ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಗದಗ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಳ ಸಂಖ್ಯೆ ಇಳಿಮುಖ

ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ರೋಗಿಗಳಿಗೆ ತೀವ್ರ ತೊಂದರೆ
Last Updated 1 ಏಪ್ರಿಲ್ 2020, 14:36 IST
ಅಕ್ಷರ ಗಾತ್ರ

ಗದಗ: ಲಾಕ್‌ಡೌನ್‌ ಘೋಷಣೆಯಾದ ನಂತರ ಇಲ್ಲಿನ ಮಲ್ಲಸಮುದ್ರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಪ್ರತಿನಿತ್ಯ ಜಿಲ್ಲಾ ಆಸ್ಪತ್ರೆಗೆ700ರಿಂದ 800 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಬರುತ್ತಿದ್ದರು. ಕಳೆದೊಂದು ವಾರದಿಂದ ಇದು ಸರಾಸರಿ 100ಕ್ಕೆ ಇಳಿದಿದೆ.

ಗದಗ ನಗರದಿಂದ 5 ಕಿ.ಮೀ. ದೂರದಲ್ಲಿ ಜಿಲ್ಲಾ ಆಸ್ಪತ್ರೆ ಇದ್ದು, ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ರೋಗಿಗಳಿಗೆ ಇಲ್ಲಿಗೆ ಬರಲು ತೀವ್ರ ಸಮಸ್ಯೆಯಾಗಿದೆ. ಹೊರರೋಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರಲು ಇದೇ ಪ್ರಮುಖ ಕಾರಣ.

ಕೆಮ್ಮು, ನೆಗಡಿ, ಜ್ವರ ಸೇರಿ ತುರ್ತು ಚಿಕಿತ್ಸೆಗೆ ಅಗತ್ಯ ಕ್ರಮ ಜರುಗಿಸಲಾಗಿದ್ದು, ಯಾವುದೇ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ಬಂದರೂ ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ‘ಸಾಮಾಜಿಕ ಅಂತರ’ ಕಾಯ್ದುಕೊಂಡು ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನೂ ಇನ್‌ಫ್ರಾರೆಡ್‌ ಥರ್ಮಾಮೀಟರ್‌ ಬಳಸಿ ಜ್ವರ ಇದೆಯೇ ಎಂದು ಪರೀಕ್ಷಿಸಿದ ಬಳಿಕವೇ, ಆಸ್ಪತ್ರೆ ಒಳಗೆ ಕಳುಹಿಸಲಾಗುತ್ತಿದೆ.

ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ 13 ಜನರಿಗೆ ನಿಗಾದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಸಮೀಪದಲ್ಲೇ ಇರುವ ಮೊರಾರ್ಜಿ ವಸತಿ ಶಾಲೆಯಲ್ಲಿ 150 ಹಾಸಿಗೆ ಸಾಮರ್ಥ್ಯದ ಕ್ವಾರಂಟೈನ್‌ ಕೇಂದ್ರಕ್ಕೆ ಅವಶ್ಯಕ ಕ್ರಮ ಜರುಗಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಕ್ರಿಮಿನಾಶಕ ಸಿಂಪಡಿಸಿ, ಸ್ವಚ್ಛಗೊಳಿಸಲಾಗುತ್ತಿದೆ.

ಲಾಕ್‌ಡೌನ್‌ ಘೋಷಣೆಯಾಗಿ ಒಂದು ವಾರ ಕಳೆದಿದ್ದು, ಇದುವರೆಗೂ, ಕೊರೊನಾ ಸೋಂಕಿತರು ಯಾರೂ ಜಿಲ್ಲೆಯಲ್ಲಿ ಇಲ್ಲದಿರುವುದು ಜಿಲ್ಲಾಡಳಿತಕ್ಕೆ, ವೈದ್ಯರಿಗೆ ತುಸು ಸಮಾಧಾನ ತಂದಿದೆ. ಆದರೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿರುವುದು ಕಳವಳಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ಚಿಂತನೆ ನಡೆಸಲಾಗಿದೆ.

ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ 189 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಹೆರಿಗೆ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT