ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌ಗಜೇಂದ್ರಗಡ: ಸಕ್ಕರೆ ಗೊಂಬೆ ಮಾರಾಟಕ್ಕೆ ಬರದ ಬರೆ

Published 27 ನವೆಂಬರ್ 2023, 5:12 IST
Last Updated 27 ನವೆಂಬರ್ 2023, 5:12 IST
ಅಕ್ಷರ ಗಾತ್ರ

ಗಜೇಂದ್ರಗಡ: ಗೌರಿ ಗೌರಿ ಗಾಣಾ ಗೌರಿ ಮೇಣಾಧಾರಿ, ಕುಂಕುಮಧಾರಿ, ಅಣ್ಣನಂತ ಅವರಿಕೋಲ್ ಅವರಿಕೋಲ್, ತಮ್ಮನಂತ ತವರಿಕೋಲ್ ತವರಿಕೋಲ್, ನಿಲ್ಲವ್ವ ನಿಲ್ಲವ್ವ ಗೌರವ್ವಾ ಗೌರವ್ವಾ, ವರ್ಷಕ್ಕೊಮ್ಮೆ ಕರಿಸಿದ್ಯಾ ಕರಿಸಿದ್ಯಾ, ಅರಿಷಿಣ ಪತ್ತಲಾ ಉಡಿಸಿದ್ಯಾ ಉಡಿಸಿದ್ಯಾ....

ಗೌರಿ ಹುಣ್ಣಿಮೆ ದಿನ ಮಹಿಳೆಯರು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳು, ಕಣಕದ ಆರತಿ, ಹೊನ್ನಂಬರಿ ಹೂವು, ಹಣ್ಣಿ ಹೂ ಇಟ್ಟುಕೊಂಡು ಗೌರಮ್ಮನನ್ನು ಪ್ರತಿಷ್ಠಾಪಿಸಿದವರ ಮನೆಗೆ ಆರತಿ ಬೆಳಗಲು ಹೋಗುವಾಗಿ ಹಾಡುವ ಹಾಡುಗಳು.

ಗೌರಿ ಹುಣ್ಣಿಮೆ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶದಲ್ಲಿ ಸಡಗರ ಸಂಭ್ರಮ ಮನೆ ಮಾಡುತ್ತದೆ. ಒಂದು ವಾರದ ಮೊದಲೇ ಓಣಿಯ ಮಹಿಳೆಯರು ಒಂದೆಡೆ ಸೇರಿ ರಾತ್ರಿ ಪದ ಹಾಡುವುದು, ಪರಸ್ಪರ ಕೈ ಹಿಡಿದುಕೊಂಡು ಸಕ್ಕಾ ಸರಗಿ ಆಡುತ್ತಿದ್ದರು. ಆದರೆ ಆಧುನಿಕತೆ ಭರಾಟೆಯಲ್ಲಿ ಇವೇಲ್ಲ ಕಣ್ಮರೆಯಾಗಿವೆ.

ಹುಣ್ಣಿಮೆ ದಿನ ಹೆಣ್ಣು ಮಕ್ಕಳು ಹೊಸ ಸೀರೆ ತೊಟ್ಟು ಗೆಳತಿಯರೊಂದಿಗೆ ಆರತಿ ತಟ್ಟೆಗಳನ್ನು ಹಿಡಿದು ಹಾಡುತ್ತ ಗೌರಮ್ಮನನ್ನು ಪ್ರತಿಷ್ಠಾಪಿಸಿದವರ ಮನೆಗೆ ತೆರಳಿ ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಅಲ್ಲದೆ ಹೊಸದಾಗಿ ಮದುವೆ ನಿಶ್ಚಯವಾದವರು ಸಕ್ಕರೆ ಗೊಂಬೆ, ಹೊಸ ಸೀರೆ ಮತ್ತು ದಂಡಿಗಳನ್ನು ತೆಗೆದುಕೊಂಡು ವಧುವಿನ ಮನೆಗೆ ಹೋಗುವುದು ಸಂಪ್ರದಾಯವಿದೆ. ಈ ಬಾರಿ ಬರಗಾಲ ಆವರಿಸಿರುವುದರಿಂದ ಗೌರಿ ಹುಣ್ಣಿಮೆ ಸಂಭ್ರಮ ಜನರಲ್ಲಿ ಕಾಣುತ್ತಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆಗಳ ವ್ಯಾಪಾರವೂ ಕುಸಿದಿದೆ.

ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸಕ್ಕರೆ ಗೊಂಬೆಗಳು: ಗೌರಿ ಹುಣ್ಣಿಮೆಗೆ ಒಂದೆರಡು ವಾರದ ಮೊದಲೇ ತಯಾರಕರು ಸಕ್ಕರೆ ಗೊಂಬೆಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಅಚ್ಚಿನಿಂದ ಸಕ್ಕರೆಯ ಆನೆ, ಒಂಟೆ, ಕುದುರಿ, ತೇರು, ಕೂರಿಗೆ ಹೀಗೆ ವಿವಿಧ ಆಕೃತಿಯ ಬಣ್ಣ ಬಣ್ಣದ ಸಕ್ಕರೆ ಗೊಂಬೆಗಳು ತಯಾರಾಗುತ್ತವೆ. ವ್ಯಾಪಾರಸ್ಥರು ಕಳೆದೊಂದು ವಾರದಿಂದ ಸಕ್ಕರೆ ಗೊಂಬೆಗಳನ್ನ ಮಾರಾಟ ಮಾಡುತ್ತಿದ್ದಾರೆ.

‘ನಮ್ಮ ಮನೆಯಲ್ಲಿ ಸಂಪ್ರದಾಯದಂತೆ ಗೌರಮ್ಮನ ಮೂರ್ತಿ ಪ್ರತಿಷ್ಠಾಪಿಸಿ ಅದರ ಮುಂದೆ ಐದು ಮಣ್ಣಿನ ಗೊಂಬೆಗಳನ್ನು ಮಾಡಿಟ್ಟು ಪೂಜಿಸುತ್ತೇವೆ. ಗೌರಿ ಹುಣ್ಣಿಮೆಯಾದ ಎರಡು ದಿನಗಳ ನಂತರ ಪೂಜೆ ಮಾಡಿ ಬಾವಿಯಲ್ಲಿ ಹಾಕಿ ಬರುತ್ತೇವೆ’ ಎನ್ನುತ್ತಾರೆ ರಾಜೂರ ಗ್ರಾಮದ ರೈತ ಮಹಿಳೆ ನಾಗವ್ವ ಪಾಟೀಲ.

‘ಬಹಳ ವರ್ಷಗಳಿಂದ ಆರತಿಗಳನ್ನ (ಸಕ್ಕರೆ ಗೊಂಬೆ) ಮಾಡಿಕೊಂಡು ಬಂದಿದ್ದೇವೆ. ಒಂದು ಕೆ.ಜಿ.ಗೆ ₹100 ದರ ನಿಗದಿ ಮಾಡಿದ್ದೇವೆ. ಆದರೆ, ಹಿಂಗಾರು, ಮುಂಗಾರು ಮಳೆಯಾಗದ ಕಾರಣ ಜನರ ಕೈಯಲ್ಲಿ ಹಣವಿಲ್ಲ. ಹೀಗಾಗಿ ಜನರು ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಇದರಿಂದಾಗಿ ವ್ಯಾಪಾರ ಕುಸಿದಿದೆ’ ಎಂದು ಗಜೇಂದ್ರಗಡದ ಸಕ್ಕರೆ ಗೊಂಬೆಗಳ ತಯಾರಕರಾದ ಉಮಾ ಮಾರುತೇಪ್ಪ ಕುಂಬಾರ ಹೇಳಿದರು.

ಸಕ್ಕರೆ ಗೊಂಬೆಗಳನ್ನ ತಟ್ಟೆಯಲ್ಲಿಟ್ಟುಕೊಂಡು ಆರತಿ ಬೆಳಗಲು ಅಣಿಯಾಗಿರುವ ಪುಟಾಣಿಗಳು (ಸಂಗ್ರಹ ಚಿತ್ರ)
ಸಕ್ಕರೆ ಗೊಂಬೆಗಳನ್ನ ತಟ್ಟೆಯಲ್ಲಿಟ್ಟುಕೊಂಡು ಆರತಿ ಬೆಳಗಲು ಅಣಿಯಾಗಿರುವ ಪುಟಾಣಿಗಳು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT