ಕಾಲಕಾಲೇಶ್ವರ ದೇವಸ್ಥಾನದ ಐತಿಹ್ಯ
ಹಿಂದೆ ಆನೆಗುಂದಿ ಅರಸನು ತನ್ನ ಸೈನ್ಯದೊಂದಿಗೆ ಇಲ್ಲಿ ಬಿಡಾರ ಹೂಡಿದ್ದನಂತೆ. ಆಗ ಒಬ್ಬ ಸಾಧು ರಾಜನ ಬಿಡಾರದ ಹತ್ತಿರ ಬಂದಾಗ ರಾಜ ಅವರನ್ನು ಸತ್ಕರಿಸಿ ನಿಮಗೆ ಏನು ಬೇಕು ಕೇಳಿ? ಎಂದಾಗ ಆ ಸಾಧು ರಾಜನ ಪಟ್ಟದಾನೆಯ ಕೊರಳಲ್ಲಿದ್ದ ಬೃಹತ್ ಗಾತ್ರದ ಗಂಟೆ ಕೇಳಿದ್ದರು. ಆದರೆ ಅದನ್ನು ಹೊರುವ ಶಕ್ತಿ ನಿಮಗಿಲ್ಲ ಎಂದು ರಾಜ ಕುಹಕವಾಡಿದನು. ಬೆಳಗಾಗುವುದರೊಳಗೆ ಆನೆ ಕೊರಳಲ್ಲಿನ ಗಂಟೆ ಮಾಯವಾಗಿತ್ತು. ಇದರಿಂದ ಚಕಿತಗೊಂಡ ರಾಜ ಬೆಟ್ಟದ ತಪ್ಪಲಿನಲ್ಲಿ ಗಂಟೆಯನ್ನು ಹುಡುಕುವಂತೆ ಸೈನಿಕರಿಗೆ ತಿಳಿಸಿದಾಗ ಬೆಟ್ಟದ ತಪ್ಪಲಿನಲ್ಲಿ ಇದ್ದ ಗುಹೆಯಲ್ಲಿ ಉದ್ಬವಲಿಂಗ ಇರುವುದು ತಿಳಿಯಿತು. ಅದೇ ಇಂದಿನ ಕಾಲಕಾಲೇಶ್ವರ ಲಿಂಗವಾಗಿದೆ ಎಂಬ ಪ್ರತೀತಿ ಇದೆ. ಇನ್ನೊಂದು ಐತಿಹ್ಯದ ಪ್ರಕಾರ ಬೆಟ್ಟದಲ್ಲಿ ನೆಲೆಸಿದ್ದ ಗಜಾಸುರನೆಂಬ ರಾಕ್ಷಸ ನೆಲೆಸಿದ್ದನೆಂದು ಅವನ ಉಪಟಳ ತಾಳಲಾರದೆ ಋಷಿ ಮುನಿಗಳು ಶಿವನಿಗೆ ಮೊರಯಿಟ್ಟಾಗ ಶಿವನು ಆ ರಾಕ್ಷಸನನ್ನು ಸಂಹರಿಸಿ ಅವನ ಚರ್ಮವನ್ನು ಸುತ್ತಿಕೊಂಡಿದ್ದರಿಂದ ಗಜಚರ್ಮಾಂಬರನಾಗಿ ಇಲ್ಲಿಯೇ ನೆಲೆಸಿದನೆಂದು ಹೇಳಲಾಗುತ್ತದೆ. ಇಲ್ಲಿನ ಗರ್ಭಗೃಹದ ಬದಿಯಲ್ಲಿರುವ ಶಾಸನ ಯಲಬುರ್ಗಿಯ ಸಿಂಧರು ಈ ದೇವಾಲಯಕ್ಕೆ ದತ್ತಿ ನೀಡಿರುವ ಕುರಿತು ಮಾಹಿತಿ ನೀಡುತ್ತದೆ.