ಶನಿವಾರ, ಏಪ್ರಿಲ್ 1, 2023
23 °C
ಹಳ್ಳಿಗರಿಗೆ ಆತ್ಮಸ್ಥೈರ್ಯ ತುಂಬುವ ವೈದ್ಯ

ಗ್ರಾಮೀಣ ರೋಗಿಗಳ ಜೀವನಾಡಿ ವೈದ್ಯ: ಡಾ. ಎ.ಡಿ.ಸಾಮುದ್ರಿ

ಚಂದ್ರು ಎಂ. ರಾಥೋಡ್‌ Updated:

ಅಕ್ಷರ ಗಾತ್ರ : | |

Prajavani

ನರೇಗಲ್:‌ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವಾಗ ಭಯಗೊಂಡಿದ್ದ ಗ್ರಾಮೀಣ ಜನರಿಗೆ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ನೀಡಿದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ. ಡಿ. ಸಾಮುದ್ರಿ ಹಳ್ಳಿ ಜನರ ಪಾಲಿಗೆ ಜೀವ ರಕ್ಷಕರಾಗಿದ್ದಾರೆ.

15 ವರ್ಷದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ನರೇಗಲ್‌ ಪಟ್ಟಣಕ್ಕೆ ಬಂದು 6 ವರ್ಷಗಳಾಗಿವೆ. ನರೇಗಲ್‌, ಜಕ್ಕಲಿ, ಹಾಲಕೆರೆ ಸೇರಿದಂತೆ 5 ಉಪ ಆರೋಗ್ಯ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಾರೆ. ಅಂದಾಜು 30 ಸಾವಿರ ಜನಸಂಖ್ಯೆಗೆ ಇವರು ಒಬ್ಬರೇ ಸರ್ಕಾರಿ ವೈದ್ಯರಾಗಿದ್ದು ಪ್ರತಿ ಮನೆಗೂ ಪರಿಚಯವಾಗಿದ್ದಾರೆ.

ಇಲ್ಲಿನ ಆಸ್ಪತ್ರೆಗೆ ನರೇಗಲ್‌, ಜಕ್ಕಲಿ, ದ್ಯಾಂಪುರ, ಕೋಚಲಾಪುರ, ತೋಟಗಂಟಿ, ಕೋಟುಮಚಗಿ, ಮಲ್ಲಾಪುರ, ಹೊಸಳ್ಳಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿ ಕೊಪ್ಪ, ಕಳಕಾಪುರ, ಅಬ್ಬಿಗೇರಿ, ಡ.ಸ.ಹಡಗಲಿ, ಕುರುಡಗಿ, ಯರೇಬೇಲೇರಿ ಸೇರಿದಂತೆ ಹೈದ್ರಾಬಾದ್‌ ಕರ್ನಾಟಕ ವ್ಯಾಪ್ತಿಯ ಹಂಚಿನಾಳ, ತೋಂಡಿಹಾಳ, ಬಂಡಿಹಾಳ, ಕುಕನೂರ, ಕರಮುಡಿ, ಮುಧೋಳ, ಮ್ಯಾಗೇರಿ ಭಾಗದ ಜನರು ಬರುತ್ತಾರೆ. 

ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದರೂ ದಿನಪೂರ್ತಿ ರೋಗಿಗಳಿಂದ ಹಾಗೂ ಜನರಿಂದ ತುಂಬಿರುತ್ತದೆ. ಆದರೆ ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಪ್ರೀತಿಯಿಂದ ಕಾಣುವ ವೈದ್ಯ ಸಾಮುದ್ರಿ ಮಾತಿನಲ್ಲೇ ಧೈರ್ಯ ತುಂಬಿ ರೋಗಿಯನ್ನು ಅರ್ಧ ಗುಣಪಡಿಸುತ್ತಾರೆ. ನಂತರ ಅವನ ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಂಪೂರ್ಣವಾಗಿ ಗುಣಪಡಿಸುತ್ತಾರೆ. ಹೀಗಾಗಿ ಒಬ್ಬ ಮಾದರಿ ವೈದ್ಯರಾದ ಇವರನ್ನು ಪ್ರತಿಯೊಬ್ಬರೂ ಗೌರವಿಸುತ್ತಾರೆ.

ಮೀಟಿಂಗ್‌ ಹಾಲ್‌ ಅನ್ನು ಸಹ ಕೋವಿಡ್‌ ಲಸಿಕೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಲಭ್ಯವಿರುವ ಸಿಬ್ಬಂದಿ ಹಾಗೂ ಆಸ್ಪತ್ರೆಯ ಕಟ್ಟಡವನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಸಿಬ್ಬಂದಿ ಜತೆಗೆ ಹಳ್ಳಿಗಳಿಗೆ, ವಿವಿಧ ಓಣಿಗಳಿಗೆ ಹೋಗಿ ಕೊರೊನಾ ಕುರಿತಾದ ತಿಳಿವಳಿಕೆ, ಸ್ವಚ್ಛತೆ, ಆರೋಗ್ಯದ ಮಹತ್ವದ ಕುರಿತು ಜಾಗೃತಿ ನೀಡುತ್ತಾರೆ. ಆಯಾ ಹವಾಮಾನಕ್ಕೆ ತಕ್ಕಂತೆ ಸಾಮಾನ್ಯ ಸಾಂಕ್ರಾಮಿಕ ರೋಗಗಳ ಕುರಿತು ತಿಳಿವಳಿಕೆ ನೀಡುತ್ತಾರೆ.

‘ಸರ್ಕಾರಿ ಆಸ್ಪ್ರತೆಗೆ ಬರುವ ಗರ್ಭಿಣಿಯರ ಆರೈಕೆ, ಹೆರಿಗೆ, ಮಕ್ಕಳ ಲಸಿಕೆಗೆ ಮುಂದಾಗುತ್ತಾರೆ. ಸಿಬ್ಬಂದಿಗೂ ಸಹ ರೋಗಿಗಳೊಂದಿಗೆ, ಜನರೊಂದಿಗೆ ಹೇಗೆ ಮಾತನಾಡಬೇಕು, ಯಾವುದೇ ಭಯ ಇಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೇಗೆ ಆರೈಕೆಗೆ ಮುಂದಾಗಬೇಕು ಎಂದು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಆದ್ದರಿಂದ ಕೊರೊನಾ ರೋಗಿಗಳಿಗೂ ನಾವು ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದೇವೆ’ ಎಂದು ಆರೋಗ್ಯ ಸಹಾಯಕರಾದ ಮಂಜುನಾಥ ಜಾಲಿಹಾಳ, ಸಾವಿತ್ರಿ ಹಿರೇವಡೆಯರ ತಿಳಿಸಿದರು.

ಕೊರೊನಾ ಕಾಲದಲ್ಲಿಯೂ ಈ ವೈದ್ಯರು ಪ್ರಾಣ ಭಯ ಇಲ್ಲದೆ ನಿಸ್ವಾರ್ಥವಾಗಿ ನಮ್ಮ ಸೇವೆ ಮಾಡುತ್ತಿದ್ದಾರೆ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಎಂದು ರೋಣ ಮಂಡಳ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ ಹೇಳಿದರು.

ಗ್ರಾಮೀಣ ಭಾಗದ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಬೇಕು. ಪ್ರತಿ ಹಳ್ಳಿಗರೂ ಸರ್ಕಾರಿ ಆಸ್ಪತ್ರೆಯನ್ನು ನಂಬಿ ಚಿಕಿತ್ಸೆಗೆ ಬರಬೇಕು
ಡಾ. ಎ.ಡಿ.ಸಾಮುದ್ರಿ, ವೈದ್ಯಾಧಿಕಾರಿ ನರೇಗಲ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.