ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಸೈಬರ್‌ ಕ್ರೈಂ: ಜನಜಾಗೃತಿಗೆ ವಿಶೇಷ ಅಭಿಯಾನ

ವಂಚಕರ ಬಗ್ಗೆ ಇರಲಿ ಎಚ್ಚರ: 1930 ಸಂಖ್ಯೆಗೆ ತಕ್ಷಣ ಕರೆ ಮಾಡುವಂತೆ ಸಾರ್ವಜನಿಕರಿಗೆ ಸೂಚನೆ
ಕೆ.ಎಂ.ಸತೀಶ್‌ ಬೆಳ್ಳಕ್ಕಿ
Published 13 ಜೂನ್ 2024, 4:59 IST
Last Updated 13 ಜೂನ್ 2024, 4:59 IST
ಅಕ್ಷರ ಗಾತ್ರ

ಗದಗ: ಸಾರ್ವಜನಿಕರು ವಂಚಕರ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳುವ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಸೈಬರ್‌ ಕ್ರೈಂ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗದಗ ಜಿಲ್ಲಾ ಪೊಲೀಸ್‌ ಇಲಾಖೆ ವಿಶೇಷ ಅಭಿಯಾನ ಆರಂಭಿಸಿದೆ. ಇದಕ್ಕೆಂದೇ ವಿಶೇಷ ವಾಹನ ರೂಪಿಸಿ, ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ವಂಚಕರು ಲೋನ್‌ ಆ್ಯಪ್‌, ಎಪಿಕೆ ಫೈಲ್‌, ಎಸ್‌ಬಿಐ ರಿವಾರ್ಡ್‌ ಪಾಯಿಂಟ್ಸ್‌, ಕೆವೈಸಿ ಅಪ್‌ಡೇಟ್‌ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ, ಅವರಿಂದ ಒಟಿಪಿ ಪಡೆದುಕೊಂಡು ಬ್ಯಾಂಕ್‌ ಖಾತೆಯಿಂದ ಹಣ ದೋಚುತ್ತಿದ್ದರು. ಇಂತಹ ಸೈಬರ್‌ ವಂಚನೆಯ ಸಾಲಿಗೆ ಈಗ ಡಿಜಿಟಲ್‌ ಅರೆಸ್ಟ್‌ ಎಂಬ ಹೊಸ ಮೋಸದ ಜಾಲ ಕೂಡ ಸೇರಿದ್ದು, ವಂಚಕರು ಅಮಾಯಕ ಜನರನ್ನು ಬೆದರಿಸಿ ಹಣ ಕೀಳುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿ 2024ರ ಜನವರಿಯಿಂದ ಜೂನ್‌ವರೆಗೆ ಒಟ್ಟು 44 ಸೈಬರ್‌ ಕ್ರೈಂ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಡಿಜಿಟಲ್‌ ಆರೆಸ್ಟ್‌ಗೆ ಸಂಬಂಧಿಸಿದ ಪ್ರಕರಣಗಳೂ ಇವೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.

‘ವಂಚಕರು ಈಗ ಡಿಜಿಟಲ್‌ ಅರೆಸ್ಟ್‌ ಎಂಬ ಹೊಸ ವರಸೆ ಆರಂಭಿಸಿದ್ದಾರೆ. ನಿಮ್ಮ ಮೊಬೈಲ್‌ನಿಂದ ಅಶ್ಲೀಲ ವಿಡಿಯೊ ಅಥವಾ ಸಂದೇಶ ಹೋಗಿದೆ. ನಾನು ಹೇಳಿದಂತೆ ಕೇಳಲಿಲ್ಲವಾದರೆ ಬಂಧಿಸುತ್ತೇವೆ ಎಂದು ಕರೆ ಮಾಡಿ ಬೆದರಿಸುತ್ತಾರೆ. ಅದಕ್ಕಾಗಿ ಪೊಲೀಸ್‌, ಇ.ಡಿ. ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಹೆಸರು ಹೇಳುತ್ತಾರೆ. ಈ ರೀತಿಯ ವಂಚನೆಗಳು ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಬೇಕು’ ಎಂದು ಪೊಲೀಸರು ತಿಳಿಸಿದ್ದಾರೆ.

‘ವಂಚಕರು ಸರ್ಕಾರಿ ಅಧಿಕಾರಿ, ಪೊಲೀಸರು, ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಕರೆಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಜನರು ಇಂತಹ ಸೈಬರ್‌ ವಂಚನೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಮೋಸಕ್ಕೆ ಒಳಗಾದರೆ ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಬಳಿಕ ದೂರು ದಾಖಲಿಸಬೇಕು’ ಎನ್ನುತ್ತಾರೆ ಗದಗ ಜಿಲ್ಲಾ ಎಸ್‌ಪಿ ಬಿ.ಎಸ್‌.ನೇಮಗೌಡ.

‘ಸಾರ್ವಜನಿಕರು ಸೈಬರ್‌ ವಂಚನೆಗಳಿಗೆ ಒಳಗಾಗಬಾರದು. ಈ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ವಿಶೇಷ ವಾಹನ ರೂಪಿಸಲಾಗಿದೆ. ಇದು ಪ್ರತಿದಿನ ಒಂದು ಠಾಣಾ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ನಮ್ಮ ಸಿಬ್ಬಂದಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಅವರನ್ನು ಜಾಗೃತಗೊಳಿಸುತ್ತಾರೆ’ ಎಂದು ತಿಳಿಸಿದ್ದಾರೆ.

‘ಸಾರ್ವಜನಿಕರು ಸೈಬರ್‌ ಅಪರಾಧಗಳ ಬಗ್ಗೆ ಸದಾಕಾಲ ಜಾಗೃತರಾಗಿರಬೇಕು. ವಿವಿಧ ಸಂಸ್ಥೆಗಳ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಅಥವಾ ಮೆಸೇಜ್‌ ಇನ್‌ಬಾಕ್ಸ್‌ಗೆ ಬರುವ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಬಾರದು. ಒಂದು ವೇಳೆ ಆ ಫೈಲ್‌ ತೆರೆದರೆ ನಿಮ್ಮ ಮೊಬೈಲ್‌ ಅವರ ನಿಯಂತ್ರಣಕ್ಕೆ ಸಿಗುತ್ತದೆ. ಇದರಿಂದ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಅವರು ಸುಲಭವಾಗಿ ದೋಚುತ್ತಾರೆ’ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸೈಬರ್‌ ಕ್ರೈಂ ಸಹಾಯವಾಣಿ
ಸೈಬರ್‌ ಕ್ರೈಂ ಸಹಾಯವಾಣಿ
ಬಿ.ಎಸ್‌.ನೇಮಗೌಡ
ಬಿ.ಎಸ್‌.ನೇಮಗೌಡ
ಸೈಬರ್‌ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಸೆನ್‌ ಠಾಣೆ ಜತೆಗೆ ಎಲ್ಲ ಸಾಮಾನ್ಯ ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಲು ಅವಕಾಶ ನೀಡಲಾಗಿದೆ
-ಬಿ.ಎಸ್‌.ನೇಮಗೌಡ ಗದಗ ಎಸ್‌ಪಿ
‘ತಡವಾದರೂ ಪ್ರಕರಣ ಬೇಧಿಸದೇ ಬಿಡುವುದಿಲ್ಲ’
ಗದಗ ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ ಒಟ್ಟು 44 ಸೈಬರ್‌ ಕ್ರೈಂ ಪ್ರಕರಣಗಳು ದಾಖಲಾಗಿದ್ದು ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿವೆ. ಕೊಲೆ ಕಳವು ಪ್ರಕರಣಗಳನ್ನು ತ್ವರಿತವಾಗಿ ಭೇದಿಸುವ ಪೊಲೀಸರು ಸೈಬರ್‌ ಕ್ರೈಂ ಪ್ರಕರಣಗಳನ್ನು ಅಷ್ಟು ಸರಳವಾಗಿ ಬೇಧಿಸಲು ಆಗುತ್ತಿಲ್ಲ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉತ್ತರಿಸಿದ್ದು ಹೀಗೆ: ‘ಸೈಬರ್‌ ಕ್ರೈಂ ವಂಚಕರು ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಜನರಿಗೆ ಮೋಸ ಮಾಡುತ್ತಾರೆ. ಅದರ ಜಾಡು ಹಿಡಿದು ಹೋಗುವುದು ಸ್ವಲ್ಪ ತಡವಾಗಬಹುದು. ಆದರೆ ಪ್ರಕರಣಗಳನ್ನು ಭೇದಿಸದೇ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಸೆನ್‌ ಠಾಣೆಯ ಪೊಲೀಸ್‌ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಠಾಣೆಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೊಸ ತಂತ್ರಜ್ಞಾನ ಬಳಸಿ ವಂಚಕರ ಜಾಲವನ್ನು ಹಿಡಿಯಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT