ಲಕ್ಷ್ಮೇಶ್ವರ: ನೂರಾರು ವರ್ಷಗಳ ಹಿಂದೆ ಕಲಾವಿದರೊಬ್ಬರು ಸಿದ್ಧಪಡಿಸಿದ ಪಟ್ಟಣದಲ್ಲಿ ಮಣ್ಣಿನಿಂದ ನಿರ್ಮಾಣಗೊಂಡಿರುವ ಕೋಟೆಯಲ್ಲಿರುವ ಗಣಪನಿಗೆ ಸೂಕ್ತ ರಕ್ಷಣೆಯ ಅಗತ್ಯ ಇದೆ. ವಿಶೇಷವಾಗಿ ಸಿದ್ಧಗೊಂಡಿರುವ ಈ ಕಿಟ್ಟದ ಗಣಪ ಇಂದಿಗೂ ಐತಿಹಾಸಿಕ ಪ್ರಸಿದ್ಧ. ಮಣ್ಣಿನ ಕೋಟೆಯನ್ನು ಕಾಯುತ್ತಿರುವ ಈ ಗಣಪತಿಗೆ ತನ್ನದೇಯಾದ ಇತಿಹಾಸವಿದೆ.
ಅಂದಾಜು 7-8 ಎಕರೆ ವಿಶಾಲ ಜಾಗೆಯಲ್ಲಿ ಹರಡಿಕೊಂಡಿರುವ ಮಣ್ಣಿನ ಕೋಟೆಯಲ್ಲಿ ಗಣಪ ಪ್ರತಿಷ್ಠಾಪನೆಗೊಂಡು ಇಂದಿಗೂ ಜನರಿಂದ ಪೂಜಿಸಲ್ಪಡುತ್ತಿದ್ದಾನೆ. ‘ಲಕ್ಷ್ಮಣರಸ ಎಂಬ ರಾಜ 6-8ನೇ ಶತಮಾನದಲ್ಲಿ ಈ ಕೋಟೆ ಕಟ್ಟಿಸಿರಬೇಕು’ ಎಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಪೂರ್ಣಾಜಿ ಖರಾಟೆ ಕೋಟೆಯ ಇತಿಹಾಸ ಬಿಚ್ಚಿಡುತ್ತಾರೆ. ನಂತರ ಲಕ್ಷ್ಮೇಶ್ವರ ಮಿರಜ ಸಂಸ್ಥಾನಿಕರ ಆಡಳಿತದ ಸುಪರ್ದಿಗೆ ಬಂದಿತು. ಸಂಸ್ಥಾನಿಕರು ಈ ಕೋಟೆಯನ್ನೇ ತಮ್ಮ ನಿವಾಸವನ್ನಾಗಿ ಬದಲಾಯಿಸಿಕೊಂಡರು’ ಎಂದು ಅವರು ತಿಳಿಸಿದರು.
ಈ ಮಣ್ಣಿನ ಕೋಟೆ ಅನೇಕ ರಹಸ್ಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದು ಇಂದಿಗೂ ಜನರ ಕುತೂಹಲದ ವಸ್ತುವಾಗಿದೆ. ರಾಜರ ಆಡಳಿತ ಸಮಯದಲ್ಲಿ ಊರನ್ನು ಕಾಯಲು ಎತ್ತರವಾದ ಕೋಟೆ ಕಟ್ಟಲಾಗುತ್ತಿತ್ತು. ಇಂಥ ಕೋಟೆಗಳನ್ನು ವಿಶೇಷವಾಗಿ ಮಣ್ಣಿನಿಂದಲೇ ಕಟ್ಟುತ್ತಿದ್ದರು. ಈ ಮಣ್ಣಿನ ಕೋಟೆಗಳಿಗೆ ‘ಹುಡೆ’ ಎಂದೂ ಅವುಗಳನ್ನು ಕಾಯುತ್ತಿದ್ದವರಿಗೆ ‘ಹುಡೇದ’ ಎಂದೂ ಕರೆಯುತ್ತಿದ್ದರು. ಈಗಲೂ ಹುಡೆ ಇರುವ ಊರಲ್ಲಿ ಹುಡೇದ ಎಂಬ ಅಡ್ಡ ಹೆಸರಿನ ಮನೆತನಗಳು ಇರುವುದನ್ನು ಗಮನಿಸಬಹುದು. ಆ ಸಮಯದಲ್ಲಿ ಅವರು ಈ ಕಿಟ್ಟದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂದು ತಿಳಿದು ಬರುತ್ತದೆ.
ಮೂರ್ತಿಯ ವಿಶೇಷ: ಹುಣಸೆ ಬೀಜದ ಹಿಟ್ಟು, ಮೀನಸೆರಿ, ಆಕಳ ಸೆಗಣಿ ಹಾಗೂ ಕಟ್ಟಿಗೆ ಪುಡಿಯಿಂದ ಈ ವಿನಾಯಕನನ್ನು ಕಲಾವಿದ ಅತ್ಯಂತ ನಾಜೂಕಾಗಿ ತಯಾರಿಸಿದ್ದಾನೆ. ನೂರಾರು ವರ್ಷ ಹಳೆಯದಾದರೂ ಇಂದಿಗೂ ಮೂರ್ತಿ ತನ್ನ ಅಂದ ಮತ್ತು ಕಳೆ ಉಳಿಸಿಕೊಂಡಿದೆ.
ಸಂಸ್ಥಾನಿಕರ ಆಡಳಿತ ಕೊನೆಗೊಂಡ ನಂತರ ಅವರು ಆಡಳಿತ ನಡೆಸುತ್ತಿದ್ದ ಕಟ್ಟಡದಲ್ಲಿ ನ್ಯಾಯಾಲಯ ಸ್ಥಾಪನೆಗೊಂಡಿತು. ಅಂದಿನಿಂದ ಈ ಗಣಪತಿಯ ಪೂಜೆ ನ್ಯಾಯಾಲಯದ ಸುಪರ್ದಿಗೆ ಒಳಪಟ್ಟಿತು. ಪ್ರತಿದಿನ ನ್ಯಾಯಾಲಯದ ಸಿಬ್ಬಂದಿ ವಿಘ್ನೇಶನಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸುತ್ತಿದ್ದರು.
ನಂತರ ಕಂದಾಯ ಇಲಾಖೆ ಕಚೇರಿ ಇಲ್ಲಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆಗ ಗಜಾನನ ಪೂಜೆ ಕಂದಾಯ ಇಲಾಖೆಗೆ ಬಂತು. ಆದರೆ ಇದೀಗ ಇಲಾಖೆ ತಹಶೀಲ್ದಾರರ ಕಚೇರಿ ನೂತನ ಕಟ್ಟಡಕ್ಕೆ ಸ್ಥಳಾಂತಗೊಂಡಿದೆ. ಆದರೆ ಈಗಲೂ ಕಂದಾಯ ಇಲಾಖೆಯವರೇ ಪೂಜೆ ಮಾಡುತ್ತಿದ್ದಾರೆ.
ವಿಘ್ನನಿವಾರಕನ ಮೂರ್ತಿ ಇರುವ ನೂರಾರು ವರ್ಷಗಳ ಹಿಂದಿನ ಕಟ್ಟಡ ಇದೀಗ ಸಂಪೂರ್ಣ ಶಿಥಿಲಗೊಂಡಿದ್ದು ಕೋಟೆ ಗಣೇಶ ಅನಾಥನಾಗುವ ಸ್ಥಿತಿ ಬಂದೊದಗಿದೆ. ಕಟ್ಟಡ ಖಾಲಿ ಉಳಿದಿರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅದರ ಜೊತೆ ಗಣಪನನ್ನೂ ಕಾಳಜಿ ಮಾಡುವವರು ಇಲ್ಲದಂತಾಗಿದೆ. ಹೀಗಾಗಿ ಇತಿಹಾಸ ಸಾರುವ ಈ ಕಿಟ್ಟದ ಕೋಟೆ ಗಣಪ ಕಿಡಿಗೇಡಿಗಳ ಕೈಗೆ ಸಿಕ್ಕು ಮುಕ್ಕಾಗುವ ಭಯವೂ ಇದೆ.
ಸತತ ಪೂಜೆಯಿಂದ ಸಂಪ್ರೀತನಾಗಿ ಊರಿಗೆ ಒಳ್ಳೆಯದನ್ನು ಮಾಡುತ್ತಿದ್ದ ಮೂಷಿಕವಾಹನ ಸದ್ಯ ನಿರ್ಲಕ್ಯಕ್ಕೆ ಒಳಗಾಗುತ್ತಿದ್ದಾನೆ. ಆತ ನೆಲೆಸಿರುವ ಕಟ್ಟಡ ಕುಸಿದು ಬೀಳುತ್ತಿದೆ. ಮೂರ್ತಿ ಇರುವ ಕೊಠಡಿಗೂ ಧಕ್ಕೆ ಆಗುವ ಸಂಭವ ಇದೆ. ಹಾಗೇನಾದರೂ ಕಟ್ಟಡ ಬಿದ್ದು ಮೂರ್ತಿಗೆ ಧಕ್ಕೆ ಆದರೆ ಊರಿಗೆ ಕೇಡು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ಕೋಟೆ ಗಣಪ ಇರುವ ಕಟ್ಟಡ ಶಿಥಿಲಗೊಂಡಿದೆ. ಇಡೀ ಕಟ್ಟಡ ಬಿದ್ದು ಮೂರ್ತಿಗೆ ಧಕ್ಕೆ ಆಗುವ ಮುನ್ನವೇ ದೇವಸ್ಥಾನ ನಿರ್ಮಿಸಿ ಅಲ್ಲಿ ಮೂರ್ತಿ ಪ್ರತಿಷ್ಠಾಪಿಸಬೇಕು
-ಬಿ.ಎಸ್. ಬಾಳೇಶ್ವರಮಠ ಸಾಮಾಜಿಕ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.