ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆ ವಿಫಲ

ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ಲೇವಡಿ
Last Updated 28 ಜನವರಿ 2023, 6:27 IST
ಅಕ್ಷರ ಗಾತ್ರ

ಗದಗ: ‘ದೇಶ ಒಡೆಯುವ ಶಕ್ತಿಗಳನ್ನು ಕಾಂಗ್ರೆಸ್‌ ಬೆಳೆಸುವ ವಿಷಯ ಜನರಿಗೆ ತಿಳಿದಿದೆ. ಈ ಕಾರಣದಿಂದಲೇ ಭಾರತ್‌ ಜೋಡೊ ಯಾತ್ರೆ ಸಂಪೂರ್ಣ ವಿಫಲಗೊಂಡಿದೆ’ ಎಂದು ಭಾರತೀಯ ಜನತಾ ಪಕ್ಷದ ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ದೇಶದಲ್ಲಿನ ನಕ್ಸಲ್‌, ಆತಂಕವಾದ ಹಾಗೂ ಗಡಿ ಸಮಸ್ಯೆಯ ಮೂಲ ಕಾರಣವೇ ಕಾಂಗ್ರೆಸ್‌. ಅವರು ಮೊದಲಿನಿಂದಲೂ ಪುಷ್ಟಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ದೇಶವನ್ನು ಒಡೆಯುವ ಶಕ್ತಿ ಕಾಂಗ್ರೆಸ್‌ ಎಂಬುದು ಜನರಿಗೆ ಗೊತ್ತಾಗಿರುವುದರಿಂದಲೇ ಭಾರತ್‌ ಜೋಡೊ ಯಾತ್ರೆಗೆ ಜನ ಸಮರ್ಥನೆ ಸಿಗಲಿಲ್ಲ’ ಎಂದು ವಾಗ್ಧಾಳಿ ನಡೆಸಿದರು.

‘ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದೂ ಪದವನ್ನು ಅಶ್ಲೀಲ ಎನ್ನುತ್ತಾರೆ. ನಮ್ಮ ಸೈನಿಕರು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದಾಗ ಕಾಂಗ್ರೆಸ್ಸಿಗರು ದಾಖಲೆ ಕೇಳಿದರು. ರಾಷ್ಟ್ರದ ಏಕತೆ, ಅಖಂಡತೆ ಬಗ್ಗೆ ಕಾಂಗ್ರೆಸ್‌ಗೆ ಅಭಿಮತವಿಲ್ಲ. ಆದರೆ, ಬಿಜೆಪಿ ದೇಶವನ್ನು ಜೋಡಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಪ್ರಜಾಧ್ವನಿ ಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನಕ್ಕೆ ಮಾತ್ರ ವೇದಿಕೆಯಾಗಿದೆ. ಈ ಯಾತ್ರೆ ಮೂಲಕ ಇಬ್ಬರೂ ತಮ್ಮ ನೇತೃತ್ವದ ಪ್ರದರ್ಶನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿದೆ. ಇದರಿಂದಾಗಿ ರಾಜ್ಯದ ಜನರಿಗೆ ಕಾಂಗ್ರೆಸ್‌ ಮೇಲಿನ ವಿಶ್ವಾಸ ಹೋಗಿದೆ’ ಎಂದು ಹರಿಹಾಯ್ದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪೊಲೀಸ್‌ ಹಾಗೂ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಹಲವು ಹಿಂದೂಗಳ ಹತ್ಯೆಯಾಗಿದೆ. ಪಿಎಫ್‌ಐ ಜಾಲ ವಿಸ್ತರಣೆಗೊಂಡಿತು’ ಎಂದು ಆರೋಪ ಮಾಡಿದರು.

‘ಅಧಿಕಾರಕ್ಕೆ ಬಂದರೆ ಆಕಾಶದಲ್ಲಿನ ನಕ್ಷತ್ರಗಳನ್ನೇ ತಂದುಕೊಡುತ್ತೇವೆ ಎಂದು ಕಾಂಗ್ರೆಸ್‌ ಜನರನ್ನು ನಂಬಿಸುತ್ತಿದೆ. ಈಡೇರಿಸಲು ಯಾವುದು ಸಾಧ್ಯ ಇಲ್ಲವೋ ಅಂತಹ ಭರವಸೆಗಳನ್ನು ನೀಡುತ್ತಿದೆ. ಕಾಂಗ್ರೆಸ್‌ ಒಂದು ಸುಳ್ಳು ಭರವಸೆಗಳನ್ನು ನೀಡುವ ವ್ಯಾಪಾರಿ’ ಎಂದು ಲೇವಡಿ ಮಾಡಿದರು.

‘ಕೆಲವು ತಿಂಗಳಿಂದ ಕಾಂಗ್ರೆಸ್‌ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಕಾಮನ್‌ ಮ್ಯಾನ್‌ ಸಿಎಂ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. 40 ಪರ್ಸೆಂಟ್‌ ಆರೋಪ ಕಾಂಗ್ರೆಸ್‌ನ ಸೃಷ್ಟಿ. ಮುಖ್ಯಮಂತ್ರಿಗೆ ಅವಮಾನಿಸುವುದು ರಾಜ್ಯದ ಜನರಿಗೆ ಅವಮಾನಿಸಿದಂತೆ. ರಾಜ್ಯದ ಜನರು ಸಿಎಂ ಪರವಾಗಿದ್ದಾರೆ. ನರೇಂದ್ರ ಮೋದಿ, ಬೊಮ್ಮಾಯಿ, ಬಿ.ಎಸ್‌.ಯಡಿಯೂರಪ್ಪ ಅವರ ಸಹಕಾರದಿಂದ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದ್ದೇವೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಪಕ್ಷ ಕರ್ನಾಟಕವನ್ನು ಎಟಿಎಂ ರೂಪದಲ್ಲಿ ಉಪಯೋಗಿಸಿಕೊಳ್ಳಲು ಯೋಚಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ಉಳಿದಿಲ್ಲ. ಈಗಾಗಿ ಸುಳ್ಳುಗಳನ್ನು ಹೇಳಿಕೊಂಡು ಅಧಿಕಾರಕ್ಕೆ ಬರುವ ಯೋಜನೆ ರೂಪಿಸಿಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಅಂತರದಲ್ಲಿ ಸೋಲು ಕಾಣಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಸರ್ಕಾರವಿರುವ ರಾಜ್ಯಗಳೇ ಅಂಧಕಾರದಲ್ಲಿವೆ’

‘ಕಾಂಗ್ರೆಸ್‌ ಸರ್ಕಾರ ಇದ್ದ ರಾಜ್ಯಗಳು ಅಂಧಕಾರದಲ್ಲಿ ಮುಳುಗಿವೆ. ಮೊದಲು ಆ ರಾಜ್ಯಗಳಲ್ಲಿ ಎಷ್ಟು ಗಂಟೆ ವಿದ್ಯುತ್‌ ಕೊಡುತ್ತಾರೆ ಎಂಬುದನ್ನು ರಾಜ್ಯದ ಕಾಂಗ್ರೆಸ್‌ ಮುಖಂಡರು ತಿಳಿದುಕೊಳ್ಳಲಿ. ರಾಜಸ್ಥಾನದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಓದಲಿಕ್ಕೆ ಅನುಕೂಲ ಆಗುವಷ್ಟು ವಿದ್ಯುತ್‌ ಅನ್ನೂ ಸರಿಯಾಗಿ ನೀಡುತ್ತಿಲ್ಲ’ ಎಂದು ಅರುಣ್‌ ಸಿಂಗ್‌ ಲೇವಡಿ ಮಾಡಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್‌ ಭರವಸೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ರಾಜಸ್ಥಾನ ಹಾಗೂ ಚತ್ತೀಸ್‌ಗಢದ ಪರಿಸ್ಥಿತಿ ನೋಡಿದರೆ ಹೆದರಿಕೆಯಾಗುತ್ತದೆ. ಇಂತಹವರು ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಅಂಧಕಾರಕ್ಕೆ ದೂಡಿ, 10 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT