ಭಾನುವಾರ, ಮೇ 22, 2022
21 °C

ಸಹಕಾರ ಸಚಿವಾಲಯ ಸ್ಥಾಪನೆ; ಆಶಾದಾಯಕ ಬೆಳವಣಿಗೆ- ಬಿ.ಎಚ್.ಕೃಷ್ಣಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘2022ರ ಜನವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಸೌಹಾರ್ದಗಳ ಮೊದಲ ರಾಷ್ಟ್ರೀಯ ಸಹಕಾರ ಸಮ್ಮೇಳನ ಆಯೋಜಿಸಲಾಗಿದ್ದು, ಫೆಡರೇಷನ್‍ನ ಕೇಂದ್ರ ಕಚೇರಿಯನ್ನು ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಚ್. ಕೃಷ್ಣಾರೆಡ್ಡಿ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಹಕಾರ ಕ್ಷೇತ್ರ ಬೃಹತ್‌ ಆಗಿ ಬೆಳೆದಿದ್ದರೂ ಈ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಆದರೆ, ಹಲವು ವರ್ಷಗಳ ಮನವಿಯನ್ನು ಪುರಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯ ರಚಿಸಿರುವುದಲ್ಲದೇ, ಪ್ರಭಾವಿ ಸಚಿವರಿಗೆ ಈ ಇಲಾಖೆಯ ಹೊಣೆ ನೀಡಿರುವುದು ಅಭಿವೃದ್ಧಿ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ’ ಎಂದು ಹೇಳಿದರು.

‘ಸೌಹಾರ್ದ ಸಹಕಾರ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಸಹಕಾರಿ ಸಂಘ ಹಾಗೂ ಸೌಹಾರ್ದ ಸಹಕಾರಿಗಳ ನಡುವೆ ವ್ಯತ್ಯಾಸವಿದ್ದು, ಈ ಕಾರಣಕ್ಕಾಗಿ ಸೌಹಾರ್ದ ಸಹಕಾರಿಗಳ ಹಿತ ಕಾಯಲು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. (ಫೆಡರೇಷನ್) ಅಸ್ತಿತ್ವಕ್ಕೆ ತರಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಹಳೆಯ ಸಹಕಾರ ಕಾಯ್ದೆಯಡಿ 500 ಸಂಘಗಳು ನೋಂದಣಿಯಾಗಿದ್ದರೆ, ಸೌಹಾರ್ದದಡಿ 5,300 ನೋಂದಣಿಯಾಗಿವೆ. ಈ ಎಲ್ಲ ಸಂಘಗಳಿಂದ ಒಟ್ಟು 60 ಲಕ್ಷ ಸದಸ್ಯರನ್ನು ಹೊಂದಿದ್ದು, 50 ಸಾವಿರ ಮಂದಿಗೆ ಉದ್ಯೋಗ ನೀಡಿವೆ. ಒಟ್ಟು 1,300 ಇ-ಸ್ಟ್ಯಾಂಪ್ ಕೇಂದ್ರಗಳನ್ನು ಹೊಂದಿದ್ದು, ಇವುಗಳಿಂದ ಪ್ರತಿದಿನ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ರೂಪಾಯಿ ರಾಜಸ್ವ ನೀಡುತ್ತಿವೆ’ ಎಂದು ಅವರು ಹೇಳಿದರು.

‘ಸೌಹಾರ್ದಗಳಲ್ಲಿನ ಠೇವಣಿದಾರರ ಹಿತರಕ್ಷಣೆಗೆ ಟಾಸ್ಕ್ ಫೋರ್ಸ್ ಇರಲಿದೆ. ಗದಗ ಜಿಲ್ಲೆಯಲ್ಲಿ ನೋಂದಣಿಗೊಂಡ 63 ಸೌಹಾರ್ದಗಳ ಪೈಕಿ ನಾಲ್ಕು ಮಾತ್ರ ನಿಷ್ಕ್ರಿಯವಾಗಿವೆ. 51 ಸೌಹಾರ್ದಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದರು.

‘ಸಂಯುಕ್ತ ಸಹಕಾರಿ ಕೇಂದ್ರ ಕಚೇರಿಯೊಂದಿಗೆ ಕಲಬುರಗಿ ಹಾಗೂ ಬೆಳಗಾವಿ ವಿಭಾಗವನ್ನೊಳಗೊಂಡು ಬೆಳಗಾವಿಯಲ್ಲಿ ಕಚೇರಿ ಹೊಂದಲಿದೆ. ಜೊತೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಈ ಕಚೇರಿಗಳಿವೆ. ₹750 ಕೋಟಿ ಪಾಲು ಬಂಡವಾಳ, ₹15 ಸಾವಿರ ಕೋಟಿ ಠೇವಣಿ, ಸಾವಿರ ಕೋಟಿ ನಿಧಿ, ₹12 ಸಾವಿರ ಕೋಟಿ ಸಾಲ, ₹18 ಸಾವಿರ ಕೋಟಿ ದುಡಿಯುವ ಬಂಡವಾಳ, ₹230 ಕೋಟಿ ಲಾಭದ ಹೆಗ್ಗಳಿಕೆ ಈ ಸೌಹಾರ್ದ ಸಂಸ್ಥೆಗಳಿಗೆ ಇದೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಗದಗ ಜಿಲ್ಲಾ ನಿರ್ದೇಶಕ ನಾಗರಾಜ ದೇಶಪಾಂಡೆ, ಧಾರವಾಡದ ಕೆಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಧಾರವಾಡದ ಸಹಕಾರ ಭಾರತಿ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಮುಳಗುಂದ ಅರ್ಬನ್ ಬ್ಯಾಂಕ್‍ನ ಉಪಾಧ್ಯಕ್ಷ ಬಸವರಾಜ ಬಡ್ನಿ, ಬಸವರಾಜ ಹೊಂಗಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು