ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಗುಂದ: ಮಿಶ್ರ ತರಕಾರಿಯಲ್ಲಿ ಯಶಸ್ಸು ಕಂಡ ರೈತ

ಚಂದ್ರಶೇಖರ್ ಭಜಂತ್ರಿ
Published 24 ನವೆಂಬರ್ 2023, 7:05 IST
Last Updated 24 ನವೆಂಬರ್ 2023, 7:05 IST
ಅಕ್ಷರ ಗಾತ್ರ

ಮುಳಗುಂದ: ತರಕಾರಿ ಬೆಲೆ ಏರಿಳಿತದ ಪರಿಣಾಮ ಬೆಳೆಗಾರರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಹೀಗಾಗಿ ಸತತವಾಗಿ ತರಕಾರಿ ಬೆಳೆಯಲು ಬಹುತೇಕ ರೈತರು ಹಿಂದೇಟು ಹಾಕುತ್ತಾರೆ. ಆದರೆ, ಪಟ್ಟಣದ ರೈತ ಲಕ್ಷ್ಮಣ ಹೊರಪೇಟಿ ಅವರು ಕಡಿಮೆ ಭೂಮಿಯಲ್ಲಿ ಮಿಶ್ರ ತರಕಾರಿಗಳನ್ನು 20 ವರ್ಷಗಳಿಂದ ನಿರಂತರವಾಗಿ ಬೆಳೆಯುತ್ತಿದ್ದು, ಉತ್ತಮ ಆದಾಯದ ಜತೆಗೆ ಯಶಸ್ಸು ಸಾಧಿಸಿ ಮಾದರಿ ಕೃಷಿಕರಾಗಿದ್ದಾರೆ.

ಎರಡು ದಶಕಗಳಿಂದ ತರಕಾರಿ ಬೆಳೆಗಾರರಾಗಿರುವ ಲಕ್ಷ್ಮಣ, ಲಾವಣಿ ಮಾಡಿದ 8 ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆ ಕಪ್ಪು ಮಣ್ಣಿನ ನೀರಾವರಿ ಆಶ್ರಿತ ಭೂಮಿಯನ್ನು ಬಳಸಿಕೊಂಡು ತಲಾ 20 ಗುಂಟೆಯಲ್ಲಿ ಹೀರೆ, ಬದನೆ ಮತ್ತು ಟೊಮೆಟೊ ಬೆಳೆದಿದ್ದಾರೆ. ಒಂದೂವರೆ ಎಕರೆ ಭೂಮಿಯನ್ನು ಹದಗೊಳಿಸಿ ಏಕಕಾಲಕ್ಕೆ ಮೂರು ವಿಧದ ತರಕಾರಿ ಬೀಜ ಬಿತ್ತಿ ಪೋಷಣೆ ಮಾಡಿದ್ದಾರೆ. ಪ್ರತಿ ವರ್ಷವೂ ಭೂಮಿಗೆ ಕೊಟ್ಟಿಗೆ ಗೊಬ್ಬರ ಬಳಸುವ ಇವರು ರಾಸಾಯನಿಕ ಬಳಕೆಯನ್ನು ಕಡಿಮೆಗೊಳಿಸಿದ್ದಾರೆ. ಬೀಜ ಬಿತ್ತಿದ ಒಂದೂವರೆ ತಿಂಗಳ ನಂತರ ಕನಿಷ್ಠ 2 ತಿಂಗಳವರೆಗೂ ಫಸಲು ಬರುತ್ತದೆ.

‘ಟೊಮೆಟೊ, ಬದನೆಕಾಯಿ ಹಾಗೂ ಹೀರೆಕಾಯಿಯನ್ನು ವಾರದಲ್ಲಿ 2 ಸಲ ಕಟಾವು ಮಾಡುತ್ತಿದ್ದು, ಒಂದು ಕಟಾವಿಗೆ 15ರಿಂದ 20 ಬಾಕ್ಸ್‌ವರೆಗೂ ಇಳುವರಿ ಬರುತ್ತಿದೆ. ಸ್ಥಳೀಯ ಮತ್ತು ಶಿರಹಟ್ಟಿ ಮಾರುಕಟ್ಟೆಗಳನ್ನು ಅವಲಂಬಿಸಿದ್ದು, ಸದ್ಯ ಉತ್ತಮ ಆದಾಯವೂ ಸಿಗುತ್ತಿದೆ. ವರ್ಷದಲ್ಲಿ ಎರಡು ಬಾರಿ ತರಕಾರಿ ಬೆಳೆಯುತ್ತೇವೆ’ ಎನ್ನುತ್ತಾರೆ ಲಕ್ಷ್ಮಣ ಹೊರಪೇಟಿ.

ತರಕಾರಿ ಬೆಳೆಗಳ ಜತೆಗೆ ಲಭ್ಯವಿರುವ ಕೊಳವೆಬಾವಿ ನೀರನ್ನು ಬಳಸಿಕೊಂಡು ಇನ್ನುಳಿದ ಆರೂವರೆ ಎಕರೆ ಭೂಮಿಯಲ್ಲಿ ಗೋವಿನ ಜೋಳ, ಅಲಸಂದಿ, ಗೋಧಿ, ಭತ್ತ ಮತ್ತು ಹತ್ತಿ ಬೆಳೆ ಬೆಳೆದಿದ್ದಾರೆ.

‘ನೀರು ಹಾಯಿಸಿ ಬೆಳೆಗಳನ್ನು ಪೋಷಣೆ ಮಾಡಿದ್ದು, ಉತ್ತಮ ಬೆಳೆ ಇದೆ. ನಮ್ಮ ಮನೆಯಲ್ಲಿ 10ಕ್ಕೂ ಹೆಚ್ಚು ದನಕರುಗಳಿದ್ದು ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುತ್ತೇವೆ. ಮನೆಯವರು ಸೇರಿ ಕೃಷಿ ಕೆಲಸ ಮಾಡುವುದರಿಂದ ಆಳಿನ ಕೂಲಿ ಉಳಿತಾಯವಾಗಿದೆ. ಶ್ರಮವಹಿಸಿ ದುಡಿದರೆ ಕೃಷಿಯಲ್ಲಿ ಯಾವುದೂ ನಷ್ಟವಿಲ್ಲ. ಒಂದೇ ಬೆಳೆ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಹೀಗಾಗಿ ನೀರಾವರಿ ಇರಲಿ; ಒಣ ಬೆಸಾಯವೇ ಇರಲಿ ಮಿಶ್ರ ಬೆಳೆಗಳನ್ನು ಬೆಳೆಯುವದು ಉತ್ತಮ’ ಎಂದು ಕೃಷಿ ಅನುಭವ ಹಂಚಿಕೊಳ್ಳುತ್ತಾರೆ ಲಕ್ಷ್ಮಣ ಹೊರಪೇಟಿ.

20 ವರ್ಷಗಳಿಂದ ತರಕಾರಿ ಬೆಳೆಯನ್ನು ಮಿಶ್ರವಾಗಿ ಬೆಳೆಯುತ್ತಿದ್ದು ಒಂದಿಲ್ಲ ಒಂದು ತರಕಾರಿಯಿಂದ ಲಾಭ ಸಿಗುತ್ತಿದೆ. ತರಕಾರಿ ನಿರಂತರವಾಗಿ ಬೆಳೆಯುವುದರಿಂದ ಸಾಲವಿಲ್ಲದೇ ನಮ್ಮ ನಿತ್ಯದ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗಿದೆ
ಲಕ್ಷ್ಮಣ ಹೊರಪೇಟಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT