ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರೆಲ್ಲರೂ ಗುಣಮುಖ; ತಗ್ಗಿದ ಆತಂಕ

12 ದಿನಗಳಿಂದ ಜಿಲ್ಲೆಯಲ್ಲಿ ಹೊಸ ಕೊರೊನಾ ಪ್ರಕರಣ ಇಲ್ಲ
Last Updated 9 ಮೇ 2020, 14:54 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಪಾಲಿಗೆ ಶನಿವಾರ ಕೊರೊನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಜಯ ಲಭಿಸಿದ ದಿನ. ಸೋಂಕು ದೃಢಪಟ್ಟು ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಬಿಡುಗಡೆಯಾಗಿ ಮನೆಗೆ ಮರಳಿದರು.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರೂ ಗುಣಮುಖರಾದಂತಾಗಿದೆ. ಇದರ ಜತೆಗೆ ಏ.28ರಿಂದ ಮೇ 9ರವರೆಗೆ ಅಂದರೆ ಕಳೆದ 12 ದಿನಗಳಲ್ಲಿ ಯಾವುದೇ ಹೊಸ ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗದಿರುವುದು, ಜಿಲ್ಲಾಡಳಿತಕ್ಕೆ, ಜಿಲ್ಲೆಯ ಜನರಿಗೆ ದೊಡ್ಡ ಮಟ್ಟದಲ್ಲಿ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಏ. 6ರಂದು 80 ವರ್ಷದ ವೃದ್ಧೆಗೆ (ಪಿ–166) ಸೋಂಕು ದೃಢಪಟ್ಟಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಏ. 8ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಸಂಪರ್ಕಕ್ಕೆ ಬಂದ 59 ವರ್ಷದ ಮಹಿಳೆಗೆ (ಪಿ–304) ಏ.16ರಂದು ಸೋಂಕು ಇರುವುದು ದೃಢಪಟ್ಟಿತ್ತು.

ಸೋಂಕಿನಿಂದ ಗುಣಮುಖರಾಗಿ ಪಿ–304 ಮೇ 1ರಂದು ಬಿಡುಗಡೆಗೊಂಡಿದ್ದರು. ಇವರ ದ್ವಿತೀಯ ಸಂಪರ್ಕಕ್ಕೆ ಬಂದ ಗದುಗಿನ ರಂಗನವಾಡ ಪ್ರದೇಶದ ನಿವಾಸಿ 42 ವರ್ಷದ ಪುರುಷ (ಪಿ–370), ಇವರ ದ್ವಿತೀಯ ಸಂಪರ್ಕಕ್ಕೆ ಬಂದ 24 ವರ್ಷದ ಯುವಕ (ಪಿ–396) ಮತ್ತು ನಗರದ ಗಂಜಿ ಬಸವೇಶ್ವರ ಓಣಿ ನಿವಾಸಿ 75 ವರ್ಷದ ವೃದ್ಧ (ಪಿ-514) ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

ಬಿಡುಗಡೆಗೆ ಮುನ್ನ ಈ ಮೂವರ ಗಂಟಲು ದ್ರವದ ಮಾದರಿಯನ್ನು ಮತ್ತೊಮ್ಮೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಮತ್ತು ಧಾರವಾಡದ ಡಿಮ್ಹಾನ್ಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಿ, ‘ನೆಗಟಿವ್’ ಆಗಿರುವುದನ್ನು ಖಚಿತಪಡಿಸಿ ಬಿಡುಗಡೆ ಮಾಡಲಾಗಿದೆ’ ಎಂದು ಜಿಮ್ಸ್‌ ನಿರ್ದೇಶಕ ಪಿ.ಎಸ್‌ ಭೂಸರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದೇ ಪ್ರದೇಶದ ನಿವಾಸಿಗಳು
ಸೋಂಕು ಗುಣಮುಖರಾಗಿ ಮನೆಗೆ ಮರಳಿರುವ ಪಿ–304, ಪಿ–370 ಮತ್ತು ಪಿ–396 ಇವರು ಮೂವರೂ ಗದುಗಿನ ರಂಗನವಾಡ ಪ್ರದೇಶದ ನಿವಾಸಿಗಳು. ಜಿಲ್ಲಾಡಳಿತವು ಈಗಾಗಲೇ ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ಪ್ರದೇಶ ಎಂದು ಘೋಷಿಸಿ, ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದೆ.

ಕೊರೊನಾ ಸೋಂಕಿತರೆಲ್ಲರೂ ಗುಣಮುಖರಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT