ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ರೇಷ್ಮೆ ಕೃಷಿಯಲ್ಲಿ ರೈತನ ಖುಷಿ; 3 ತಿಂಗಳಿಗೆ ₹1.5 ಲಕ್ಷ ಆದಾಯ

Published 21 ಜೂನ್ 2024, 8:07 IST
Last Updated 21 ಜೂನ್ 2024, 8:07 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬರಗಾಲ, ಬೆಳೆನಾಶ, ನೆರೆಹಾವಳಿಯಂತಹ ನೈಸರ್ಗಿಕ ವೈಪರೀತ್ಯಗಳೇ ಎಷ್ಟೋ ಬಾರಿ ರೈತನ ಭರವಸೆಯನ್ನು ಕೆಡವಿ ಬಿಡುತ್ತವೆ. ಆದರೂ ನೂರೆಂಟು ಅನಿರೀಕ್ಷಿತಗಳ ಮಧ್ಯೆಯೂ ಹೊಸ ಪ್ರಯೋಗಕ್ಕೆ ಕೈಹಾಕಿ, ಯಶಸ್ವಿಯಾಗುವ ರೈತರು ಮಾದರಿಯಾಗುತ್ತಾರೆ. ಇಂತಹ ಮಾದರಿ ಸಾಲಿನಲ್ಲಿ ನಿಲ್ಲುವವರು ಲಕ್ಷ್ಮೇಶ್ವರದ ಸೋಮನಗೌಡ ಪಾಟೀಲರು ಮತ್ತವರ ಪುತ್ರರಾದ ಸಂದೇಶ ಮತ್ತು ಸಂದೀಪ್ ಪಾಟೀಲ.

ಸೋಮನಗೌಡರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಮೂರು ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯುತ್ತ 150 ಲಿಂಕ್ಸ್ ಹುಳುಗಳನ್ನು ಸಾಕಿ ಅದರಿಂದ ರೇಷ್ಮೆ ಉತ್ಪಾದನೆ ತೆಗೆಯುತ್ತಿದ್ದಾರೆ. ಸಿಆರ್‌ಸಿ ವೈಟ್ ತಳಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ತಳಿಯ ಬಣ್ಣ ಬಿಳಿ ಇದ್ದು ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ದರ ಸಿಗುತ್ತದೆ. ಗೂಡಿನ ಮನೆ ನಿರ್ಮಾಣ, ಹಿಪ್ಪುನೇರಳೆ ಸೊಪ್ಪು ಬೆಳೆಯಲು ಮತ್ತು ಲಿಂಕ್ಸ್ ಖರೀದಿ, ಡ್ರಿಪ್ ಅಳವಡಿಕೆ ಸೇರಿದಂತೆ ಒಟ್ಟು ₹8 ಲಕ್ಷ ಖರ್ಚು ಮಾಡಿದ್ದಾರೆ.

ಶಿರಹಟ್ಟಿ ತಾಲ್ಲೂಕು ಮಾಗಡಿ ಗ್ರಾಮದ ರೈತರೊಬ್ಬರಿಂದ 150 ಲಿಂಕ್ಸ್ ಹುಳು ಖರೀದಿಸಿದ್ದು ಇದಕ್ಕಾಗಿ ₹6,300 ಖರ್ಚು ಮಾಡಿದ್ದಾರೆ. ಸಧ್ಯ ಕೆ.ಜಿ ರೇಷ್ಮೆಯು ₹630 ರಂತೆ ಮಾರಾಟ ಆಗುತ್ತಿದೆ. ಕಳೆದ ತಿಂಗಳು ಇವರು ಒಂದು ಕ್ವಿಂಟಲ್ ರೇಷ್ಮೆ ಮಾರಾಟ ಮಾಡಿದ್ದರು. ಈ ಬಾರಿ ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ.

ಪ್ರತಿ ಮೂರು ತಿಂಗಳಿಗೆ ಎರಡು ಬೆಳೆ ಬರುತ್ತಿದ್ದು ಅದರಿಂದ ₹1.5 ಲಕ್ಷ ಆದಾಯ ಕೈ ಸೇರುತ್ತಿದೆ. ಅಂದರೆ ವರ್ಷದಲ್ಲಿ ನಾಲ್ಕು ಬಾರಿ ಇಳುವರಿ ಬರುತ್ತದೆ. ಅದರಿಂದ ವಾರ್ಷಿಕವಾಗಿ ನಾಲ್ಕರಿಂದ ಐದು ಲಕ್ಷ ಆದಾಯ ಸಿಗುತ್ತದೆ ಎಂದು ಸೋಮನಗೌಡ್ರು ಹೇಳುತ್ತಾರೆ.

ಸೋಮನಗೌಡ ಅವರ ಕೆಲಸಕ್ಕೆ ಅವರ ಇಬ್ಬರು ಪುತ್ರರು ಬೆನ್ನೆಲುಬಾಗಿ ನಿಂತಿದ್ದಾರೆ. ಬಿಇ ಪದವೀಧರ ಸಂದೇಶ ಬೆಂಗಳೂರಿನಲ್ಲಿ ತಿಂಗಳಿಗೆ ಐವತ್ತು ಸಾವಿರ ಸಂಬಳದ ಕೆಲಸದಲ್ಲಿದ್ದರು. ಲಾಕ್‍ಡೌನ್ ಸಮಯದಲ್ಲಿ ಊರಿಗೆ ಮರಳಿದವರು ತಂದೆಯ ಕೃಷಿಗೆ ಕೈಜೋಡಿಸಿದ್ದಾರೆ. ರೇಷ್ಮೆ ಕೃಷಿ ಹೆಚ್ಚು ಜನರನ್ನು ಬೇಡುತ್ತದೆ. ಇವರ ಇಬ್ಬರೂ ಮಕ್ಕಳು ಸಾಥ್ ನೀಡಿದ್ದು ಸೋಮನಗೌಡರಿಗೆ ಆನೆ ಬಲ ಬಂದಂತಾಗಿದೆ. ತಿಂಗಳಿಗೊಮ್ಮೆ ರಾಮನಗಕ್ಕೆ ತೆರಳಿ ಗೂಡು ಮಾರಾಟ ಮಾಡುತ್ತಾರೆ.

ಲಕ್ಷ್ಮೇಶ್ವರದ ಹಿಪ್ಪುನೇರಳೆ ಹೊಲದಲ್ಲಿ ರೈತ ಸೋಮನಗೌಡ ಮತ್ತು ಅವರ ಪುತ್ರ ಸಂದೇಶ ಪಾಟೀಲ
ಲಕ್ಷ್ಮೇಶ್ವರದ ಹಿಪ್ಪುನೇರಳೆ ಹೊಲದಲ್ಲಿ ರೈತ ಸೋಮನಗೌಡ ಮತ್ತು ಅವರ ಪುತ್ರ ಸಂದೇಶ ಪಾಟೀಲ
ಲಾಕ್‍ಡೌನ್ ಸಮಯದಲ್ಲಿ ಕೆಲಸ ಬಿಟ್ಟು ಊರಿಗೆ ಬಂದೆ ಮತ್ತೆ ಬೆಂಗಳೂರಿಗೆ ಹೋಗದೆ ತಂದೆಯ ಕೃಷಿ ಕಾರ್ಯಗಳಲ್ಲಿ ಭಾಗಿಯಾದ್ದೇನೆ. ಇದೀಗ ರೇಷ್ಮೆ ಬೆಳೆಯುತ್ತಿದ್ದು ಉತ್ತಮ ಆದಾಯ ಸಿಗುತ್ತಿದೆ ಸಂದೇಶ
ಪಾಟೀಲ ರೈತ
ರೇಷ್ಮೆ ಬೆಳೆಯಲು ಒಂದು ಬಾರಿ ಮಾತ್ರ ಬಂಡವಾಳ ಹಾಕಬೇಕಾಗುತ್ತದೆ. ನಂತರ ಬರುವುದೆಲ್ಲ ಲಾಭ. ಒಮ್ಮೆ ನಾಟಿ ಮಾಡಿದ ಹಿಪ್ಪುನೇರಳೆ 15ರಿಂದ 20 ವರ್ಷಗಳವರೆಗೆ ಇಳುವರಿ ಕೊಡುತ್ತದೆ
ಸೋಮನಗೌಡ ಪಾಟೀಲ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT