ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಲಿ: ಗುರುಬಸಪ್ಪಜ್ಜ ದಂಪತಿಯ ಜಾತ್ರಾ ಮಹೋತ್ಸವ ನಾಳೆಯಿಂದ

ಜನರನ್ನು ಅಧ್ಯಾತ್ಮದತ್ತ ಸೆಳೆದ ದಂಪತಿ
ನಾಗರಾಜ ಎಸ್. ಹಣಗಿ
Published 7 ಮಾರ್ಚ್ 2024, 5:33 IST
Last Updated 7 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನ ಶಿಗ್ಲಿ ಗ್ರಾಮದ ಗುರುಬಸಪ್ಪಜ್ಜ ದಂಪತಿ ಜಾತ್ರಾ ಮಹೋತ್ಸವ ಮಾರ್ಚ್ 8ರಿಂದ 11ರವರೆಗೆ ಜರುಗಲಿದೆ.

ಸಂಕ್ಷಿಪ್ತ ಇತಿಹಾಸ: ಗುರುಬಸಪ್ಪಜ್ಜನವರು ಸ್ವಾತಂತ್ರ್ಯ ಹೋರಾಟಗಾರರಾಗಿ ಶಿಗ್ಲಿಯಲ್ಲಿ ಅನುಪಮವಾದ ಸೇವೆ ಸಲ್ಲಿಸಿದ ಮಹನೀಯರು. ಗುರುಬಸಪ್ಪಜ್ಜನವರ ಊರು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ತಾಂಬೆ ಗ್ರಾಮ. ಅವರು ನೂಲಿನ ವ್ಯಾಪಾರಸ್ಥರಾಗಿದ್ದರು. ತಮ್ಮ 35ರ ಪ್ರಾಯದಲ್ಲಿ ನೂಲಿನ ವ್ಯಾಪಾರ ಮಾಡುತ್ತ ಇವರು ಗದಗ-ಬೆಟಗೇರಿಗೆ ಬರುತ್ತಾರೆ. 1895ರಲ್ಲಿ ಲಕ್ಷ್ಮೇಶ್ವರ ಮೂಲಕ ಶಿಗ್ಲಿಗೆ ಬರುವ ಇವರು ಅಲ್ಲಿಯೇ ತಮ್ಮ ನೆಲೆಯನ್ನು ಕಂಡುಕೊಳ್ಳುತ್ತಾರೆ. 1931ರಲ್ಲಿ ಇಹಲೋಕ ತ್ಯಜಿಸುತ್ತಾರೆ.

ಗುರುಬಸಪ್ಪಜ್ಜನವರು ತಮ್ಮ ಆಶ್ರಮದ ಎದುರಿಗಿದ್ದ ಜಮೀನಿನಲ್ಲಿ ಪತ್ನಿ ಶಾಂತವೀರಮ್ಮ ಅವರೊಂದಿಗೆ ಕಲ್ಲಂಗಡಿ, ಕರಬೂಜ, ತಂಬಾಕು ಬೆಳೆಯುತ್ತಿದ್ದರು. ಸ್ವತಃ ಹೊಲದಲ್ಲಿ ಆಳಾಗಿ ದುಡಿಯುತ್ತಿದ್ದರು. ಕೆಲಸಕ್ಕೆ ಬರುತ್ತಿದ್ದ ಕೂಲಿಕಾರರಿಗೆ ಎಂದೂ ಕಡಿಮೆ ಪಗಾರ ಕೊಡುತ್ತಿರಲಿಲ್ಲ. ತಮ್ಮ ಆದಾಯವನ್ನು ನಾಲ್ಕು ಭಾಗ ಮಾಡಿ ಒಂದು ಭಾಗವನ್ನು ನಿತ್ಯ ಜೀವನಕ್ಕಾಗಿ, ಎರಡನೇ ಭಾಗವನ್ನು ನಿತ್ಯ ದಾಸೋಹಕ್ಕೂ, ಮೂರನೇ ಭಾಗವನ್ನು ದನಕರುಗಳ ಆಹಾರಕ್ಕಾಗಿ ಮತ್ತು ನಾಲ್ಕನೇ ಭಾಗವನ್ನು ಶಿವರಾತ್ರಿಯ ವ್ರತಾಚರಣೆಗೆ ಖರ್ಚು ಮಾಡುತ್ತಿದ್ದರು.

ಪ್ರತಿವರ್ಷ ಶಿವರಾತ್ರಿ ನಂತರ ಮತ್ತೆ ಹೊಸ ಲೆಕ್ಕ ಶುರು ಮಾಡುತ್ತಿದ್ದರು. ಹೀಗೆ ಸಮಾಜೋಪಕಾರಿ ಕೆಲಸಗಳನ್ನು ಮಾಡುತ್ತ ಜನರನ್ನೂ ಕೂಡ ಆಧ್ಯಾತ್ಮದತ್ತ ಸೆಳೆದರು.

ಆ ದಿನಗಳಲ್ಲಿ ದೇಶದಲ್ಲಿ ನಡೆದಿದ್ದ ಸ್ವಾತಂತ್ರ್ಯ ಚಳುವಳಿ ಹೋರಾಟದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ಗುರುಬಸಪ್ಪಜ್ಜನವರು ಹೋಗಿದ್ದರು. ಅಲ್ಲಿ ಗಾಂಧೀಜಿಯವರನ್ನು ಕಂಡು ಅವರ ಆದರ್ಶಗಳನ್ನು ಅಳವಡಿಸಿಕೊಂಡರು. ಗುರುಬಸಪ್ಪಜ್ಜ ದಂಪತಿ ಮರಣವೂ ಒಂದು ಪವಾಡವಾಗಿದೆ. ತಮ್ಮ ಶಿಷ್ಯರ ಸಮ್ಮುಖದಲ್ಲಿ ಭಜನೆ, ಶಿವನಾಮ ಸ್ಮರಣೆಗಳ ಮಧ್ಯೆ ನಗು ನಗುತ್ತ ದಂಪತಿ ಒಂದೇ ದಿನ 1931 ಜನವರಿ 22ರಂದು ಮರಣ ಹೊಂದಿದರು.

ಗುರುಬಸಪ್ಪಜ್ಜನವರ ಇಚ್ಛಾನುಸಾರ ಶಿಷ್ಯರು ಮೆರವಣಿಗೆ ಮಾಡಿ ಅವರ ಆಶ್ರಮದಲ್ಲೇ ಅಂತ್ಯಕ್ರಿಯೆ ನೆರವೇರಿಸಿದರು. ಆ ಸ್ಥಳವೇ ಇಂದು ಗುರುಬಸಪ್ಪಜ್ಜನ ಮಠವಾಗಿ ಗ್ರಾಮಸ್ಥರನ್ನು ಕಾಪಾಡುತ್ತಿದೆ.

ಜಾತ್ರೆ ನಾಳೆಯಿಂದ

ಈ ವರ್ಷದ ಜಾತ್ರೆ ಮಾರ್ಚ್ 8ರಿಂದ 11ರವರೆಗೆ ಜರುಗಲಿದೆ. ಮಾರ್ಚ್ 8ರಂದು ಮಹಾಶಿವರಾತ್ರಿ. ರಾತ್ರಿ 8 ಗಂಟೆಯಿಂದ ಜಾಗರಣೆ ಶಿವಕೀರ್ತನೆ ಹಾಗೂ ಭಜನಾ ಮಂಡಳಿಗಳಿಂದ ಕಾರ್ಯಕ್ರಮ ಜರುಗುವುದು. 10ರಂದು ಅಮವಾಸ್ಯೆ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಗುರುಬಸಪ್ಪಜ್ಜ ದಂಪತಿ ಗದ್ದುಗೆಗೆ ಪೂಜಾಭಿಷೇಕ ನಂತರ ಗುರುಬಸಪ್ಪಜ್ಜ ಹಾಗೂ ಶಾಂತವೀರಮ್ಮನವರ ಮೂರ್ತಿಗಳ ಮೆರವಣೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಠಕ್ಕೆ ಬರುವುದು. 11ರಂದು ಸಂಜೆ 4ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ಕಡುಬಿನ ಕಾಳಗ ಹಾಗೂ ಮಹಾಪ್ರಸಾದ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT