ಶುಕ್ರವಾರ, ಜನವರಿ 27, 2023
19 °C
ರಾಜ್ಯ ಮಟ್ಟದ ಚಿತ್ರ ಕಲೋತ್ಸವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

‘ಚಿತ್ರಕಲೆಯಿಂದ ಭಾವನಾತ್ಮಕತೆ ವೃದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಚಿಣ್ಣರು– ದೊಡ್ಡವರು ಸೇರಿ ಸಂಭ್ರಮಿಸಿದಂತಹ ದಿನವಿದು. ಮಗುವಿನ ಆಲೋಚನೆ ಯಾವಗಲೂ ಪರಿಶುದ್ಧವಾಗಿರುತ್ತದೆ. ಆದರೆ, ಬೆಳೆಯುತ್ತಾ ಹೋದಂತೆ ಮನುಷ್ಯನೊಳಗಿನ ಮಗುವಿನ ಗುಣಗಳು ಮಾಯವಾಗುತ್ತವೆ. ಚಿತ್ರಕಲೆಯಿಂದ ಮಗುವಿನಲ್ಲಿ ಬೌದ್ಧಿಕತೆ, ಭಾವನಾತ್ಮಕತೆ ಅಂಶಗಳು ಬೆಳೆಯುವುದರ ಜತೆಗೆ ನಿಖರತೆಯ ಕೌಶಲಗಳು ವೃದ್ಧಿಸುತ್ತವೆ’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹೇಳಿದರು.

ನಗರದ ವಿವೇಕಾನಂದ ಭವನದಲ್ಲಿ ಸೋಮವಾರ ನಡೆದ ‘ಚಿಣ್ಣರ ಚಿತ್ರ ಚಿತ್ತಾರ’ ರಾಜ್ಯ ಮಟ್ಟದ ಚಿತ್ರ ಕಲೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮಕ್ಕಳು ವ್ಯಕ್ತಿತ್ವಕ್ಕೆ ಮಾರಕವಾಗುವಂತಹ ಅನ್ಯ ಚಟುವಟಿಕೆಗಳಲ್ಲಿ ತೊಡಗದಂತೆ ಪೋಷಕರು ನಿಗಾವಹಿಸಬೇಕು. ಓದಿನ ಜತೆಗೆ ಅವರಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸಿ ಪೋಷಿಸಿದರೆ ಮಾತ್ರ ನಾವು ಮಕ್ಕಳ ಭಾವನೆಗಳಿಗೆ ರೆಕ್ಕೆ ಕಟ್ಟಬಹುದು. ಇಂತಹದ್ದೊಂದು ಅವಕಾಶ ಕಲ್ಪಿಸಲು ಬಣ್ಣದ ಮನೆ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಲೆ, ಸಂಸ್ಕೃತಿಯ ಬಗ್ಗೆ ಆಸಕ್ತಿಯುಳ್ಳ ಸಮಾನಮನಸ್ಕರು ಸೇರಿ ಕಟ್ಟಿದ ಬಣ್ಣದ ಮನೆ, ಇಂದು ರಾಜ್ಯವೇ ಮೆಚ್ಚುವಂತಹ ಸ್ಪರ್ಧೆ ನಡೆಸಿ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದಲ್ಲಿ ಭೌಗೋಳಿಕ ಸಂಪತ್ತಿನಷ್ಟೇ ಪ್ರಾಮುಖ್ಯತೆಯನ್ನು ಕಲಾ ಸಂಪತ್ತಿಗೂ ನೀಡಬೇಕು. ಚಿತ್ರಕಲೆ ಅಭಿರುಚಿಯನ್ನು ಪ್ರೋತ್ಸಾಹಿಸುವುದರ ಜತೆಗೆ ಇತರೆ ಕಲೆಗಳನ್ನೂ ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಚಿತ್ರಕಲೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು. ಇಲ್ಲಿ ಕಲಾಭಿರುಚಿ ಹೊಂದಿರುವ ಚಿಣ್ಣರು ಹಾಗೂ ನಾಡಿನ ವಿವಿಧೆಡೆಯ ಚಿತ್ರಕಲಾವಿದರ ಸಂಗಮವಾಗಿದೆ’ ಎಂದು ಬಣ್ಣಿಸಿದರು.

‘ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 41 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದಾರೆ. ಅವರೆಲ್ಲರ ಕಲೆಯನ್ನು ನಿಕಷಕ್ಕೆ ಒಳಪಡಿಸಿ, ಅತ್ಯುತ್ತಮವಾದುದನ್ನು ಹೆಕ್ಕಿ ಬಹುಮಾನ ನೀಡಲಾಗುತ್ತಿದೆ. ನಾಲ್ಕು ವಿಭಾಗಗಳಿಂದ ತಲಾ 75 ಪ್ರಶಸ್ತಿಗಳಂತೆ ಒಟ್ಟು 300 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ₹3 ಸಾವಿರ ನಗದು, ಫಲಕವನ್ನು
ಪ್ರಶಸ್ತಿಯು ಒಳಗೊಂಡಿದೆ’ ಎಂದು ತಿಳಿಸಿದರು.

ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಬಣ್ಣದ ಮನೆ ಸಂಸ್ಥಾಪಕ ವಿಜಯ್‌ ಕಿರೇಸೂರು, ಅಧ್ಯಕ್ಷ ಬಾಹುಬಲಿ ಜೈನರ್‌ ಇದ್ದರು.

‘ಬಣ್ಣದ ಮನೆ ಕೆಲಸ ಶ್ಲಾಘನೀಯ’

‘ಗದಗ ಜಿಲ್ಲೆ ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ಕಲೆ, ಕ್ರೀಡೆ, ಸಾಹಿತ್ಯ, ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಪ್ರತಿಯೊಂದು ಮಗುವಿನಲ್ಲಿ ಅದ್ಭುತ ಶಕ್ತಿ ಅಡಕವಾಗಿರುತ್ತದೆ. ಮಕ್ಕಳ ಚಿತ್ರಕಲಾ ಪ್ರತಿಭೆಯನ್ನು ಹೊರತೆಗೆಯಲು ಅಚ್ಚುಕಟ್ಟಾದ ಸ್ಪರ್ಧೆ ನಡೆಸಿರುವ ಬಣ್ಣದ ಮನೆ ತಂಡದ ಸದಸ್ಯರ ಬದ್ಧತೆ ಶ್ಲಾಘನೀಯ’ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

‘ಚಿಣ್ಣರ ಚಿತ್ರ ಚಿತ್ತಾರ’ ರಾಜ್ಯ ಮಟ್ಟದ ಚಿತ್ರ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.

‘ದೇಶದ ಅನೇಕ ಸಾಧಕರ ಜೀವನಚರಿತ್ರೆ ನೋಡಿದಾಗ ಅವರ ಹಿನ್ನೆಲೆ ದೊಡ್ಡದಿರುವುದಿಲ್ಲ. ಬಡ ಕುಟುಂಬದಲ್ಲಿ ಜನಿಸಿ, ಸಾಕಷ್ಟು ಕಷ್ಟಗಳನ್ನು ಅನುಭವಿಸಿಯೂ ಅಮೋಘವಾದುದನ್ನು ಸಾಧಿಸುವ ಮೂಲಕ ಇಡೀ ಜಗತ್ತೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ಎಪಿಜೆ ಅಬ್ದುಲ್‌ ಕಲಾಂ ಅಂತವರು ಸಾಧನೆಗೆ ಸ್ಫೂರ್ತಿಯಾಗಬೇಕು’ ಎಂದು ಹೇಳಿದರು.

ಮಕ್ಕಳಿಗೆ ಸೌಕರ್ಯಗಳನ್ನು ಒದಗಿಸುವುದರ ಜತೆಗೆ ಅವರಲ್ಲಿನ ಆಸಕ್ತಿಯನ್ನು ತಿಳಿದುಕೊಂಡು ಪೋಷಿಸಿದಾಗ ಅವರು ಅಪೂರ್ವವಾದುದನ್ನು ಸಾಧಿಸುತ್ತಾರೆ

ಹಾಲಪ್ಪ ಆಚಾರ್‌, ಸಚಿವ

ಹಲವು ವರ್ಷಗಳಿಂದ ಚಿತ್ರಕಲಾ ಶಿಕ್ಷಕರ ನೇಮಕಾತಿ ಆಗಿಲ್ಲ. ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಸರ್ಕಾರವನ್ನು ಆಗ್ರಹಿಸುವುದು ಕೂಡ ಈ ಕಾರ್ಯಕ್ರಮ ಆಯೋಜನೆಯ ಉದ್ದೇಶಗಳಲ್ಲಿ ಒಂದು

ಎಸ್‌.ವಿ.ಸಂಕನೂರ, ವಿಧಾನ ಪರಿಷತ್‌ ಸದಸ್ಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.