ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಕಾಲೇಜಿಗೆ ಕಾಯಂ ಉಪನ್ಯಾಸಕರದ್ದೇ ಕೊರತೆ

ಲಕ್ಷ್ಮೇಶ್ವರ, ಶಿಗ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಿಬ್ಬಂದಿ ಸಮಸ್ಯೆ
Published 25 ಮೇ 2024, 7:11 IST
Last Updated 25 ಮೇ 2024, 7:11 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿರುವ ಎರಡು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಮುಖ್ಯವಾಗಿ ಉಪನ್ಯಾಸಕರ ಕೊರತೆ ಕಾಡುತ್ತಿದೆ.

ಲಕ್ಷ್ಮೇಶ್ವರದ ಟಿ.ಬಿ.ಮಾನ್ವಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರಂಭದಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳು ಇದ್ದವು. ಕಳೆದ ವರ್ಷದಿಂದ ಕಲಾ ವಿಭಾಗ ಆರಂಭವಾಗಿದೆ.

ಈ ಕಾಲೇಜಿನಲ್ಲಿ ಪ್ರಾಂಶುಪಾಲರು, 12 ಮಂದಿ ಉಪನ್ಯಾಸಕರು ಮತ್ತು ಒಬ್ಬರು ಗುಮಾಸ್ತ ಮತ್ತು ಒಬ್ಬ ಸಿಪಾಯಿಯ ಅವಶ್ಯಕತೆ ಇದೆ. ಆದರೆ ಸದ್ಯ ಪೂರ್ಣಾವಧಿ ಪ್ರಾಚಾರ್ಯರು ಇಲ್ಲ. ಅದರೊಂದಿಗೆ ಗಣಿತ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಇತಿಹಾಸ ವಿಷಯಗಳ ಬೋಧಕರು ಇಲ್ಲ. ಕ್ಲರ್ಕ್ ಮತ್ತು ಸಿಪಾಯಿ ಹುದ್ದೆಗಳು ಖಾಲಿ ಉಳಿದಿವೆ.

ಪ್ರತಿವರ್ಷ ಅತಿಥಿ ಉಪನ್ಯಾಸಕರು ಬೋಧಕರಾಗಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಕಾಲೇಜು ಆಗಿರುವುದರಿಂದ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಕಳೆದ ವರ್ಷ ಪ್ರಥಮ ಮತ್ತು ದ್ವಿತೀಯ ಪಿಯುಸಿ ಸೇರಿ 362 ಮಕ್ಕಳು ಇದ್ದರು.

ಈ ಕಾಲೇಜು ವಿಶಾಲವಾದ ಬಯಲಿನಲ್ಲಿದ್ದು ಸುತ್ತಲೂ ಹೊಸದಾಗಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾದ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸದ್ಯ ವಿವೇಕ ಯೋಜನೆಯಡಿ ಹೊಸದಾಗಿ ಮತ್ತೆ ನಾಲ್ಕು ಕೊಠಡಿಗಳ ನಿರ್ಮಾಣ ಭರದಿಂದ ಸಾಗಿದೆ. ಗ್ರಂಥಾಲಯ ಮತ್ತು ಪ್ರಯೋಗಾಲಗಳ ವ್ಯವಸ್ಥೆ ಇದೆ. ಆದರೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ವರ್ಷ ಶುದ್ಧೀಕರಣ ಯಂತ್ರ ಅಳವಡಿಸಿ ಶುದ್ಧ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಪ್ರಾಚಾರ್ಯ ಕುಬೇರಪ್ಪ ಸಿದ್ರಾಮಣ್ಣವರ ತಿಳಿಸಿದ್ದಾರೆ.

‘ಈ ವರ್ಷದಿಂದ ಪಿಸಿಎಂಸಿ ಕೋರ್ಸ್ ಆರಂಭಿಸಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಲ್ಲೂಕಿನ ಶಿಗ್ಲಿ ಗ್ರಾಮದ ಪರಮೇಶ್ವರಪ್ಪ ಮಲ್ಲೇಶಪ್ಪ ಬಳಿಗಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿದೆ. ಆದರೆ, ಈ ಕಾಲೇಜು ಕೂಡ ಉಪನ್ಯಾಸಕರ ಕೊರತೆ ಎದುರಿಸುತ್ತಿದೆ. ಎಂಟು ವರ್ಷಗಳಿಂದ ಇಲ್ಲಿ ಪ್ರಾಚಾರ್ಯರ ಹುದ್ದೆ ಖಾಲಿ ಇದೆ. ಒಬ್ಬ ಉಪನ್ಯಾಸಕರೇ ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂಗ್ಲಿಷ್‌, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಜೀವಶಾಸ್ತ್ತ ಮತ್ತು ಗಣಿತ ವಿಷಯ ಬೋಧಕರು ಇಲ್ಲ. ₹12 ಸಾವಿರ ಗೌರವಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರು ಬೋಧನೆ ಮಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕಾಂಪೌಂಡ್ ನಿರ್ಮಿಸಲು ಅನುದಾನ ಮಂಜೂರಾಗಿದ್ದು, ನಿರ್ಮಾಣದ ಕೆಲಸ ಆರಂಭವಾಗಲಿದೆ. ಕಾಲೇಜಿಗೆ ಸಿಪಾಯಿಯ ಅಗತ್ಯ ಇದೆ.

ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಉಪನ್ಯಾಸಕರ ಕೊರತೆ ಇದ್ದರೂ ಈ ವರ್ಷ ದ್ವಿತೀಯ ಪಿಯು ಫಲಿತಾಂಶ ಶೇ 91ರಷ್ಟು ಆಗಿದೆ ಎಂದು ಪ್ರಭಾರ ಪ್ರಾಚಾರ್ಯ ಡಿ.ಪಿ. ಹೇಮಾದ್ರಿ ತಿಳಿಸಿದರು.

‘ಇನ್ನೂ ಆರು ಕೊಠಡಿಗಳ ಅವಶ್ಯಕತೆ ಇದೆ. ಅದರೊಂದಿಗೆ ಉಪನ್ಯಾಸಕರ ಕೊಠಡಿ, ಸಭಾಭವನಗಳ ಅಗತ್ಯ ಇದೆ. ಜತೆಗೆ ಗ್ರಂಥಾಲಯ ಮತ್ತು ಪ್ರಯೋಗಾಲಯ ಇಲ್ಲ’ ಎಂದು ಹೇಳಿದರು.

ಕಳೆದ ವರ್ಷ 250 ಪ್ರಥಮ 200 ಮಕ್ಕಳು ದ್ವಿತೀಯ ಪಿಯುಸಿಗೆ ಪ್ರವೇಶಾತಿ ಪಡೆದಿದ್ದರು. ಈ ವರ್ಷವೂ ಮಕ್ಕಳ ಪ್ರವೇಶಾತಿ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಸರ್ಕಾರ ಉಪನ್ಯಾಸಕರನ್ನು ನೇಮಕ ಮಾಡಿಕೊಂಡರೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ.

–ಡಿ.ಪಿ. ಹೇಮಾದ್ರಿ ಪ್ರಭಾರಿ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT