೆ ನಿತ್ಯ ತುಂಬಾ ಶ್ರಮಪಡಬೇಕು ಎನ್ನುತ್ತಾರೆ ಸಗಣಿ ಗೊಬ್ಬರ ಮಾರಾಟ ಮಾಡುತ್ತಿರುವ ಡಂಬಳ ಗ್ರಾಮದ ಮಳ್ಳಪ್ಪ ಕೊಳ್ಳಾರ.

ಪ್ರಸ್ತುತ ಸಗಣಿ ಗೊಬ್ಬರ ತಯಾರಿ ಬಹಳಷ್ಟು ಕಡಿಮೆ ಇದೆ. ಸಗಣಿ ಗೊಬ್ಬರಕ್ಕೆ ಮತ್ತೆ ಬಂಗಾರದ ಬೆಲೆ ಬಂದಿದ್ದು, ರೈತರು ಈ ಗೊಬ್ಬರಕ್ಕಾಗಿ ಹುಡುಕಾಡುತ್ತಿದ್ದಾರೆ. ಸಗಣಿ ಗೊಬ್ಬರವನ್ನು ಕೆಲ ರೈತರು ಎತ್ತಿನ ಬಂಡಿಯ ಮೂಲಕ ಗೊಬ್ಬರ ಸಾಗಾಟ ಮಾಡುತ್ತಿದ್ದಾರೆ. ಸಗಣಿ ಬಳಸುವದರಿಂದ ಭೂಮಿಯ ಫಲವತ್ತತ್ತೆ ಹೆಚ್ಚುವುದು ಮತ್ತು ಬೆಳೆಗಳಿಗೆ ರೋಗನಿರೋಧಕ ಶಕ್ತಿಯನ್ನೂ ಒದಗಿಸುತ್ತವೆ. ಪ್ರತಿ ಟ್ರ್ಯಾಕ್ಟರ್‌ ಸಗಣಿ ಗೊಬ್ಬರಕ್ಕೆ ₹5500 ರಂತೆ ಎಕರೆಗೆ ಹತ್ತು ಟ್ರ್ಯಾಕ್ಟರ್‌ ಸಗಣಿ ಗೊಬ್ಬರ ನಮ್ಮ ಜಮೀನಿಗೆ ಹಾಕಿಸಿದ್ದೇನೆ ಎನ್ನುತ್ತಾರೆ ರೈತ ಹನಮಂತ ಬಂಡಿ ಮತ್ತು ಸಿದ್ದಪ್ಪ ಹಡಪದ.

ಡಂಬಳದಲ್ಲಿ ರೈತರು ಟ್ರಾಕ್ಟರ ಮೂಲಕ ಸಗಣಿ ಗೊಬ್ಬರ ಜಮೀನಿಗೆ ಹಾಕಿಸುತ್ತಿರುವ ಚಿತ್ರಣ.
ಡಂಬಳದಲ್ಲಿ ರೈತರು ಟ್ರಾಕ್ಟರ ಮೂಲಕ ಸಗಣಿ ಗೊಬ್ಬರ ಜಮೀನಿಗೆ ಹಾಕಿಸುತ್ತಿರುವ ಚಿತ್ರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT