ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹದಗೆಟ್ಟ ರಸ್ತೆ: ಆದ್ಯತೆ ಮೇರೆಗೆ ದುರಸ್ತಿಗೊಳಿಸಿ’

ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ
Last Updated 7 ಜುಲೈ 2021, 8:51 IST
ಅಕ್ಷರ ಗಾತ್ರ

ಗದಗ: ‘ಮುಂಗಾರು ಮಳೆ ಆರಂಭವಾಗಿದ್ದು ಜಿಲ್ಲೆಯಲ್ಲಿ ತೀವ್ರವಾಗಿ ಹದಗೆಟ್ಟಿರುವ ರಸ್ತೆಗಳನ್ನು ಪಟ್ಟಿ ಮಾಡಿ, ಆದ್ಯತೆ ಮೇರೆಗೆ ಅವುಗಳನ್ನು ದುರಸ್ತಿಗೊಳಿಸಲು ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕುರಿತಂತೆ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಳೆದ ವರ್ಷ ಅಧಿಕ ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಹದಗೆಟ್ಟಿವೆ. ಇರುವ ಅನುದಾನದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚುವ ಕಾರ್ಯ, ಸೇತುವೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ರಸ್ತೆಗಳ ಪಕ್ಕದಲ್ಲಿನ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಬೇಕು. ವಿವಿಧ ರಸ್ತೆಗಳನ್ನು ವಿವಿಧ ಇಲಾಖೆಗಳು ನಿರ್ವಹಿಸುತ್ತಿದ್ದು ಈ ಎಲ್ಲ ಇಲಾಖೆಗಳ ಮೇಲಾಧಿಕಾರಿಗಳು ನಿಗದಿತ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

ಪಿಆರ್‌ಇಡಿ ಹಾಗೂ ಪಿಎಂಜಿಎಸ್‌ವೈನಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹದಗೆಟ್ಟ ರಸ್ತೆಗಳನ್ನು ಪಟ್ಟಿ ಮಾಡಿ ಆದ್ಯತೆ ಮೇರೆಗೆ ದುರಸ್ತಿಗೆ ಮುಂದಾಗಬೇಕು. ಈ ವಿಚಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

‘ಇದು ಮಳೆಗಾಲ ಆಗಿರುವುದರಿಂದ ಹೆಸ್ಕಾಂನ ಕೆಳಹಂತದ ಅಧಿಕಾರಿಗಳು ಸ್ಥಳದಲ್ಲಿದ್ದು ವಿದ್ಯುತ್ ಅವಘಡಗಳಾಗದಂತೆ ನಿಗಾ ವಹಿಸಬೇಕು. ವಿದ್ಯುತ್ ಕಂಬಗಳಿಗೆ ಅಡ್ಡ ಬಂದಿರುವ ಗಿಡಮರಗಳ ಟೊಂಗೆಗಳನ್ನು ಕತ್ತರಿಸಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಗಮನ ಹರಿಸಬೇಕು’ ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಗರ ಪ್ರದೇಶದಲ್ಲಿನ ಚರಂಡಿ, ಸೇತುವೆಗಳು ಹಾಗೂ ಪ್ರಮುಖ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಮುಂದೆ ಹರಿಯುವಂತೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸಬೇಕು. ಮಳೆ ಹಾಗೂ ಪ್ರವಾಹದಿಂದ ಜನ ಜಾನುವಾರುಗಳ ಜೀವ ಹಾನಿಯಾಗದಂತೆನಿಗಾ ವಹಿಸಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್ ಎಂ., ನಗರಸಭೆ ಪೌರಾಯುಕ್ತ ರಮೇಶ ಜಾಧವ, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ ಕಲಾಲ, ಉಪ ತಹಶೀಲ್ದಾರ ರೇವಣಕರ್ ಸೇರಿದಂತೆ ಲೋಕೋಪಯೋಗಿ, ಹೆಸ್ಕಾಂ, ಕೆ–ಶಿಪ್, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.

ಜಿಲ್ಲೆಯ ಹಲವೆಡೆ ಈಗಾಗಲೇ ಗುರುತಿಸಲಾದ ಅಪಘಾತ ವಲಯಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ರಸ್ತೆ ಅಪಘಾತ ತಡೆಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಿ

ಎಂ.ಸುಂದರೇಶ್‌ ಬಾಬು, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT