ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಬದುಕು ಮೂರಾಬಟ್ಟೆ

ಮಲಪ್ರಭಾ ಪ್ರವಾಹ ತಗ್ಗಿದರೂ ಸಮಸ್ಯೆ, ಹೆದ್ದಾರಿ ಮಧ್ಯದಲ್ಲಿಯೇ ಮಹಿಳೆಯರಿಂದ ಅಡುಗೆ
Last Updated 27 ಜುಲೈ 2021, 4:23 IST
ಅಕ್ಷರ ಗಾತ್ರ

ನರಗುಂದ: ಮಲಪ್ರಭಾ ಪ್ರವಾಹದ ರಭಸ ಕಡಿಮೆಯಾಗಿದ್ದರೂ ಕೊಣ್ಣೂರ ಸುತ್ತಮುತ್ತ ಅದು ಮಾಡಿದ ಹಾನಿ ಅಪಾರ. ನವಿಲುತೀರ್ಥ ಜಲಾಶಯದಿಂದ 18 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಇದರಿಂದಾಗಿ ತಾಲ್ಲೂಕಿನ ಕೊಣ್ಣೂರ ಗ್ರಾಮವನ್ನು ನೀರು ಸುತ್ತುವರಿದಿದ್ದು 100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಲಾವೃತವಾದ ಮನೆಗಳ ನಿವಾಸಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಮತ್ತೇ ಅವರ ಬದುಕು ಮೂರಾಬಟ್ಟೆಯತ್ತ ಸಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಾಡರ ಓಣಿಯ (ಭೂಸರಡ್ಡಿ ಪ್ಲಾಟ್) 40ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಹೆದ್ದಾರಿ ಮೇಲೆ ಅಡುಗೆ: ಪ್ರತಿವರ್ಷವೂ ಪ್ರವಾಹಕ್ಕೆ ಸಿಕ್ಕಿ ನಲುಗುತ್ತಿರುವ ಜಾಡರ ಓಣಿಯ ಮಹಿಳೆಯರು ಶಾಶ್ವತ ಪರಿಹಾರ ದೊರಕಿಸುವಂತೆ ಆಗ್ರಹಿಸಿ ರೇಖಾ ಹಡಪದ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಒಲೆ ಹೂಡಿ ಅಡುಗೆ ಮಾಡಲು ಮುಂದಾದರು. ಪೊಲೀಸರ ಮಾತಿಗೂ ಜಗ್ಗದೇ ಬೆಂಕಿ ಹೊತ್ತಿಸಿದರು.

‘ಪ್ರತಿ ವರ್ಷ ಪ್ರವಾಹ ಬರಾಕತ್ತೇತಿ, ನಮಗ ಬೇರೆ ಕಡೆ ಜಾಗೆ ನೀಡವಲ್ಲರ, ಬರಿ ಸಾಮಾನು ತಗೊಂಡು ಸಾಲಿಗೆ (ಕಾಳಜಿಕೇಂದ್ರ) ಹೋಗೂದೂ ಆಗೇತಿ.. ನಾವು ಅಲ್ಲಿಗೆ ಬರೂದಿಲ್ಲ ಊಟ ಮಾಡೋದಿಲ್ಲ..’ ಎಂದು ರೇಖಾ ಮತ್ತು ಸಂಗಡಿಗರು ಪಟ್ಟು ಹಿಡಿದರು.

ಇದರಿಂದ ಪೊಲೀಸರು, ಪಿಡಿಒ, ಕಂದಾಯ ಇಲಾಖೆ ಸಿಬ್ಬಂದಿ ಗೊಂದಲಕ್ಕೀಡಾದರು. ಮನವೊಲಿಸಲು ಮುಂದಾದರು. ಆದರೂ ಕಾಳಜಿ ಕೇಂದ್ರಕ್ಕೆ ತೆರಳಲಿಲ್ಲ. ಕೊನೆಗೆ ತಹಶೀಲ್ದಾರ್ ಅಮರಾವದಗಿ, ಸಿಪಿಐ ನಂದೀಶ ಸ್ಥಳಕ್ಕೆ ಭೇಟಿ ನೀಡಿದರು. ಸಂತ್ರಸ್ತರ ಬೇಡಿಕೆ ಆಲಿಸಿ ಸಮಾಧಾನ ಹೇಳಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದಾಗ ಈ ನಿವಾಸಿಗಳು ಕಾಳಜಿ ಕೇಂದ್ರಕ್ಕೆ ತೆರಳಿ ಊಟ ಮಾಡಿದರು.

‘ನಮ್ಮ ಮನ್ಯಾಗ 3 ಅಡಿಗೂ ಹೆಚ್ಚು ನೀರ ಐತಿ, ಮನಿ ಬಿಟ್ಟ ಮೂರು ದಿನ ಆತು, ಕಳೆದ ವರ್ಷನೂ ಹಿಂಗ ಆತು, ಪರಿಹಾರನೂ ಇಲ್ಲ, ಈಗ ಕೊಡೂದು ಗ್ಯಾರಂಟಿ ಇಲ್ಲ.. ನೀರಾಗ ಜೀವನ ಮಾಡೂದಾಗೇತಿ’ ಎಂದು ಮಹಾದೇವಿ ಅಂಬಿಗೇರ, ರೇಣುಕಾ ಕೊಳ್ಳಾರ ಪ್ರವಾಹದ ಪರಿಣಾಮವನ್ನು ಬಿಚ್ಚಿಟ್ಟರು.

ಇದರ ಜತೆಗೆ ಖಾಜಿ ಓಣಿ, ಗೊಂದಲಿಗರ ಓಣಿಯಲ್ಲೂ ಮನೆಗಳು ಜಲಾವೃತವಾಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜತೆಗೆ ಜಲಾವೃತವಾದ ನಿವಾಸಿಗಳು ಸಂಪೂರ್ಣ ಕಾಳಜಿ ಕೇಂದ್ರಕ್ಕೆ ಬಂದರೆ ಮನೆಯಲ್ಲಿನ ವಸ್ತುಗಳನ್ನು ದೋಚಿಕೊಂಡು ಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಇದರಿಂದ ಕೆಲವರೂ ಪ್ರವಾಹದಲ್ಲಿಯೇನಿಂತು ಮನೆ ಕಾಯುತ್ತಿದ್ದಾರೆ. ಪ್ರವಾಹ ಇದೇರೀತಿ ಮುಂದುವರಿದರೆ ಹೆಚ್ಚಿನ ಮನೆಗಳು ಜಲಾವೃತವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಕೊಣ್ಣೂರ ಗ್ರಾಮಸ್ಥರು ಗೋಳು ತೋಡಿಕೊಂಡರು.

‘100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. 15 ಸಾವಿರ ಕ್ಯುಸೆಕ್‌ ನೀರು ಬಂದರೆ ಈ ಮನೆಗಳು ಜಲಾವೃತವಾಗುವುದು ನಿಶ್ಚಿತ. ಇಂತಹ ಕುಟುಂಬಗಳ ಪಟ್ಟಿ ಮಾಡಿ ಪ್ರತ್ಯೇಕ ನಿವೇಶನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈಗ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಕೆಇಎಸ್ ಕಾಲೇಜಿನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಪ್ರವಾಹ ಕಡಿಮೆಯಾದ ನಂತರ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೊಣ್ಣೂರ ಪಂಚಾಯ್ತಿ ಪಿಡಿಒ ವೈ.ಬಿ.ಸಂಕನಗೌಡರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT