ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಮೂಲಸೌಕರ್ಯ ವಂಚಿತ ಬಿಜ್ಜೂರ ಗ್ರಾಮ

ರಸ್ತೆ, ಚರಂಡಿಗಳಿಲ್ಲದೆ ಗಬ್ಬು ನಾರುತ್ತಿರುವ ಗ್ರಾಮ
ನಿಂಗಪ್ಪ ಹಮ್ಮಿಗಿ
Published 31 ಜನವರಿ 2024, 5:51 IST
Last Updated 31 ಜನವರಿ 2024, 5:51 IST
ಅಕ್ಷರ ಗಾತ್ರ

ಶಿರಹಟ್ಟಿ: ಗ್ರಾಮದ ಯಾವುದೇ ಬಡಾವಣೆಯಲ್ಲಿ ಸಂಪೂರ್ಣ ಸಿಸಿ ರಸ್ತೆ ಇಲ್ಲ, ಕೊಳಚೆ ನೀರು ಹರಿಯಲು ಯಾವುದೇ ವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿಲ್ಲ. ಶವ ಸಂಸ್ಕಾರಕ್ಕೆ ಸ್ಮಶಾನದ ತೊಂದರೆ ಅನುಭವಿಸುತ್ತಿರುವ ಬಿಜ್ಜೂರು ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲದಂತಾಗಿದೆ.

ತಾಲ್ಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯ್ತಿಗೆ ಒಳಪಡುವ ಬಿಜ್ಜೂರು ಗ್ರಾಮದಲ್ಲಿ ಸುಮಾರು 1100 ರಿಂದ 1200 ಜನಸಂಖ್ಯೆ ಇದ್ದು, 3 ಜನ ಸದಸ್ಯರನ್ನು ಒಳಗೊಂಡಿದೆ. ಕೇವಲ ಗ್ರಾಪಂ ಸದಸ್ಯರ ಕಿರು ಅನುದಾನದಲ್ಲಿ ಆಮೆಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮಕ್ಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದೊಡ್ಡ ಅನುದಾನ ನೀಡಿ ಶೀಘ್ರ ಅಭಿವೃದ್ಧಿ ಮಾಡುವ ಗೋಜಿಗೆ ಹೋಗಿಲ್ಲ.

ಸಿಸಿ ರಸ್ತೆಗಳ ಕೊರತೆ

ಗ್ರಾಮದ ಯಾವ ಬಡಾವಣೆಯಲ್ಲಿಯೂ ಸಂಪೂರ್ಣ ಸಿಸಿ ರಸ್ತೆ ಆಗಿಲ್ಲ. ರಸ್ತೆಗಳನ್ನು ಮೆಟ್ಟಿಂಗ್ ಹಂತದಲ್ಲಿ ಹಾಗೇ ಬಿಟ್ಟಿದ್ದು, ಕಲ್ಲಿನ ಹಾಸಿಗೆಯಂತಾಗಿವೆ. ಇಂತಹ ಕಚ್ಚಾ ರಸ್ತೆಯಲ್ಲಿ ನಿತ್ಯ ಸಂಚರಿಸುವ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಕ್ಕಳು ಹಾಗೂ ವಯೋವೃದ್ದರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಗ್ರಾಮದ ರೈತರು ತಾವು ಬೆಳೆದ ಬೆಳೆಗಳನ್ನು ಮನೆಗೆ ತರಲು ಸಹ ಹರಸಾಹಸಪಡವಂತಾಗಿದೆ.

ಸ್ಮಶಾನದ ಸಮಸ್ಯೆ

ಗ್ರಾಮದಲ್ಲಿ ಬಹುತೇಕ ನಾಲ್ಕು ಸಮಾಜದ ಜನರು ಹೆಚ್ಚು ವಾಸವಾಗಿದ್ದು, ಅರವರವ ಪದ್ದತಿಯಂತೆ ಶವ ಸಂಸ್ಕಾರ ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಪ್ರತಿ ಸಮಾಜಕ್ಕೆ ಇಂತಿಷ್ಟು ರುದ್ರಭೂಮಿಗೆ ಜಮೀನು ಖರೀದಿ ಮಾಡುವಂತಾಗಬೇಕು. ಕೆಲವರು ರುದ್ರಭೂಮಿ ಇಲ್ಲದೆ ಗ್ರಾಮದ ಹೊರವಲಯದಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಗ್ರಾಮಕ್ಕೆ ರುದ್ರಭೂಮಿ ಜಮೀನು ಖರೀದಿ ಮಾಡಬೇಕೆಂಬುದು ಗ್ರಾಮಸ್ಥರ ಅಳಲು.

ಅನುದಾನಕ್ಕೆ ಕಾಯುತ್ತಿರುವ ಗ್ರಾಮ

ಗ್ರಾಮದ ಯಾವುದೇ ಅಭಿವೃದ್ಧಿಗೆ ಯಾವುದೇ ದೊಡ್ಡ ಅನುದಾನ ಬಂದಿಲ್ಲ. ಗ್ರಾಮಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕಾದರೆ ಕ್ಷೇತ್ರದ ಶಾಸಕರು ನಮ್ಮ ಗ್ರಾಮಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಬೇಕು. ಅಲ್ಲದೇ ಅನುದಾನವನ್ನು ನೀಡಿ ರಸ್ತೆ, ಚರಂಡಿಯಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮಸ್ಥರ ಬೇಡಿಕೆ.

ವೈಜ್ಞಾನಿಕ ಚರಂಡಿಗಳಿಲ್ಲದೆ ಗಲೀಜು ನೀರು ರಸ್ತೆಯ ಮೇಲೆ ಹರಿಬಿಟ್ಟಿರುವುದು
ವೈಜ್ಞಾನಿಕ ಚರಂಡಿಗಳಿಲ್ಲದೆ ಗಲೀಜು ನೀರು ರಸ್ತೆಯ ಮೇಲೆ ಹರಿಬಿಟ್ಟಿರುವುದು

ಗಬ್ಬು ನಾರುತ್ತಿರುವ ಗ್ರಾಮ ಗ್ರಾಮದ ಯಾವ ಬಡಾವಣೆಯಲ್ಲಿಯೂ ಸಹ ವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿಲ್ಲ. ಮನೆಗಳಲ್ಲಿನ ಗಲೀಜು ನೀರು ಸರಾಗವಾಗಿ ಹರಿಯಲು ಚರಂಡಿ ಇಲ್ಲದೇ ಇರುವುದರಿಂದ ರಸ್ತೆಯ ಮೇಲೆಯೇ ನಿಲ್ಲುತ್ತದೆ. ಮಳೆಗಾಲದಲ್ಲಿ ಚರಂಡಿ ನೀರು ಹಾಗೂ ಮಳೆ ನೀರು ಮಿಶ್ರಣಗೊಂಡು ರಸ್ತೆಯಲ್ಲಿಯೇ ನಿಂತು ಕೆಸರುಗದ್ದೆಗಳಾಗುತ್ತವೆ. ಸದ್ಯ ಗಲೀಜು ನೀರು ರಸ್ತೆಯ ಮೇಲೆ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ದಿನಪೂರ್ತಿ ದಣಿದು ಬಂದ ಜನರಿಗೆ ರಾತ್ರಿಯಿಡೀ ನಿದ್ದೆಯಾಗುತ್ತಿಲ್ಲ. ಅಲ್ಲದೇ ಸಾಂಕ್ರಾಮಿಕ ರೋಗಗಳ ಭಯ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಕಿರು ಅನುದಾನ ಗ್ರಾಮದಲ್ಲಿ ಆಯ್ಕೆಯಾದ ಮೂವರು ಗ್ರಾಮ ಪಂಚಾಯಿತಿ ಸದಸ್ಯರು ತಮಗೆ ನೀಡುತ್ತಿರುವ ಕಿರು ಅನುದಾನದಲ್ಲಿಯೇ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿಲ್ಲಿಯೂ ಸಹ ಚರಂಡಿ ಕಾಮಗಾರಿ ಮುಂದುವರೆಸುತ್ತಿದ್ದಾರೆ. ಅನುದಾನ ಯಾರ ಮನೆ ಮುಂದೆ ಖಾಲಿ ಆಗುತ್ತೋ ಅವರ ಮನೆಮುಂದೆ ಕಾಮಗಾರಿ ನಿಲ್ಲಿಸುವ ದುಃಸ್ಥಿತಿ ಎದುರಾಗಿದೆ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT