ಬುಧವಾರ, ಆಗಸ್ಟ್ 10, 2022
23 °C
ಸಚಿವ ಸಿ.ಸಿ.ಪಾಟೀಲ ಅಭಯ

‘ಇಬ್ಬರು ಮಕ್ಕಳ ಜವಾಬ್ದಾರಿ ನನ್ನದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ತಂದೆ– ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ನರಗುಂದ ಕ್ಷೇತ್ರದ ಇಬ್ಬರು ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಯೋಗಕ್ಷೇಮದ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಳ್ಳುವುದಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಎರಡನೇ ಅಲೆ ವೇಳೆ ಜಿಲ್ಲೆಯಲ್ಲಿ 56 ಮಕ್ಕಳು ತಂದೆ ಅಥವಾ ತಾಯಿಯನ್ನು(ಸಿಂಗಲ್ ಪೆರೆಂಟ್) ಕಳೆದುಕೊಂಡಿದ್ದಾರೆ. ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಇಬ್ಬರು ಮಕ್ಕಳ ಭವಿಷ್ಯದ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು. ಪಾಲಕರ ಆಸ್ತಿಯನ್ನು ಮಕ್ಕಳ ಹೆಸರಿಗೆ ನೋಂದಾಯಿಸಲು ಅಗತ್ಯದ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿನ ಒಂದು ಮತ್ತು ಎರಡನೇ ಅಲೆಯಲ್ಲಿ ಆಗಿರುವ ಸಾಫಲ್ಯ ಮತ್ತು ವೈಫಲ್ಯಗಳ ಅನುಭವದ ಆಧಾರದ ಮೇಲೆ ಸಂಭವನೀಯ ಮೂರನೇ ಅಲೆ ಎದುರಿಸಲು ಸಶಕ್ತ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಜಿಮ್ಸ್‌ನಲ್ಲಿ 30 ಐಸಿಯು ಜೊತೆಗೆ ಪೀಡಿಯಾಟ್ರಿಕ್‌ ವೆಂಟಿಲೇಟರ್‌ ಬೆಡ್‌ಗಳಿದ್ದು, 10 ಐಸಿಯು, 20 ಎಚ್‌ಡಿಯು, 20 ಆಮ್ಲಜನಕ ಹಾಸಿಗೆ, 10 ನವಜಾತ ಶಿಶು ಆರೈಕೆ ಬೆಡ್ ಹಾಗೂ 10 ಸಾಮಾನ್ಯ ಹಾಸಿಗೆ ಹೊಂದಿರುವ ಒಟ್ಟು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮಕ್ಕಳ ಚಿಕಿತ್ಸೆಗಾಗಿ ಸಿದ್ಧಗೊಳಿಸಲಾಗುತ್ತಿದೆ. ಜಿಮ್ಸ್‌ನಲ್ಲಿ 9 ಮಂದಿ ಮಕ್ಕಳ ತಜ್ಞ ವೈದ್ಯರಿದ್ದು, ಜಿಲ್ಲೆಯಲ್ಲಿ 12 ಮಕ್ಕಳ ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಂಭವನೀಯ ಮೂರನೇ ಅಲೆ ಎದುರಾದಲ್ಲಿ ಹೋಂ ಐಸೊಲೇಷನ್‌ಗೆ ಅವಕಾಶ ಇರುವುದಿಲ್ಲ. ಸೋಂಕಿತರೆಲ್ಲರನ್ನು ಕಡ್ಡಾಯವಾಗಿ ಆರೈಕೆ ಕೇಂದ್ರ ಹಾಗೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.