ಬುಧವಾರ, ಮೇ 18, 2022
25 °C
ಇಡೀ ದಿನ ಜಿಟಿ ಜಿಟಿ ಮಳೆ, ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು

ಮಲೆನಾಡಿನಂತಾದ ಗದಗ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೆ ತುಂತುರು ಮಳೆ ಸುರಿಯಿತು. ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಇಡೀ ವಾತಾವರಣ ಮಲೆನಾಡಿನಂತೆ ಬದಲಾಗಿತ್ತು.

ಅವಳಿ ನಗರಗಳಾದ ಗದಗ–ಬೆಟಗೇರಿಯಲ್ಲಿ ಬೆಳಿಗ್ಗೆಯಿಂದ ಸುರಿದ ಮಳೆಯ ಕಾರಣದಿಂದ ದೈನಂದಿನ ಚಟುವಟಿಕೆಗಳು ನಿಧಾನ ಗತಿಯಲ್ಲಿ ಸಾಗಿದವು. ಪ್ರತಿದಿನ ಬೆಳಿಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದ ಹಿರಿಯರು ಮನೆಯಲ್ಲೇ ಉಳಿದರು. ಸಾಮೂಹಿಕ ಯೋಗಾಭ್ಯಾಸ ಮಾಡುತ್ತಿದ್ದವರು ಶುಕ್ರವಾರ ಮನೆಯಲ್ಲೇ ಯೋಗ ಮಾಡಿದರು. ಶಾಲೆಗೆ ಹೋಗುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಕೊಡೆ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು. 

ತುಂತುರು ಮಳೆಯಿಂದಾಗಿ ಬೈಕ್‌ ಸವಾರರು ಆಟೊ, ಕಾರುಗಳನ್ನು ಬಳಕೆ ಮಾಡಿದರು. ಬೈಕ್‌ಗಳ ಓಡಾಟ ಕಡಿಮೆ ಇದ್ದಿದ್ದರಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡುಬರಲಿಲ್ಲ. ಓಣಿ, ಬಡಾವಣೆ ಒಳಗಿರುವ ಮಣ್ಣಿನ ರಸ್ತೆಗಳು ಕೆಸರು ಗುಂಡಿಯಂತಾಗಿದ್ದವು. ಹಾಲು, ಪೇಪರ್‌ ತರಲು ಕೊಡೆ ಹಿಡಿದುಕೊಂಡು ಅಂಗಡಿಗೆ ಹೋಗಿದ್ದ ಕೆಲವರು ಜಾರುತ್ತಿದ್ದ ಮಣ್ಣಿನ ರಸ್ತೆಯಲ್ಲಿ ನಡೆಯಲು ಪರದಾಡಿದರು. ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿಫಲವಾಗಿರುವ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳನ್ನು ಶಪಿಸುತ್ತಾ ಸಂಚರಿಸಿದರು.

ತರಕಾರಿ, ಕಿರಾಣಿ ಮಾರುಕಟ್ಟೆಯಲ್ಲೂ ಜನಸಂದಣಿ ಕಡಿಮೆ ಇತ್ತು. ಅನೇಕರು ಮನೆಯಲ್ಲೇ ಉಳಿದುಕೊಂಡಿದ್ದರಿಂದ ಮಾರುಕಟ್ಟೆಗಳು ಬಣಗುಡುತ್ತಿದ್ದವು. ಹೋಟೆಲ್‌ಗಳಲ್ಲೂ ವಹಿವಾಟು ಕಡಿಮೆ ಆಗಿತ್ತು.

ಶಾಲಾ, ಕಾಲೇಜಿಗೆ ರಜೆ ಇಂದು

ಶನಿವಾರ ಸಹ ಮಳೆ ಮುಂದುವರಿಯುವ ಸೂಚನೆ ಇದ್ದು, ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಆದೇಶ ಹೊರಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು