ಸೋಮವಾರ, ಮೇ 17, 2021
21 °C
ಮಲಪ್ರಭಾ ನದಿಯ ಭೋರ್ಗೆರತ ನೋಡಲು ಜನರ ದಂಡು

ತಗ್ಗಿದ ಪ್ರವಾಹ; ಕೆಸರುಗದ್ದೆಯಾದ ಹೊಳೆಆಲೂರು

ಜೋಮನ್‌ ವರ್ಗೀಸ್‌ Updated:

ಅಕ್ಷರ ಗಾತ್ರ : | |

Prajavani

ಗದಗ: ಮಲಪ್ರಭಾ ನದಿಯ ಪ್ರವಾಹಕ್ಕೆ ತತ್ತರಿಸಿದ್ದ ಹೊಳೆ ಆಲೂರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು ಶನಿವಾರ ಸ್ವಲ್ಪ ಚೇತರಿಸಿಕೊಂಡಿವೆ. ನದಿಯಲ್ಲಿ ನೀರಿನ ಪ್ರಮಾಣ ತುಸು ಇಳಿಕೆಯಾಗಿದ್ದು, ಗ್ರಾಮಗಳಿಗೆ ನುಗ್ಗಿದ್ದ ನೀರು ನಿಧಾನವಾಗಿ ಇಳಿಯತೊಡಗಿದೆ. ಈ ಭಾಗದಲ್ಲಿ ಜಲಾವೃತಗೊಂಡಿದ್ದ ನೂರಾರು ಎಕರೆ ಪ್ರದೇಶದ ಗೋವಿನ ಜೋಳ, ಈರುಳ್ಳಿ, ಕಬ್ಬು, ಶೇಂಗಾ ಬೆಳೆಗಳ ಮೇಲ್ಭಾಗ ಮತ್ತೆ ನೀರಿನ ಮೇಲೆ ಕಾಣಿಸಿಕೊಳ್ಳುತ್ತಿವೆ.

ಮೂರು ದಿನಗಳಿಂದ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ತಮ್ಮ ಮೂಲ ಗ್ರಾಮಗಳಿಗೆ ಹೋಗಲು ಹಾತೊರೆಯುತ್ತಿದ್ದು, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಿಲ್ಲ. ನವಿಲುತೀರ್ಥ ಜಲಾಶಯದಿಂದ ಮತ್ತೆ ನೀರು ಹರಿಸಿದರೆ, ಮಲಪ್ರಭಾ ನದಿ ಮತ್ತೆ ಭೋರ್ಗೆರೆಯಲಿದೆ. ಹೀಗಾಗಿ ನದಿಯಲ್ಲಿ ಸಂಪೂರ್ಣ ನೀರು ಇಳಿದ ನಂತರವೇ ಗ್ರಾಮಕ್ಕೆ ಮರಳಲು ಅವಕಾಶ ನೀಡುವುದಾಗಿ ಹೇಳಿದೆ.

ಪ್ರವಾಹ ತಗ್ಗಿದ ನಂತರ ಇಡೀ ಹೊಳೆ ಆಲೂರು ಗ್ರಾಮ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಲ್ಲಿನ ನಿವಾಸಿಗಳು ಎರಡು ದಿನಗಳ ಹಿಂದಷ್ಟೇ ಮನೆಯ ಬಾಗಿಲಿಗೇ ಸಮುದ್ರ ಬಂದ ಸ್ಥಿತಿಯನ್ನು ಎದುರಿಸಿದ್ದರು. ಇದೀಗ ರಸ್ತೆಯ ಮೇಲೆ ಕಾಲಿಡಲೂ ಆಗದಷ್ಟು ಕೆಸರು ಆವರಿಸಿಕೊಂಡಿದೆ. ಕೆಲವೆಡೆ ಮನೆಗಳ ಒಳಗೆ ಕೆಸರು ಮಿಶ್ರಿತ ನೀರು ನುಗ್ಗಿದ್ದು, ಮನೆಗಳನ್ನು ಸ್ವಚ್ಛಗೊಳಿಸಿ, ಮೊದಲಿನ ಸ್ಥಿತಿಗೆ ತರಲು ತಿಂಗಳುಗಳೇ ಬೇಕು ಎನ್ನುತ್ತಿದ್ದಾರೆ ಮಹಿಳೆಯರು. ಕೆಸರಿನ ದುರ್ನಾತದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಪಟ್ಟಣದಲ್ಲಿ ಕುಡಿಯಲು ಶುದ್ಧ ನೀರಿನ ಅಭಾವವೂ ಕಾಣಿಸಿಕೊಂಡಿದ್ದು, ನೆರೆ ಸಂತ್ರಸ್ತರಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಹೆಚ್ಚಿದೆ.

ಮಲಪ್ರಭಾ ಮತ್ತು ಬೆಣ್ಣೆಹಳ್ಳದ ವ್ಯಾಪ್ತಿಗೆ ಬರುವ ಹೊಳೆಆಲೂರು, ಹೊಳೆಹಡಗಲಿ, ಹೊಳೆಮಣ್ಣೂರು, ಗಾಡಗೋಳಿ, ಮೆಣಸಗಿ, ಬಿ.ಎಸ್‌ ಬೇಲೇರಿ, ಗುಳಗುಂದಿ, ಅಮರಗೋಳ ಗ್ರಾಮಗಳಲ್ಲಿ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಡುಮಟ್ಟಕ್ಕೆ ಬೆಳೆದಿದ್ದ ಗೋವಿನ ಜೋಳದ ಬೆಳೆ ಮಾತ್ರ ಅಲ್ಲಲ್ಲಿ ಉಳಿದಿದೆ. ಆದರೆ, ಇಡೀ ಬೆಳೆ, ಜಮೀನು ತುಂಬಾ ಕೆಸರು ಆವರಿಸಿಕೊಂಡಿದೆ. ‘ಈ ಬೆಳೆಯಿಂದ ಇನ್ನೇನೂ ಪ್ರಯೋಜನವಿಲ್ಲ. ಇದರಲ್ಲಿ ಕಾಳು ಕಟ್ಟುವುದಿಲ್ಲ, ಎಲೆಯನ್ನು ಜಾನುವಾರು ಕೂಡ ತಿನ್ನುವುದಿಲ್ಲ. ಪ್ರವಾಹದ ನೀರು ನುಗ್ಗಿದ ಜಮೀನಿನಲ್ಲಿ ಹೊಸ ಬೆಳೆ ಬೆಳೆಯಬೇಕಾದರೆ ಕನಿಷ್ಠ ಎರಡು ವರ್ಷವಾದರೂ ಬೇಕು. ನಮ್ಮ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ’ ಎಂದು ಕುರುವಿನಕೊಪ್ಪ ಗ್ರಾಮದ ಲಕ್ಷ್ಮಣ ಬಿಳಿಕಲ್ಲ ಕಂಬನಿ ಸುರಿಸಿದರು.


ಹೊಳೆಆಲೂರಿನಲ್ಲಿ ಮಲಪ್ರಭಾ ನದಿಗಿಳಿದು ಸೆಲ್ಫಿ ತೆಗೆಯುತ್ತಿರುವ ಯುವಕರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು