ಬುಧವಾರ, ಜೂನ್ 29, 2022
26 °C
ಇತರೆ ಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸಲಹೆ

ಸಿಗದ ರಸಗೊಬ್ಬರ: ರೈತರ ಪರದಾಟ

ಶ್ರೀಶೈಲ ಎಂ. ಕುಂಬಾರ Updated:

ಅಕ್ಷರ ಗಾತ್ರ : | |

Prajavani

ಗಜೇಂದ್ರಗಡ: ತಾಲ್ಲೂಕಿನಾದ್ಯಂತ ಕಳೆದ ವಾರ ಉತ್ತಮ ಮಳೆ ಸುರಿದಿದ್ದರಿಂದ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಹೊಲ ಹದಗೊಳಿಸಿ ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಡಿಎಪಿ ರಸಗೊಬ್ಬರ ಸಿಗದ ಕಾರಣ ರೈತರು ಪರದಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು, ಕೃಷಿ ಇಲಾಖೆ ಈ ಬಾರಿ 32 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಅಗತ್ಯ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರ ಹಾಗೂ ಮಾರಾಟ ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿದೆ. ಈಗಾಗಲೇ ಮಸಾರಿ ಭೂಮಿ ಹೊಂದಿರುವ ರೈತರು ಹೆಸರು, ಗೋವಿನಜೋಳ, ತೊಗರಿ, ಅಲಸಂದಿ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಸಿಗದ ಪರಿಣಾಮ ರೈತರು ರಸಗೊಬ್ಬರ ಅಂಗಡಿಗಳಿಗೆ ಅಲೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜುವಾರಿ ಡಿಎಪಿ ದಾಸ್ತಾನಿದೆ. ಆದರೆ ರೈತರು ಮಂಗಳಾ ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಇಡುತ್ತಿರುವುದರಿಂದ ಡಿಎಪಿ ರಸಗೊಬ್ಬರದ ಅಭಾವ ಉಂಟಾಗಿದೆ.

‘ಹೆಸರು, ಅಲಸಂದಿ, ಜೋಳ ಬಿತ್ತನೆಗೆ 20-20-00-13 ಗೊಬ್ಬರ ನಡೆಯುತ್ತದೆ. ಆದರೆ ಗೋವಿನಜೋಳ ಮತ್ತು ತೊಗರಿ ಬಿತ್ತನೆಗೆ ಮಂಗಳಾ ಡಿಎಪಿ ಹಾಕಿದರೆ ಮಾತ್ರ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ. ಮಾರ್ಕೆಟ್ ನ್ಯಾಗ ಡಿಎಪಿ ಗೊಬ್ಬರ ಹುಡುಕಾಕತ್ತಿವಿ. ಆದ್ರ ಎಲ್ಲೂ ಸಿಗವಲ್ದು. ಹಿಂಗಾಗಿ ರೈತರಿಗೆ ಬಾಳ ತೊಂದ್ರಿ ಆಗೈತಿ’ ಎಂದು ವಿವಿಧ ಗ್ರಾಮಗಳಿಂದ ಬಂದಿದ್ದ ರೈತರು ಅಲವತ್ತುಕೊಂಡರು.

‘ಈ ಸಲ ಬೇಗ ಮಳೆಯಾಗಿದ್ದರಿಂದ ರೈತರು ಭೂಮಿ ಹದಗೊಳಿಸಿ ಮುಂಗಾರು ಬಿತ್ತನೆ ಆರಂಭಿಸಿದ್ದಾರೆ. ಕೃಷಿ ಇಲಾಖೆಯವರು ಗೊಬ್ಬರ ದಾಸ್ತಾನಿದೆ ಎನ್ನುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲಿಯೂ ಡಿಎಪಿ ಸಿಗುತ್ತಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲಿ ವರ್ತಕರು ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೃಷಿ ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್.ಸೋಂಪುರ ಹೇಳಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ 539 ಟನ್ ಡಿಎಪಿ, 898 ಟನ್ ಯೂರಿಯಾ, 718 ಟನ್ ಕಾಂಪ್ಲೆಕ್ಸ್ ಸರಬರಾಜಾಗಿದ್ದು, ಅದರಲ್ಲಿ 82 ಟನ್ ಡಿಎಪಿ, 221 ಟನ್ ಯೂರಿಯಾ, 481 ಟನ್ ಕಾಂಪ್ಲೆಕ್ಸ್ ದಾಸ್ತಾನಿದೆ. ಅಲ್ಲದೆ 27ರಂದು ಮತ್ತೆ 522 ಟನ್ ಡಿಎಪಿ ಬರಲಿದೆ. ರೈತರು ಕೇವಲ ಮಂಗಳಾ ಡಿಎಪಿ ರಸಗೊಬ್ಬರ ಬಳಕೆ ಮಾಡುವ ಬದಲು ಅದರಷ್ಟೇ ಎಲ್ಲ ಸತ್ವಗಳನ್ನು ಹೊಂದಿರುವ ಇತರೆ ಗೊಬ್ಬರಗಳನ್ನು ಬಳಸಬೇಕು’ ಎಂದು ರೋಣ ಸಹಾಯಕ ಕೃಷಿ ಅಧಿಕಾರಿ ರವಿಂದ್ರಗೌಡ ಪಾಟೀಲ ಹೇಳಿದರು.

ಕೆಲವು ವರ್ತಕರು ಕಾಳ ಸಂತೆಯಲ್ಲಿ ಮಾರಾಟ ಮಾಡಲು ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಮಾಹಿತಿಯಿದ್ದು, ಅದನ್ನು ರೈತರಿಗೆ ಹಂಚಿಕೆ ಮಾಡದಿದ್ದಲ್ಲಿ ದಾಸ್ತಾನಿನ ಮೇಲೆ ಕರವೇ ದಾಳಿ ನಡೆಸಲಿದೆ
ಎಚ್.ಎಸ್.ಸೋಂಪುರ, ಕರವೇ ರಾಜ್ಯ ಘಟಕದ ಉಪಾಧ್ಯಕ್ಷ, ಗಜೇಂದ್ರಗಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು