ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ರೈತರನ್ನು ಕಡೆಗಣಿಸುತ್ತಿರುವ ಸರ್ಕಾರ: ಆರೋಪ

Published 19 ನವೆಂಬರ್ 2023, 14:33 IST
Last Updated 19 ನವೆಂಬರ್ 2023, 14:33 IST
ಅಕ್ಷರ ಗಾತ್ರ

ಮುಂಡರಗಿ: ‘ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕು ಸೇರಿದಂತೆ ರಾಜ್ಯದಾದ್ಯಂತ ಸಮರ್ಪಕವಾಗಿ ಮಳೆಯಾಗದೆ ರೈತರೆಲ್ಲ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಪೂರ್ಣವಾಗಿ ಅಲಕ್ಷಿಸಿದೆ’ ಎಂದು ಜೆಡಿಎಸ್ ಮುಖಂಡ ಅಲ್ಕೋಡ್ ಹನುಮಂತಪ್ಪ ಆರೋಪಿಸಿದರು.

ಬರ ಅದ್ಯಯನದ ಅಂಗವಾಗಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರೊಂದಿಗೆ ಶನಿವಾರ ಸಂಜೆ ತಾಲ್ಲೂಕಿನ ಬೆಣ್ಣಿಹಳ್ಳಿ, ಬೂದಿಹಾಳ ಹಾಗೂ ಮತ್ತಿತರ ಗ್ರಾಮಗಳ ಜಮೀನುಗಳಿಗೆ ರೈತರೊಂದಿಗೆ ಭೇಟಿ ನೀಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ತಾಲ್ಲೂಕಿನಲ್ಲಿ ರೈತರು ಮುಂಗಾರು ಹಂಗಾಮಿಲ್ಲಿ ಬೆಳೆದಿದ್ದ ಶೇಂಗಾ, ಮೆಕ್ಕೆಜೋಳ, ತೊಗರಿ, ಜೋಳ, ಹೆಸರು ಮೊದಲಾದ ಬೆಳೆಗಳು ಸಂಪೂರ್ಣವಾಗಿ ಒಣಗಿಹೋಗಿದ್ದು, ರೈತರು ಬೆಳೆನಷ್ಟ ಅನುಭವಿಸುವಂತಾಗಿದೆ. ದುಡಿಯಲು ಕೆಲಸ ಕಾರ್ಯಗಳಿಲ್ಲದ್ದರಿಂದ ರೈತರು ಹಾಗೂ ರೈತ ಕೂಲಿ ಕಾರ್ಮಿಕರು ಗುಳೆಹೋಗುತ್ತಿದ್ದಾರೆ’ ಎಂದು ದೂರಿದರು.

‘ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಸಾರ್ವಜನಿಕರಿಗೆ ನಿತ್ಯ ಶುದ್ಧ ಕುಡಿಯುವ ನೀರು ಹಾಗೂ ನಿತ್ಯ ಬಳಕೆಗೆ ಅಗತ್ಯವಿರುವ ನೀರನ್ನು ಪೂರೈಸಬೇಕು. ಜಾನುವಾರುಗಳ ರಕ್ಷಣೆಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕು. ಆ ಮೂಲಕ ರೈತರ ಹಿತ ಕಾಯಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ತಕ್ಷಣ ಬೆಳೆ ನಷ್ಟ ಸಮೀಕ್ಷೆಯನ್ನು ಕೈಗೊಳ್ಳಬೇಕು. ರೈತರಿಗೆ ತಕ್ಷಣ ಬರಗಾಲ ಹಾಗೂ ಬೆಳೆಹಾನಿ ಪರಿಹಾರವನ್ನು ವಿತರಿಸಬೇಕು. ಬೆಳೆ ವಿಮೆ ತುಂಬಿರುವ ರೈತರ ಖಾತೆಗಳಿಗೆ ಬೆಳೆಹಾನಿ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ರೈತಹಿತ ಹಾಗೂ ಜನಹಿತವನ್ನು ಸಂಪೂರ್ಣವಾಗಿ ಮರೆತು ಬೇರೆ ಪಕ್ಷಗಳ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಮಗ್ನವಾಗಿದೆ. ಸರ್ಕಾರದ ಸಚಿವರು ಹಾಗೂ ಶಾಸಕರು ಜನರತ್ತ ಸುಳಿಯದೆ ವಿನಾಕರಣ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡರಾದ ಗರುರಾಜ ಹುಣಸಿಮರದ, ವೀರಭದ್ರಪ್ಪ ಹಾಲರವಿ, ಎಂ.ವೈ.ಮುಧೋಳ, ಸಿ.ಎಸ್.ಪಾಟೀಲ, ಭಾಷಾಸಾಬ್ ಮುದುಗಲ್ಲ, ಶಂಕರ ಬಾಳಿಕಾಯಿ, ಮಂಜುನಾಥ ದೊಡ್ಡಮನಿ, ರಫಿಕ್ ಹವಾಲ್ದಾರ್, ಮಂಜುಳಾ ಮೇಟಿ, ಶಾರದಾ ಕಾತರಕಿ, ಉಮೇಶ ಹಿರೇಮಠ, ಯಲ್ಲಪ್ಪ ಭಜಂತ್ರಿ, ಶ್ರೀಕಾಂತ ಕಮತರ, ಪ್ರವೀಣ ಬಾಳಿಕಾಯಿ, ಸುಭಾಷಚಂದ್ರ ದಾನರಡ್ಡಿ, ಲಕ್ಷ್ಮಣ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT