ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉದ್ಯಮದ ಮೇಲೆ ಕೋವಿಡ್‌ ಕರಿನೆರಳು

ಕೈಗೆ ಬಂದ ಫಸಲು ಸಾಗಿಸಲು ಆಗದ ಸ್ಥಿತಿ: ಹೂವು, ಹಣ್ಣು, ತರಕಾರಿಗೆ ಬೇಡಿಕೆ ಕುಸಿತ
Last Updated 10 ಮೇ 2021, 5:52 IST
ಅಕ್ಷರ ಗಾತ್ರ

ಗದಗ: ಕೃಷಿ ಕ್ಷೇತ್ರದೊಂದಿಗೆ ಬೆಸೆದುಕೊಂಡಿದ್ದ ಹಲವು ಕ್ಷೇತ್ರಗಳ ಕೊಂಡಿಯನ್ನುಜನತಾ ಕರ್ಫ್ಯೂ ಕತ್ತರಿಸಿದ್ದು, ಇದರಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಕರ್ಫ್ಯೂನಿಂದಾಗಿ ಹೋಟೆಲ್‌ ಉದ್ಯಮ ಸ್ಥಗಿತಗೊಂಡಿದೆ. ಅದ್ಧೂರಿ ಮದುವೆಗಳಿಗೆ ನಿರ್ಬಂಧ ಬಿದ್ದಿದೆ. ಸರಳ ಮದುವೆಗಳು ನಡೆಯುತ್ತಿರುವ ಕಾರಣ ಹೂವು, ಹಣ್ಣು, ತರಕಾರಿಗಳ ಬೇಡಿಕೆ ಕುಸಿದಿದೆ. ಹಾಗಂತ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಏನೂ ಕಡಿಮೆ ಆಗಿಲ್ಲ. ದಲ್ಲಾಳಿಗಳು ಹೂವು, ಹಣ್ಣು, ತರಕಾರಿ ಬೆಲೆಯನ್ನು ಮನಸೋ ಇಚ್ಛೆ ಏರಿಸಿ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತ ಮತ್ತು ಗ್ರಾಹಕ ಇಬ್ಬರಿಗೂ ಬರೆ ಬಿದ್ದಿದೆ.

ಜಿಲ್ಲೆಯ ಲಕ್ಕುಂಡಿ ಭಾಗದಲ್ಲಿ ಹೆಚ್ಚಿನ ರೈತರು ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ಆದರೆ, ಕೋವಿಡ್‌ ಕರ್ಫ್ಯೂ ಕಾರಣದಿಂದಾಗಿ ಹೂವಿನ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ಜನತಾ ಕರ್ಫ್ಯೂ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಇದೆಯಾದರೂ, ಜನ ಸಂಚಾರಕ್ಕೆ ನಿರ್ಬಂಧ ಹಾಗು ಸಮರ್ಪಕವಾದ ಸಾರಿಗೆ ವ್ಯವಸ್ಥೆ ಲಭ್ಯವಿಲ್ಲದ ಕಾರಣ ಹೂವು ಹೊಲದಲ್ಲೇ ಕೊಳೆಯುತ್ತಿದೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಹೂವು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾನೆ.

‘ಲಾಕ್‌ಡೌನ್‌ನಿಂದಾಗಿ ರೈತರ ಬದುಕಿನ ಮೇಲೆ ಸಂಪೂರ್ಣ ಹೊಡೆತ ಬಿದ್ದಿದೆ. ಗೊಬ್ಬರ ಖರೀದಿ ಮಾಡುವ ಋತು ಇದು. ಬೆಲೆ ಹೆಚ್ಚುವ ಭೀತಿಯೂ ಎದುರಾಗಿದೆ. ಸುರುಪಾನ, ಗೋವಿನಜೋಳ, ಹತ್ತಿ, ಕಡ್ಲಿ, ಜೋಳ, ಗೋಧಿ ಎಲ್ಲವೂ ಚೆನ್ನಾಗಿ ಬೆಳೆದು ಕೈ ಸೇರಿದೆ. ಆದರೆ, ಅದನ್ನು ಮಾರುಕಟ್ಟೆಗೆ ಸಾಗಿಸಲು ಆಗುತ್ತಿಲ್ಲ. ಜನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಖರೀದಿದಾರರೂ ಸಿಗುತ್ತಿಲ್ಲ’ ಎನ್ನುತ್ತಾರೆ ರೈತ ಮುಖಂಡ ವಿಜಯ್‌ ಕುಲಕರ್ಣಿ.

ಮಾರಾಟಗಾರರಿಗೆ ಹೊಡೆತ

ಲಕ್ಷ್ಮೇಶ್ವರ: ಕಳೆದ ವರ್ಷದ ಲಾಕ್‍ಡೌನ್ ಶಾಕ್‍ನಿಂದ ಇನ್ನೂ ತಾಲ್ಲೂಕಿನ ತರಕಾರಿ, ಹೂವು-ಹಣ್ಣು ಮಾರಾಟಗಾರರು ಹೊರ ಬಂದಿಲ್ಲ. ಅಷ್ಟರಲ್ಲಿಯೇ ಈ ವರ್ಷವೂ ಲಾಕ್‍ಡೌನ್ ಘೋಷಣೆ ಆಗಿದ್ದು ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ 139 ಹೆಕ್ಟೇರ್‌ನಲ್ಲಿ ತರಕಾರಿ, 126 ಹೆಕ್ಟೇರ್‌ನಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಸದ್ಯ ತರಕಾರಿ, ಹೂವು ಹಾಗೂ ಹಣ್ಣುಗಳು ಮಾರಾಟಕ್ಕೆ ಬಂದಿವೆ. ಆದರೆ ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆ ಸಂಪೂರ್ಣ ಹದಗೆಟ್ಟಿದ್ದು ಕೆಲವು ಕಡೆ ಗಲಾಟೆ ಹೂವು ಕೇಳುವವರಿಲ್ಲದ ಕಾರಣ ರೈತರು ಗಲಾಟೆ ಬೆಳೆದ ಭೂಮಿಯನ್ನೇ ಹರಗಿದ್ದಾರೆ.

ಬೇಡಿಕೆಗಿಂತ ಹೆಚ್ಚು ತರಕಾರಿ ಬೆಳೆದಿದೆ. ಆದರೆ ಅದನ್ನು ಮಾರುಕಟ್ಟೆಗೆ ತರಲು ತೊಂದರೆ ಆಗುತ್ತಿದೆ. ಹೀಗಾಗಿ ವ್ಯಾಪಾರಸ್ಥರು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ನೇರ ಹೊಡೆತ ಗ್ರಾಹಕರೂ ಮೇಲೂ ಆಗಿದೆ. ಅದರಂತೆ ಹಣ್ಣುಗಳ ಪರಿಸ್ಥಿತಿಯೂ ಇದೇ ಆಗಿದೆ. ಎಲ್ಲೇ ಹೋದರೂ ಕೊರೊನಾ ರೈತರನ್ನು ಕಟ್ಟಿ ಹಾಕಿದ್ದು ಅವರಿಗೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ.

‘ಟೊಮೊಟೊ ಹಣ್ಣು ಸಾಕಷ್ಟು ಬೆಳೆದಿದೆ. ಆದರೆ ಪ್ಯಾಟಿಗೆ ತಗೊಂಡ ಹೋಗದ ಸಮಸ್ಯೆ ಆಗೇತ್ರಿ. ಹಿಂಗಾಗಿ ಭಾಳಷ್ಟು ಹಣ್ಣನ್ನು ಹರೀಲಾರದ ಹೊಲದಾಗ ಬಿಟ್ಟೇವ್ರೀ’ ಎಂದು ರೈತ ಶಿವನಗೌಡ ಪಾಟೀಲ ಹೇಳಿದರು.‌

ರೈತರಿಗೆ ಶಾಕ್‌

ರೋಣ: ಕರ್ಫ್ಯೂನಿಂದಾಗಿ ತಾಲ್ಲೂಕಿನ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಕಾರಣದಿಂದಾಗಿ ರೈತರಿಗೆ ತೀವ್ರ ತೊಂದರೆ ಎದುರಾಗಿದೆ.

ಒಂದು ಚೀಲ ರಸಗೊಬ್ಬರಕ್ಕೆ ₹400ರಿಂದ ₹500ಕ್ಕೂ ಅಧಿಕ ಬೆಲೆ ಹೆಚ್ಚಳವಾಗಿದ್ದು, ಈ ಬೆಲೆಯನ್ನು ಕಂಡು ರೈತರು ತಬ್ಬಿಬ್ಬಾಗಿದ್ದಾರೆ. ಕೊರೊನಾ ಪ್ರಭಾವದಿಂದಾಗಿ ಕಚ್ಚಾವಸ್ತುಗಳು ಸರಿಯಾಗಿ ದೊರೆಯದೆ ಇರುವ ಕಾರಣದಿಂದಾಗಿ ಬೆಲೆ ಏರಿಕೆ ಆಗಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ವೇಳೆ ಅಂದರೆ ಜೂನ್‌ನಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿತ್ತು. ಈಗ ರೈತರು ಗೊಬ್ಬರ ಖರೀದಿ ಮಾಡುವ ಸಮಯವಲ್ಲವಾದರೂ ಸಹ ಅವರಿಗೆ ಬೆಲೆ ಏರಿಕೆ ಬಿಸಿ ನೇರವಾಗಿ ತಟ್ಟಿದೆ. ಇದರ ಜೊತೆಗೆ ಔಷಧಗಳು, ಹಾಳೆ, ಕುಂಟಿ, ಕುರಗಿಗಳ ಬೆಲೆಯೂ ಹೆಚ್ಚಿದೆ.

ಜನರಿಗೂ ಸಂಕಷ್ಟ

ನರಗುಂದ: ಕೊರೊನಾ ಎರಡನೇ ಅಲೆ ತಾಲ್ಲೂಕಿನಲ್ಲಿ ಸಾಕಷ್ಟು ತೊಂದರೆ ಮಾಡಿದೆ. ತರಕಾರಿಗಳ ಬೆಲೆ ಗಗನಕ್ಕೆ ಏರಿದೆ. ಅಗತ್ಯ ವಸ್ತುಗಳು ಸಕಾಲಕ್ಕೆ ಸಿಗುತ್ತಿಲ್ಲ.

ತರಕಾರಿ ವ್ಯಾಪಾರಿಗಳು ಹಳ್ಳಿ ಹಳ್ಳಿಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಅವರು ಗಾಡಿ ಬಾಡಿಗೆ ಸಮೇತ ಗ್ರಾಹಕರಿಂದ ವಸೂಲಿ ಮಾಡುವುದು ಸಾಮಾನ್ಯ. ಈ ಕಾರಣದಿಂದಾಗಿ ಗ್ರಾಹಕರು ತರಕಾರಿಯನ್ನು ದುಪ್ಪಟ್ಟು ಹಣ ಕೊಟ್ಟು ಖರೀದಿಸಬೇಕಿದೆ.

ಲಾಕ್‌ಡೌನ್ ಪರಿಣಾಮ ಎಪಿಎಂಸಿ ವಹಿವಾಟು ನಿಗದಿತ ಅವಧಿಗೆ ಸೀಮಿತಗೊಂಡಿರುವುದರಿಂದ ಹೊರಗಿನ ಖರೀದಿದಾರರು ಬರುತ್ತಿಲ್ಲ. ಸಾಗಣೆಯೂ ಅಷ್ಟಕ್ಕಷ್ಟೆ. ಇದರಿಂದ ರೈತರು ಬೆಳೆದ ಧಾನ್ಯಗಳು ಹಾಗೂ ವಿವಿಧ ಬೆಳೆಗಳ ಬೆಲೆ ಕುಸಿದಿದೆ.

ಲಾಕ್‌ಡೌನ್ ಎಲ್ಲರಿಗೂ ಸಂಕಷ್ಟ ತಂದೊಡ್ಡಿದ್ದು ರಾಜ್ಯ ಹಾಗೂ
ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೆ ತುರ್ತಾಗಿ ₹10 ಸಾವಿರ ಪ್ಯಾಕೇಜ್ ಘೋಷಿಸಬೇಕು ಎಂದು ಪಟ್ಟಣದ ಸಿದ್ದು ನಂದಿ ಆಗ್ರಹಿಸುತ್ತಾರೆ.

ಬೆಲೆ ಏರಿಕೆ

ಶಿರಹಟ್ಟಿ:ತಾಲ್ಲೂಕಿನಲ್ಲಿ ರೈತರು ಬೆಳೆದ ತರಕಾರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ತರಕಾರಿ ಬೆಲೆಗಳು ದುಪ್ಪಟ್ಟಾಗಿವೆ. ಲಾಕ್‌ಡೌನ್‌ನಲ್ಲಿ ಹಣ ಗಳಿಸುವ ಉದ್ದೇಶದಿಂದ ವ್ಯಾಪಾರಿಗಳು ರೈತರಲ್ಲಿಗೆ ಹೋಗಿ ಕಡಿಮೆ ದರ ನೀಡಿ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ತಾಲ್ಲೂಕಿನ ಮಜ್ಜೂರು ಗ್ರಾಮದ ರೈತ ಮಂಜುನಾಥ ಶಿರಹಟ್ಟಿ ತಮ್ಮ ಹೊಲದಲ್ಲಿ ಬೆಳೆದಿರುವ ಟೊಮೊಟೊ ಮತ್ತು ಮುಳಗಾಯಿ ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತರಕಾರಿ ವ್ಯಾಪಾರಿಗಳ ತಮ್ಮ ಹೊಲಕ್ಕೆ ಬಂದು ತರಕಾರಿಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಹಣ ನೀಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಷ್ಟದಲ್ಲಿ ಬೆಳೆಗಾರ

ಮುಳಗುಂದ: ಬೇಸಿಗೆ ಸಮಯದಲ್ಲಿ ಟೊಮೆಟೂ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನ ಈ ಭಾಗದಲ್ಲಿ ರೈತರು ಬೆಳೆದಿದ್ದಾರೆ. ಆದರೆ ಕೋವಿಡ್ ಕಾರಣ ವಾರದ ಸಂತೆಯನ್ನ ರದ್ದು ಪಡಿಸಲಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ಬೆಳೆಗಾರರು ಪರಿತಪಿಸುವಂತಾಗಿದೆ. ರೈತರು ಬೆಳೆದ ತರಕಾರಿಗೆ ಆಯಾ ಸಂತೆ ದಿನವೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಗ್ರಾಹಕರಿಗೂ, ರೈತರಿಗೂ ಪ್ರಯೋಜನ ಸಿಗುತ್ತದೆ ಎಂದು ರೈತ ಜಗದೀಶ ಬಿಜಾಪೂರ ಆಗ್ರಹಿಸಿದರು.

ಬೇಗ ಬಂದರೆ ಮಾತ್ರ ಮಾರಾಟ

ಗಜೇಂದ್ರಗಡ: ಪಟ್ಟಣದಲ್ಲಿ ಕರ್ಫ್ಯೂನಿಂದಾಗಿ ರೈತರು, ವ್ಯಾಪಾರಿಗಳು, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ಕರ್ಫ್ಯೂನಿಂದಾಗಿ ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ರೈತರು ನಸುಕಿನಲ್ಲಿ ಹೊಲಗಳಿಗೆ ಹೋಗಿ ತರಕಾರಿಗಳನ್ನು ಹರಿದು ಮಾರುಕಟ್ಟೆಗೆ ತರಬೇಕು. ಕೂಲಿ ಕೆಲಸದವರು ಬೇಗ ಬರದಿದ್ದರೆ. ತಡವಾಗಿ ಮಾರುಕಟ್ಟೆಗೆ ಹೋದರೆ ಹರಾಜು ಮುಗಿದಿರುತ್ತದೆ. ಅಲ್ಲದೆ ವ್ಯಾಪಾರಿಗಳ ಸ್ಥಿತಿಯೂ ಭಿನ್ನವಾಗಿಲ್ಲ. ತಳ್ಳುವ ಬಂಡಿ ಇರುವವರು ಓಣಿ ಓಣಿಗಳಲ್ಲಿ ಮಾರಾಟ ಮಾಡುತ್ತಾರೆ. ಆದರೆ ಹಳ್ಳಿಗಳಿಂದ ಬರುತ್ತಿದ್ದ ಗ್ರಾಹಕರು ಈಗ ಬರುತ್ತಿಲ್ಲ ಎಂಬ ದೂರುಗಳು ವ್ಯಾಪಾರಿಗಳಿಂದ ಕೇಳಿ ಬರುತ್ತಿವೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಪಟ್ಟಣದಲ್ಲಿ ಕರ್ಫ್ಯೂನಿಂದಾಗಿ ಜನರಿಲ್ಲದೆ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೆ ಮುಂದಿನ ತಿಂಗಳಿಂದ ಮುಂಗಾರು ಬಿತ್ತನೆ ಆರಂಭಗೊಳ್ಳುತ್ತವೆ. ಇದೆ ಪರಿಸ್ಥಿತಿ ಮುಂದುವರಿದರೆ ರೈತರಿಗೆ ಬೀಜ, ಗೊಬ್ಬರ ಖರೀದಿಗೆ ತೊಂದರೆಗಳು ಉಂಟಾಗಬಹುದು ಎನ್ನಲಾಗುತ್ತಿದೆ.

ಕಷ್ಟದಲ್ಲಿ ಕೃಷಿಕರ ಬದುಕು

ನರೇಗಲ್:‌ ಕೊರೊನಾ ಎರಡನೇ ಅಲೆಯಿಂದಾಗಿ ಕೃಷಿ ಉತ್ಪನ್ನಗಳು ಸಮಯಕ್ಕೆ ಸರಿಯಾಗಿ ಸಿಗದೇ ಇರುವುದರಿಂದ ನರೇಗಲ್‌ ಹೋಬಳಿಯ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ತೋಟದ ರೈತರಿಗೆ ಸದ್ಯ ಅವಶ್ಯಕವಾಗಿರುವ ಗೊಬ್ಬರ, ಬೀಜ, ಔಷಧಿಗಳ ಬೆಲೆ ದುಪ್ಪಟ್ಟಾಗಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಬರುತ್ತಿದ್ದ ವಲಸೆ ಕಮ್ಮಾರರು ಈ ಸಲ ಬರದೇ ಇರುವುದಿಂದ ಕೃಷಿ ಚಟುವಟಿಕೆಗಳಿಗೆ ಬೇಕಾದ ಕುಡುಗೋಲು, ಕೊಡಲಿ, ಕುಂಟೆ, ಕುಡ, ತಾಳ, ಪಿಕಾಸಿ, ಗುದ್ದಲಿ, ಚಾಕು, ಕೋತಾ, ಸಲಿಕೆ, ಬಿತ್ತಣಿಕೆ ಮಾಡಿಕೊಡುವವರು ಹಾಗೂ ಹರಿತಗೊಳಿಸುವರಿಲ್ಲದೆ ಪರದಾಡುವಂತಾಗಿದೆ. ಜಾನುವಾರುಗಳಿಗೆ ಕಾಲ-ಕಾಲಕ್ಕೆ ತಕ್ಕಂತೆ ಸಿಗುತ್ತಿದ್ದ ಔಷಧಿಗಳು ಸಿಗದೆ ಕುರಿಗಾಯಿಗಳು, ಗೋಪಾಲಕರು ಚಿಂತಿಸುವಂತಾಗಿದೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್‌, ಬಸವರಾಜ ಪಟ್ಟಣಶೆಟ್ಟಿ, ಶ್ರೀಶೈಲ ಎಂ. ಕುಂಬಾರ, ಡಾ.ಬಸವರಾಜ ಹಲಕುರ್ಕಿ, ಖಲೀಲಅಹ್ಮದ ಶೇಖ, ಚಂದ್ರಶೇಖರ ಭಜಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT