ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಕಾಳಜಿಗೆ ಮೊದಲ ಆದ್ಯತೆ ನೀಡಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.

ಗೃಹರಕ್ಷಕರ ವಾರ್ಷಿಕ ತರಬೇತಿ ಶಿಬಿರ ಸಮಾರೋಪ ಸಮಾರಂಭ
Last Updated 23 ಅಕ್ಟೋಬರ್ 2021, 4:01 IST
ಅಕ್ಷರ ಗಾತ್ರ

ಗದಗ: ‘ಗೃಹರಕ್ಷಕರು ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಸರಿಸಮವಾಗಿದ್ದು, ತೊಂದರೆಯಲ್ಲಿರುವ ಜನರಿಗೆ ಸಹಾಯಹಸ್ತ ಚಾಚುವುದೇ ಗೃಹರಕ್ಷಕರ ಪ್ರಥಮ ಆದ್ಯತೆಯಾಗಬೇಕು. ಶಿಸ್ತು, ಸಂಯಮದಿಂದ ವರ್ತಿಸಿ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸೂಚಿಸಿದರು.

ನಗರದ ಪೊಲೀಸ್ ಭವನದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಶುಕ್ರವಾರ ನಡೆದ ಗೃಹರಕ್ಷಕರ ವಾರ್ಷಿಕ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತುರ್ತು ಪರಿಸ್ಥಿತಿಯಲ್ಲಿ ಗೃಹರಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾದವರು ಹೆಚ್ಚು ಸೇವಾಪರತೆ ಬೆಳಸಿಕೊಳ್ಳಬೇಕು. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಜನ ಗೃಹರಕ್ಷಕರಿದ್ದಾರೆ. ಆದರೆ ದಿನಕ್ಕೆ ನೂರು ಜನರ ಸೇವೆಯಷ್ಟೇ ಅಗತ್ಯವಿದೆ. ಗೃಹರಕ್ಷಕ ವೃತ್ತಿಯು ಪರ್ಯಾಯ ವೃತ್ತಿಯಾಗಿದ್ದು, ನೂತನವಾಗಿ ಆಯ್ಕೆಯಾದ ಗೃಹರಕ್ಷಕರು ಇದೊಂದೇ ವೃತ್ತಿ ಅವಲಂಬಿಸದೇ ಅನ್ಯಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಪೊಲೀಸ್ ತರಬೇತುದಾರ ಸತೀಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

‘ಸಮಾಜದಲ್ಲಿ ಖಾಕಿ ಬಟ್ಟೆಗೆ ಅದರದ್ದೇ ಆದ ಮಹತ್ವವಿದ್ದು, ಗೃಹರಕ್ಷಕರು ಖಾಕಿಯ ಗೌರವಕ್ಕೆ ಚ್ಯುತಿ ಬರದ ರೀತಿ ನಡೆದುಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವುದು ಗೃಹರಕ್ಷಕರ ಮೂಲ ಕರ್ತವ್ಯವಾಗಿದ್ದು, ನೂತನವಾಗಿ ಆಯ್ಕೆಯಾದ ಗೃಹರಕ್ಷಕರು ನಿಗದಿತ ಅವಧಿಯಲ್ಲೇ ತಮ್ಮ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು’ ಎಂದು ಸತೀಶ ಪಾಟೀಲ ಹೇಳಿದರು.

ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ವಿಶ್ವನಾಥ ಯಳಮಲಿ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಗೃಹರಕ್ಷಕರಿಗೆ ಪೊಲೀಸರ ಮೇಲುಸ್ತುವಾರಿಯಲ್ಲಿ ಗುಣಮಟ್ಟದ ತರಬೇತಿ ನೀಡಲಾಗಿದೆ. ಪೊಲೀಸ್ ಹಾಗೂ ಗೃಹರಕ್ಷಕ ದಳಗಳು ಒಂದೇ ಆಗಿದ್ದು, ಮುಂದಿನ ದಿನಗಳಲ್ಲಿ ಗೃಹರಕ್ಷಕರಿಗಾಗಿ ಪರೇಡ್ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು.

ತರಬೇತಿ ಮುಗಿಸಿದ ಗೃಹರಕ್ಷಕರಿಗೆ ಪ್ರಮಾಣಪತ್ರ ವಿತರಿಸಿ, ಪ್ರಮಾಣ ವಚನ ಬೋಧಿಸಲಾಯಿತು. ತರಬೇತಿ ನೀಡಿದ ಪೊಲೀಸ್ ಬೋಧಕರನ್ನು ಸನ್ಮಾನಿಸಲಾಯಿತು.

ಡಿವೈಎಸ್‌ಪಿ ವಿದ್ಯಾನಂದ ನಾಯಕ್, ಡಿವೈಎಸ್‌ಪಿ ಪವಾಡಶೆಟ್ಟರ, ಕೆ.ಸಿ.ವಕ್ಕುಂದ, ಮಾರುತಿ ದಳವಾಯಿ, ಎಸ್.ಆರ್.ಪೂಜಾರ, ವಜ್ಜಲಗಿ ಹಾಗೂ ಗೃಹರಕ್ಷಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT