ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಸಿಗದ ಆಶ್ರಯ, ಬಡವರಿಗೆ ತಪ್ಪದ ಅಲೆದಾಟ..!

ನಿರ್ವಹಣೆ ಇಲ್ಲದೆ ಕಸದ ತೊಟ್ಟಿಗಳಾಗಿ ಬದಲಾಗಿವೆ ಖಾಲಿ ನಿವೇಶನಗಳು
Last Updated 15 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮುಂಡರಗಿ ಪಟ್ಟಣದಲ್ಲಿ ಸಾವಿರಾರು ನಿವೇಶನಗಳು ಖರೀದಿಯಾಗದೆ ಖಾಲಿ ಉಳಿದಿವೆ. ಇನ್ನೊಂದೆಡೆ ಸಾವಿರಾರರು ಸಂಖ್ಯೆಯಲ್ಲಿ ಜನರು ಸ್ವಂತ ಸೂರಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಆಶ್ರಯ ಮನೆಗಳ ಸಮಸ್ಯೆ ಕುರಿತು ಈ ವಾರದ ನಮ್ಮ ನಗರ ನಮ್ಮ ಧ್ವನಿ ಬೆಳಕು ಚೆಲ್ಲಿದೆ.

ಮುಂಡರಗಿ: ಪಟ್ಟಣದ ಹೃದಯ ಭಾಗವೂ ಸೇರಿದಂತೆ ನಗರದ ನಾಲ್ಕೂ ದಿಕ್ಕುಗಳಲ್ಲಿ ಸಾವಿರಾರು ಖಾಲಿ ನಿವೇಶನಗಳು ಖಾಲಿ ಬಿದ್ದಿದ್ದು ಸಾರ್ವಜನಿಕರಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿವೆ. ಪಟ್ಟಣದ ನಿವಾಸಿಗಳಿಗಾಗಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಜತೆಯಲ್ಲೇ, ಈ ಖಾಲಿ ನಿವೇಶನಗಳನ್ನು ನಿರ್ವಹಣೆ ಮಾಡುವುದು ಪುರಸಭೆಗೆ ಸವಾಲಾಗಿದೆ.

ದಶಕದ ಹಿಂದೆ ಪಟ್ಟಣದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಹಣ ಗಳಿಸುವ ಆಸೆಗೆ ಶ್ರೀಮಂತರು ಪಟ್ಟಣದ ಅಕ್ಕ ಪಕ್ಕದ ರೈತರ ಜಮೀನುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಕೃಷಿಯೇತರ ಜಮೀನುಗಳನಾಗಿ ಪರಿವರ್ತಿಸಿದರು. ಆದರೆ, ನಿವೇಶನಗಳಾಗಿ ಪರಿವರ್ತನೆಯಾದ ಈ ಜಮೀನು ನಿರೀಕ್ಷಿತ ರೀತಿಯಲ್ಲಿ ಮಾರಾಟವಾಗಲಿಲ್ಲ. ಇದರ ಪರಿಣಾಮವಾಗಿ ಇಂದು ಪಟ್ಟಣದ ಕೊಪ್ಪಳ ರಸ್ತೆ, ಹೆಸರೂರು ರಸ್ತೆ, ಕೊರ್ಲಹಳ್ಳಿ ರಸ್ತೆ, ಗದಗ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆಗಳ ಪಕ್ಕದಲ್ಲಿ ಸಾವಿರಾರು ನಿವೇಶನಗಳು ಖಾಲಿ ಉಳಿದಿವೆ.

ಪುರಸಭೆಯ ಅಂಕಿ ಅಂಶದಂತೆ ಪಟ್ಟಣದ ಸುತ್ತಮುತ್ತಲೂ ಸದ್ಯ 4 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು, ಇದನ್ನುಖರೀದಿಸುವವರೇ ಇಲ್ಲವಾಗಿದ್ದಾರೆ. ಸ್ಥಿತಿವಂತರು ಜಮೀನು ಖರೀದಿಸಿ ಎಲ್ಲವನ್ನೂ ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ. ಹೀಗಾಗಿ ಪಟ್ಟಣದ ಹೊರಭಾಗದಲ್ಲಿಯೂ ಸಹಿತ ಒಂದು ಗುಂಟೆ ನಿವೇಶನ ಖರೀದಿಸಲು ಕನಿಷ್ಠ ₹5 ಲಕ್ಷ ತೆರಬೇಕಾಗಿದೆ.

ಖಾಲಿ ನಿವೇಶನಗಳಲ್ಲಿ ಮುಳ್ಳಿನ ಗಿಡಗಳು ಬೆಳೆದು ಇವು ಹಂದಿಗಳ ಆವಾಸ ಸ್ಥಾನವಾಗಿ ಬದಲಾಗಿದೆ. ಖಾಲಿ ನಿವೇಶನದ ಅಕ್ಕಪಕ್ಕದ ಜನರು ಹಂದಿ ಹಾಗೂ ಬೀದಿ ನಾಯಿಗಳೊಂದಿಗೆ ವಾಸಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೂತನ ಬಡಾವಣೆಗಳಲ್ಲಿ ಸೂಕ್ತ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ಖಾಲಿ ನಿವೇಶನಗಳು ಕೃಷಿ ಹೊಂಡಗಳಾಗಿ ಬದಲಾಗುತ್ತವೆ. ಇಲ್ಲಿ ಮಳೆ, ತ್ಯಾಜ್ಯದ ನೀರು ಸಂಗ್ರಹಗೊಂಡು ಸೊಳ್ಳೆಗಳ ಕೇಂದ್ರಗಳಾಗುತ್ತವೆ. ಇದರಿಂದ ಡೆಂಗಿ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಪಟ್ಟಣದಲ್ಲಿ ಸಾಮಾನ್ಯವಾಗಿವೆ.

ಸಾವಿರಾರು ಖಾಲಿ ನಿವೇಶನಗಳಿದ್ದರೂ, ಪಟ್ಟಣದ 5 ಸಾವಿರಕ್ಕೂ ಹೆಚ್ಚು ಜನರು ವಾಸಿಸಲು ಮನೆಗಳಿಲ್ಲದೆ ಗುಡಿಸಲುಗಳಲ್ಲೇ ವಾಸಿಸುತ್ತಿದ್ದಾರೆ. ಆಶ್ರಯ ಮನೆಗಳಿಗಾಗಿ ಪಟ್ಟಣದ 3162 ಜನರು ಪುರಸಭೆಗೆ ಅರ್ಜಿ ಸಲ್ಲಿಸಿದ್ದಾರೆ. ನಿತ್ಯ ನೂರಾರು ಜನರು ಆಶ್ರಯ ಮನೆಗಾಗಿ ಪುರಸಭೆಗೆ ಅಲೆದಾಡುತ್ತಿದ್ದಾರೆ. ಪ್ರತಿಬಾರಿ ಅರ್ಜಿ ಸಲ್ಲಿಸುವಾಗಲೂ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹೊಂದಿಸುವುದರಲ್ಲಿ ಹೈರಾಣಾಗುತ್ತಿದ್ದಾರೆ.

ಆಶ್ರಯ ಮನೆಗಾಗಿ ಪುರಸಭೆ ಖರೀದಿಸಿರುವ ಜಮೀನಿನಲ್ಲಿ ಕಚ್ಚಾ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. 25 ಎಕರೆ ಪ್ರದೇಶದಲ್ಲಿ 1008 ಮನೆಗಳನ್ನು ನಿರ್ಮಿಸಲು ಸಾಧ್ಯವಿದ್ದು, ಉಳಿದವರಿಗೆ ಆಶ್ರಯ ದೊರೆಯುವುದು ಅನುಮಾನವಾಗಿದೆ. ಅರ್ಜಿ ಸಲ್ಲಿಸಿರುವವರು ಯಾವ ಪಕ್ಷದವರು, ಯಾವ ಜಾತಿಯವರು ಮೊದಲಾದ ಲೆಕ್ಕಾಚಾರಗಳ ಆಧಾರದ ಮೇಲೆ ಈ ಮನೆಗಳನ್ನು ಹಂಚಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.

ಎಸ್.ಎಸ್.ಪಾಟೀಲ ನಗರ, ಭೀಮಾಂಬಿಕಾ ಕಾಲೊನಿ, ಹುಡ್ಕೊ ಕಾಲೊನಿಯಲ್ಲಿ ನಿರ್ಮಿಸುವ ಬಹುತೇಕ ಆಶ್ರಯ ಮನೆಗಳು ಬಡವರ ಬದಲು ಶ್ರೀಮಂತರ ಪಾಲಾಗಿವೆ. ಸ್ಥಿತಿವಂತರು ಬಡವರಿಗೆ ನಿರ್ಮಿಸಿದ ಮನೆಗಳನ್ನು ಹಿಂಬಾಗಿಲಿನಿಂದ ಹೊಡೆದುಕೊಂಡು ಅವುಗಳನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ‘ಈಗ ಮತ್ತೆ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡದೆ, ಶ್ರೀಮಂತರಿಗೆ ವಿತರಿಸಿದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಹೋರಾಟಗಾರ ವೈ.ಎನ್.ಗೌಡರ.

ಧೈರ್ಯ ತೋರಿಸದ ಪುರಸಭೆ ಅಧಿಕಾರಿಗಳು
ಖಾಲಿ ನಿವೇಶನಗಳು ಪಟ್ಟಣದ ಸೌಂದರ್ಯ, ಸ್ವಚ್ಛತೆಗೆ ಹಾಗೂ ಸಾರ್ವಜನಿಕರಿಗೆ ಬಹುದೊಡ್ಡ ತೊಡಕಾಗಿವೆ. ಪೊದೆಗಳಿಂದ ಆವೃತ್ತವಾಗಿರುವ ಖಾಲಿ ನಿವೇಶನಗಳನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸಿ ಅದರ ಖರ್ಚನ್ನು ನಿವೇಶನದ ಮಾಲೀಕರಿಂದ ವಸೂಲು ಮಾಡಿಕೊಳ್ಳುವ ಅಥವಾ ನಿವೇಶನದ ಉತಾರಕ್ಕೆ ಸೇರಿಸಲು ಪುರಸಭೆಗೆ ಅಧಿಕಾರವಿದೆ. ಆದರೆ, ಪುರಸಭೆಯ ಯಾವ ಅಧಿಕಾರಿಯೂ ಇದುವರೆಗೆ ಈ ಧೈರ್ಯ ತೋರಿಸಿಲ್ಲ. ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿ ಬದಲಾಗಿವೆ.

ಆಶ್ರಯ ಮನೆಗಳು ನಿರ್ಮಾಣವಾಗಿಲ್ಲ
ಪಟ್ಟಣದ ಬಡ ಜನರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಹಿಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಮೂರು ವರ್ಷಗಳ ಹಿಂದೆ ಪಟ್ಟಣದ ಹೊರವಲಯದಲ್ಲಿ 25ಎಕರೆ ಜಮೀನು ಖರೀದಿಸಿದ್ದರು. ಆದರೆ, ಅಲ್ಲಿ ಈವರೆಗೂ ಮನೆಗಳ ನಿರ್ಮಾಣ ಆಗಿಲ್ಲ. ಮನೆಗಳನ್ನು ನಿರ್ಮಿಸಿಕೊಡುವಂತೆ ಆಗ್ರಹಿಸಿ ಪಟ್ಟಣದ ನಿವಾಸಿಗಳು ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಆಶ್ರಯ ಮನೆಗಾಗಿ ಆಗ್ರಹಿಸಿದ ಇತ್ತೀಚೆಗೆ ಮುಂಡರಗಿ ಪಟ್ಟಣದಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಆದರೂ ಸ್ವಂತ ಸೂರಿನ ಭರವಸೆ ಲಭಿಸಿಲ್ಲ.

*
ಆಶ್ರಯ ಮನೆಗಳನ್ನು ನಿರ್ಮಿಸಲು ಜಮೀನು ಖರೀದಿಸಿದರೂ ಅಲ್ಲಿ ಮನೆಗಳನ್ನು ನಿರ್ಮಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮೀನ–ಮೇಷ ಎಣಿಸುತ್ತಿದ್ದಾರೆ.
-ಮಂಜುನಾಥ ಕಾಗನೂರಮಠ, ಆಶ್ರಯ ಮನೆ ಹೋರಾಟಗಾರ

*
ಪುರಸಭೆಯ ಅಧಿಕಾರಿಗಳು ಹೇಳಿರುವ ಎಲ್ಲ ದಾಖಲೆಗಳನ್ನು ನೀಡಿದ್ದೇವೆ. ಆದರೂ ನಮಗೆ ಆಶ್ರಯ ಮನೆಗಳು ಮಂಜೂರಾಗಿಲ್ಲ. ಇದಕ್ಕಾಗಿ ಅಲೆದು ಸಾಕಾಗಿದೆ.
-ಫರ್ವಿನ್‌ ಬಾನು ನದಾಫ, ರತ್ಮವ್ವ ಮಡಿವಾಳರ, ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿರುವವರು

*
ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಖರೀದಿಸಿರುವ ಜಮೀನಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಾಗಿದೆ. ಅರ್ಹರಿಗೆ ಆದಷ್ಟು ಬೇಗ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು.
-ಎಸ್.ಎಚ್. ನಾಯಕ, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT