ಮಂಗಳವಾರ, ಅಕ್ಟೋಬರ್ 27, 2020
20 °C
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ನಿರ್ಧಾರ: ಸರ್ಕಾರದ ಷರತ್ತು ಅನುಷ್ಠಾನ ಕಷ್ಟಸಾಧ್ಯ

ಬೇಡಿಕೆ ಈಡೇರಿಸಿದರಷ್ಟೇ ‘ಆಟ’ ಆರಂಭ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ತೆರಿಗೆಯಲ್ಲಿ ರಿಯಾಯಿತಿ, ಕಠಿಣ ನಿಯಮಗಳ ಸಡಿಲಿಕೆ ಹಾಗೂ ಥಿಯೇಟರ್‌ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವವರೆಗೆ ಚಿತ್ರಮಂದಿರಗಳನ್ನು ತೆರೆಯದಿರಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ (ಕೆಎಫ್‌ಇಎಫ್‌) ನಿರ್ಧರಿಸಿದೆ.

ಇದೇ ವೇಳೆ, ಚಿತ್ರಮಂದಿರ ಪರವಾನಗಿ ನವೀಕರಣ ಶುಲ್ಕ ಕಡಿತಗೊಳಿಸುವಂತೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಪತ್ರಬರೆದಿದೆ.

‘ಅ.15ರಿಂದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅದಕ್ಕೆ ವಿಧಿಸಿರುವ ಷರತ್ತುಗಳನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಡಿಜಿಟಲ್‌ ಟಿಕೆಟಿಂಗ್‌ ವ್ಯವಸ್ಥೆ, ಪ್ರೇಕ್ಷಕರ ವೈಯಕ್ತಿಕ ಮಾಹಿತಿ ಸಂಗ್ರಹ, ಪಿಪಿಇ ಕಿಟ್‌ ಧರಿಸುವುದು ಸೇರಿದಂತೆ ಮೊದಲಾದ ಷರತ್ತುಗಳನ್ನು ಸೀಮಿತ ಸಂಖ್ಯೆಯ ಸಿಬ್ಬಂದಿ ಇರುವ ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಪಾಲಿಸುವುದು ಸಾಧ್ಯವಿಲ್ಲ’ ಎಂದು ಕೆಎಫ್‌ಇಎಫ್‌ ಅಧ್ಯಕ್ಷ ಆರ್‌.ಆರ್‌.ಓದುಗೌಡರ ಹೇಳಿದರು.

‘ಚಿತ್ರ ಮಂದಿರಗಳಿಗೆ ಸಂಬಂಧಿಸಿ ದಂತೆ ನಗರದಿಂದ ನಗರಕ್ಕೆ ತೆರಿಗೆ ಪ್ರಮಾಣದಲ್ಲಿ ದುಪ್ಪಟ್ಟು ವ್ಯತ್ಯಾಸವಿದೆ. ಉದ್ಯಮ ಅಂತ ಪರಿಗಣಿಸಿದ್ದರೂ ಥಿಯೇಟರ್‌ನವರು ಈಗಲೂ ಕಮರ್ಷಿಯಲ್‌ ವಿದ್ಯುತ್‌ ಶುಲ್ಕವನ್ನೇ ಭರಿಸಬೇಕಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಚಿತ್ರಮಂದಿರಗಳ ಪರವಾನಗಿ ನವೀಕರಣ ಶುಲ್ಕವನ್ನು ಹೆಚ್ಚಿಸಿದ್ದು, ಇದರ ಹೊರೆ ಹೊರುವುದು ಕಷ್ಟವಾಗಿದೆ. 5 ಸಾವಿರ ಚದರ ಅಡಿಯ ಚಿತ್ರಮಂದಿರ ಇದ್ದರೆ ಅದಕ್ಕೆ ನಾವು ಈ ಮೊದಲು ಐದು ವರ್ಷಕ್ಕೆ ₹5 ಸಾವಿರ ನವೀಕರಣ ಶುಲ್ಕ ತುಂಬುತ್ತಿದ್ದೆವು. ಈಗ ಆ ಶುಲ್ಕವನ್ನು ವಿಪರೀತವಾಗಿ ಹೆಚ್ಚಿಸಿರುವುದಲ್ಲದೇ, ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದ್ದಾರೆ. ಹೊಸ ಆದೇಶದ ಪ್ರಕಾರ ನಾವು ಪ್ರತಿ ವರ್ಷ ₹1.25 ಲಕ್ಷ ನವೀಕರಣ ಶುಲ್ಕ ಭರಿಸಬೇಕಿದೆ’ ಎಂದು ಅವರು ಹೇಳಿದರು.

‘ಈ ಮೊದಲು ನಿರ್ಮಾಪಕ– ವಿತರಕ ಮತ್ತು ಪ್ರದರ್ಶಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಪಕ ಮತ್ತು ಪ್ರದರ್ಶಕರ ನಡುವೆ ನೇರ ಸಂಪರ್ಕ ಏರ್ಪಟ್ಟಿರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ’ ಎನ್ನುತ್ತಾರೆ ಅವರು.

‘ಈಗ ನಿರ್ಮಾಪಕರು ಪ್ರದರ್ಶಕರಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಚಿತ್ರ ಬಿಡುಗಡೆ ಮಾಡಬೇಕೆಂದರೆ ಅಡ್ವಾನ್ಸ್‌, ಮಿನಿಮಮ್‌ ಗ್ಯಾರಂಟಿ ಅಥವಾ ನಾನ್‌ ರೀಫಂಡೆಬಲ್‌ ಅಮೌಂಟ್‌ ನೀಡಬೇಕು. ಬಿ ಮತ್ತು ಸಿ ಸೆಂಟರ್‌ನವರು ಹೀಗೆ ಹಣ ಕೊಟ್ಟು, ಕೈ ಸುಟ್ಟುಕೊಂಡು ಕೊನೆಗೆ ಚಿತ್ರಮಂದಿರಗಳನ್ನೇ ಮುಚ್ಚಿದ್ದಾರೆ. ಈಗಿರುವ ಪದ್ಧತಿ ಕೈಬಿಟ್ಟು ಶೇಕಡಾವಾರು ಮಾದರಿ ಜಾರಿಗೊಳಿಸಬೇಕು ಎಂಬುದು ಎಲ್ಲ ಥಿಯೇಟರ್‌ ಮಾಲೀಕರ ಒತ್ತಾಯವಾಗಿದೆ’ ಎಂದು ಅವರು ಹೇಳಿದರು.

* ಸಂಘದಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳ ಮಾಲೀಕರು ಸದಸ್ಯರಾಗಿದ್ದು, ಬೆಂಗಳೂರು ನಗರ ಹೊರತು ಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅ.15ರಿಂದ ಚಿತ್ರಮಂದಿಗಳು ತೆರೆಯುವುದಿಲ್ಲ.
-ಆರ್‌.ಆರ್‌.ಓದುಗೌಡರ, ಕೆಎಫ್‌ಇಎಫ್‌ ಅಧ್ಯಕ್ಷ

ನಿರ್ಧಾರಕ್ಕೆ ಬದ್ಧ: ಉಮೇಶ್‌ ಕಾರಂತ್‌

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲಕ್ಕೆ ರಾಜ್ಯದಲ್ಲಿರುವ 625 ಚಿತ್ರಮಂದಿರಗಳ ಪೈಕಿ 500 ಚಿತ್ರಮಂದಿರಗಳ ಮಾಲೀಕರು ಸದಸ್ಯರಾಗಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಕಾರವಾರ, ಮಂಗಳೂರು, ಉಡುಪಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಮಗಳೂರು ಸೇರಿದಂತೆ ಉಳಿದ ಹಲವಾರು ಜಿಲ್ಲೆಗಳಲ್ಲೂ ಅ.15ರಿಂದ ಪ್ರದರ್ಶನ ಇರುವುದಿಲ್ಲ ಎಂದು ಗದಗ ಶ್ರೀಕೃಷ್ಣ ಚಿತ್ರಮಂದಿರದ ಮಾಲೀಕ ಉಮೇಶ್‌ ಎಸ್‌.ಕಾರಂತ್‌ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿರುವ ಚಿತ್ರಮಂದಿರಗಳು ಮಾತ್ರ ಈ ಮಂಡಳದ ಸದಸ್ಯರಲ್ಲ. ಅವರು ಅ.15ರಿಂದ ಚಿತ್ರಮಂದಿರಗಳನ್ನು ತೆರೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಈ ಮೊದಲೇ ಹೇಳಿದಂತೆ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೆ ಚಿತ್ರಮಂದಿರಗಳನ್ನು ತೆರೆಯುವುದಿಲ್ಲ ಎಂಬ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು