ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಶಿಕ್ಷಕಿ ಕಿರುಕುಳ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Last Updated 13 ಫೆಬ್ರವರಿ 2023, 12:38 IST
ಅಕ್ಷರ ಗಾತ್ರ

ಗಜೇಂದ್ರಗಡ (ಗದಗ): ಪಟ್ಟಣದ ಬಾಲಕಿಯರ ಸರ್ಕಾರಿ ‌ಮಾದರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಕ್ಕಳನ್ನು ತುಚ್ಛವಾಗಿ ಕಾಣುತ್ತಾರೆ, ಸದಾಕಾಲ ನಿಂದಿಸುತ್ತಾರೆ ಎಂದು ಆರೋಪಿಸಿ ಸೋಮವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಕೊಠಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಶಾಲೆಯ ಮುಖ್ಯಶಿಕ್ಷಕಿ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು, ‘ಬೇಡ ಬೇಡ ಹೆಡ್ ಮಿಸ್ ಬೇಡ’, ‘ಧಿಕ್ಕಾರ ಧಿಕ್ಕಾರ ಹೆಡ್ ಮಿಸ್‌ಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಬೆಂಬಲ ನೀಡಿದರು.

‘ಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್‌.ರಾಠೋಡ ವಿದ್ಯಾರ್ಥಿಗಳನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಹೊಡೆಯುತ್ತಾರೆ. ನನ್ನ ವಿಷಯವನ್ನು ಪಾಲಕರಿಗೆ ತಿಳಿಸಿದರೆ ಅಂತಹ ವಿದ್ಯಾರ್ಥಿನಿ ಹೆಸರು ಹಾಗೂ ಅವರ ಪಾಲಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

‘ಈ ಕುರಿತು ವಿಚಾರಿಸಲು ಬಂದರೆ, ಶಾಲೆ ಒಳಗೆ ಬರಬೇಡಿ. ಕಾಂಪೌಂಡ್ ಹೊರಗೆ ನಿಂತು ಮಾತನಾಡಿ' ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ಹೊರಹಾಕಿದ ಪಾಲಕರು, ಸ್ಥಳಕ್ಕೆ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ಬರುವಂತೆ ಪಟ್ಟು ಹಿಡಿದರು. ಕೂಡಲೇ ಮುಖ್ಯ ಶಿಕ್ಷಕಿ ಅಮಾನತು ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ರಜನಿಕಾಂತ ಕೆಂಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ, ಅಕ್ಷರ ದಾಸೋಹದ ಅಧಿಕಾರಿ ಬಸವರಾಜ ಅಂಗಡಿ ಭೇಟಿ ನೀಡಿ ಪಾಲಕರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರರೊಂದಿಗೆ ನಡೆದ ಸಭೆಯಲ್ಲಿ ಮುಖ್ಯ ಶಿಕ್ಷಕಿ ಎ.ಎಸ್.ರಾಠೋಡ ಕ್ಷಮೆಯಾಚಿಸಿ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರೂ ವಿದ್ಯಾರ್ಥಿಗಳು ಮುಖ್ಯಶಿಕ್ಷಕಿ ವರ್ಗಾವಣೆ ಮಾಡುವಂತೆ ಪಟ್ಟು ಹಿಡಿದರು.

ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಸ್ವೀಕರಿಸಿದ ದೂರುಗಳನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಸಜ್ಜನ ಹೇಳಿದಾಗ ವಿದ್ಯಾರ್ಥಿಗಳು ಪಾಲಕರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ನವ್ಯಾ ರಾಯಬಾಗಿ, ರೇಣುಕಾ ನಂದಿಕೇಶ್ವರ, ವೀಣಾ ಶಾಭಾದಿ, ಸರಸ್ವತಿ ಕಡಬುರ, ಸಹನಾ ತಳವಾರ, ಜಯಶ್ರೀ ವಾಲಿಕಾರ, ಪದ್ಮಾ ಶಾಬಾದಿ, ಸಾವನ್ ಕಾಟವಾ, ಮಧುಶ್ರೀ ಮಾಸ್ತಿಕಟ್ಟಿ, ಗಂಗಾ ಪಾಗದ, ಭಾಗ್ಯಶ್ರೀ ಕುರಿ ಸೇರಿದಂತೆ ಇತರರು ಇದ್ದರು.

****

ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ದೂರು ಸ್ವೀಕರಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು

-ಗಾಯತ್ರಿ ಸಜ್ಜನ, ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ.

****

ವಿದ್ಯಾರ್ಥಿಗಳಿಗೆ ಪ್ರತಿಭಟನೆ ಮಾಡಲು ಕೆಲವರು ಹಿಂದಿನಿಂದ ಕುಮ್ಮಕ್ಕು ನೀಡಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಂಡು ಹೋಗುತ್ತೇನೆ.

-ಎ.ಎಸ್.ರಾಠೋಡ, ಮುಖ್ಯಶಿಕ್ಷಕಿ, ಬಾಲಕಿಯರ ಸರ್ಕಾರಿ ‌ಮಾದರಿಯ ಕನ್ನಡ ಪ್ರಾಥಮಿಕ ಶಾಲೆ, ಗಜೇಂದ್ರಗಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT