ಮಂಗಳವಾರ, ಸೆಪ್ಟೆಂಬರ್ 28, 2021
22 °C
ದಿಂಡೂರ ಗ್ರಾಮದಲ್ಲಿ ಬೀಡು ಬಿಟ್ಟ ವೈದ್ಯರ ತಂಡ

ಗಜೇಂದ್ರಗಡ: ಕಲುಷಿತ ನೀರು ಕುಡಿದು ಅಸ್ವಸ್ಥ, ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಜೇಂದ್ರಗಡ: ಸಮೀಪದ ದಿಂಡೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮದ ಜನರಿಗೆ ಒಂದು ವಾರದಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ಆರೋಗ್ಯ ಪರೀಕ್ಷೆಗಾಗಿ ವೈದ್ಯರ ತಂಡ ಶುಕ್ರವಾರ ಗ್ರಾಮದಲ್ಲಿ ಬೀಡು ಬಿಟ್ಟಿತ್ತು.

ಗ್ರಾಮದಲ್ಲಿ ಈ ಹಿಂದೆ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಗ್ರಾಮದ ತುಂಬ ಸಿ.ಸಿ.ರಸ್ತೆ ಒಡೆಯಲಾಗಿದೆ. ಈ ಸಮಯದಲ್ಲಿ ಹಳೆಯ ಪೈಪ್‌ಲೈನ್ ಅಲ್ಲಲ್ಲಿ ಒಡೆದಿದ್ದು, ಅದರಿಂದ ಕಲುಷಿತ ನೀರು ಪೂರೈಕೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮದಲ್ಲಿ ನೈರ್ಮಲ್ಯದ ಕೊರತೆಯಿದ್ದು, ಚರಂಡಿಗಳು ಹೂಳಿನಿಂದ ತುಂಬಿವೆ. ಲಕ್ಕಲಕಟ್ಟಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಕೆಳಗಡೆಯೇ ತಿಪ್ಪೆ ಹಾಕಿರುವುದು, ರಸ್ತೆ ಬದಿಯಲ್ಲಿ ಬಯಲು ಶೌಚ ಮಾಡುವುದು ಗ್ರಾಮದಲ್ಲಿ ಸಾಮಾನ್ಯವಾಗಿದೆ.

ಗ್ರಾಮದಲ್ಲಿ ಗುರುವಾರ ಸಹೋದರರು ವಾಂತಿ- ಭೇದಿಯಿಂದ ಮೃತಪಟ್ಟು, ಹಲವರು ಅಸ್ವಸ್ಥರಾಗಿದ್ದರಿಂದ ಶುಕ್ರವಾರ ವೈದ್ಯರ ತಂಡ ಅಂಗನವಾಡಿಯಲ್ಲಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿತು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ ಸರ್ವೇ ನಡೆಸಿ, ಜನರ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಲ್ಲಾ ಸಮೀಕ್ಷಣಾ ಅಧಿಕಾರಿ ಜಗದೀಶ್ ನುಚ್ಚಿನ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಮತ್ತು ನೈರ್ಮಲ್ಯದ ಕುರಿತು ತಪಾಸಣೆ ನಡೆಸಿದರು. ಸದ್ಯ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

‘ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿನ ನೀರಿನ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಅದರ ವರದಿ ಬರುವವರೆಗೂ ನಲ್ಲಿ ಮೂಲಕ ನೀರಿನ ಪೂರೈಕೆ ಸ್ಥಗಿತಗೊಳಿಸಿ, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು' ಎಂದು ದಿಂಡೂರ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಡಾ.ಪ್ರವೀಣ ನಿಡಗುಂದಿ, ಡಾ.ಶರಣು ಗಾಣಿಗೇರ, ಡಾ.ರೇಖಾ ಹೊಸಮನಿ, ಕೆ.ಎ.ಹಾದಿಮನಿ, ಮನೋಹರ ಕಣ್ಣಿ, ಮಂಜುನಾಥ ವರಗಾ, ಮಹೇಶ ಹಿರೇಮಠ, ದಿಲ್ ಶಾನ್ ಮುಲ್ಲಾ, ವಹಿದಾ ನಮಾಜಿ, ಹಫೀಜಾ ಎಲಿಗಾರ, ರಾಜೂರ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ರಾಜು ಗಾರಗಿ, ಪಿಡಿಒ ಬಿ.ಎನ್.ಇಟಗಿಮಠ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ವಾಂತಿ-ಭೇದಿಯಿಂದ ಸಹೋದರರು ಮೃತ

ಗಜೇಂದ್ರಗಡ ಸಮೀಪದ ದಿಂಡೂರ ಗ್ರಾಮದ ಶರಣಪ್ಪ ಮಲ್ಲಪ್ಪ ಮೇಟಿ (50) ಹಾಗೂ ಕಳಕಪ್ಪ ಮಲ್ಲಪ್ಪ ಮೇಟಿ (72) ಸಹೋದರರು ವಾಂತಿ-ಭೇದಿಯಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಗ್ರಾಮದಲ್ಲಿ ಕಳೆದೊಂದು ವಾರದಿಂದ ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥರಾಗಿದ್ದರು. ಶರಣಪ್ಪ ಮೇಟಿ ಅವರು ಭಾನುವಾರ, ಕಳಕಪ್ಪ ಮೇಟಿ ಸೋಮವಾರ ಅಸ್ವಸ್ಥರಾಗಿದ್ದಾರೆ. ಕುಟುಂಬಸ್ಥರು ಅವರನ್ನು ಗಜೇಂದ್ರಗಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗದಗ ನಗರದ ಜರ್ಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗುರುವಾರ ಸಹೋದರರು ಮೃತಪಟ್ಟಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುವುದು ಬಡವರಿಂದ ಆಗುವುದಿಲ್ಲ. ಹೀಗಾಗಿ ಜನರ ಆರೋಗ್ಯ ಸುಧಾರಿಸುವವರೆಗೆ ವೈದ್ಯರ ತಂಡ ಇಲ್ಲೇ ವಾಸ್ತವ್ಯ ಹೂಡಬೇಕು.
- ಕಳಕಪ್ಪ ದುಗ್ಗಪ್ಪ ಕಂಬಳಿ, ಗ್ರಾಮಸ್ಥ

ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥರಾಗಿದ್ದಾರೆ. ನೀರಿಗೆ ಕ್ಲೋರಿನೇಷನ್ ಮಾಡಿ, ನೀರು ಪೂರೈಸಿದರೆ ವಾಂತಿ-ಭೇದಿಯಂತ ಕಾಯಿಲೆ ಬರುವುದಿಲ್ಲ. ಈ ಬಗ್ಗೆ ಗ್ರಾಮ ಪಂಚಾಯ್ತಿಯವರಿಗೆ ತಿಳಿಸಲಾಗಿದೆ.
- ಜಗದೀಶ್ ನುಚ್ಚಿನ, ಜಿಲ್ಲಾ ಸಮೀಕ್ಷಣಾ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.