ಮಂಗಳವಾರ, ಅಕ್ಟೋಬರ್ 20, 2020
21 °C

ಭಾರಿ ಮಳೆ: ಮನೆಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಸಮೀಪದ ಯಳವತ್ತಿ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಹತ್ತಾರು ಮನೆಗಳು ಜಲಾವೃತಗೊಂಡಿದ್ದು ನಿವಾಸಿಗಳು ಪರದಾಡುತ್ತಿದ್ದಾರೆ.

ಈ ಬಡಾವಣೆಯ ಮೇಲ್ಭಾಗದಲ್ಲಿನ ಜಮೀನುಗಳಿಂದ ಅಪಾರ ಪ್ರಮಾಣದಲ್ಲಿ ನೀರು ಇಲ್ಲಿಗೆ ಹರಿದು ಬರುತ್ತದೆ. ಆದರೆ ನೀರು ಮುಂದಕ್ಕೆ ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ  ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಈ ತೊಂದರೆ ಕಟ್ಟಿಟ್ಟ ಬುತ್ತಿ.

‘ಮಳಿ ಬಂದರ ಸಾಕ್ರೀ ನೀರು ಕೇರಿಗೆ ಬರತೈತಿ. ದೊಡ್ಡ ಗಟಾರ ಕಟ್ಟಿಸಿದರ ಈ ತೊಂದ್ರಿ ತಪ್ಪತೈತಿ. ಆದರ ಯಾರೂ ಈ ಕಡೆ ಲಕ್ಷ್ಯ ಕೊಡವಲ್ರೀ’ ಎಂದು ನಗರದ ನಿವಾಸಿಗಳಾದ ಶಿವಪ್ಪ ಮೂಲಿಮನಿ, ಬಸವರಾಜ ಗೋದಿ, ದೇವಪ್ಪ ಚಿಣಗಿ, ಶರೀಫ ಮ್ಯಾಗೇರಿ, ಫಕ್ಕೀರೇಶ ಮಲೆಮ್ಮನವರ, ಕರಿಯಪ್ಪ ಬೀರಣ್ಣವರ, ಉಡಚಪ್ಪ ಕರೆಣ್ಣವರ ದೂರಿದರು.

‘ಭಾರಿ ಮಳೀಗ ನಮ್ಮ ಮನಿ ನೀರಾಗ ನಿಂತಾವ್ರೀ. ಹೊರಗ ಹೋಗಾಕೂ ಆಗವಲ್ದು’ ಎಂದು ಸ್ವಾರೆಪ್ಪ ಮಲೆಮ್ಮನವರ, ಹಾಲಮ್ಮ ಮಲೆಮ್ಮನವರ, ದುರ್ಗವ್ವ ಮಲೆಮ್ಮನವರ, ಲಕ್ಷ್ಮವ್ವ ಬೀರಣ್ಣವರ ಗೋಳು ತೋಡಿಕೊಂಡರು.

‘ಎಸ್‍ಟಿಪಿಸಿ ಯೋಜನೆಯಡಿ ಎಸ್‍ಸಿ ಕಾಲೋನಿಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಅನುದಾನ ನೀಡಿದೆ. ಆದರೆ ಜನಪ್ರತಿನಿಧಿಗಳು ಅನುದಾನ ಸರಿಯಾಗಿ ಬಳಸಿ ಅಭಿವೃದ್ಧಿ ಕೆಲಸ ಮಾಡಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ ಬೀರಣ್ಣವರ ಆಗ್ರಹಿಸಿದರು

ಧರೆಗುರಳಿದ ಮನೆಗಳು: ಗ್ರಾಮದಲ್ಲಿ ಸುರಿದ ಮಳೆಗೆ ಅನೇಕ ಮನೆಗಳು ನೆಲ ಕಚ್ಚಿವೆ. ಮಹಾದೇವಿ ಪುರದ, ನರಗುಂದಮಠ ಅವರ ಮನೆಗಳು ಸೇರಿದಂತೆ ಇನ್ನೂ ಹಲವು ಮನೆಗಳು ಬಿದ್ದಿವೆ. ಗ್ರಾಮದ ಮಲ್ಲಿಕಾರ್ಜುನಗೌಡ ಪಿಡ್ಡನಗೌಡ್ರ ಅವರ ಮನೆಗೆ ನುಗ್ಗಿದ್ದ ನೀರನ್ನು ಮೋಟಾರ್ ಸಹಾಯದಿಂದ ಹೊರ ಹಾಕಲಾಯಿತು.

ಬೆಳೆ ನಾಶ: ಕಂಠಿ ಶೇಂಗಾ ಮತ್ತು ಹರ ಗಿದ್ದ ಬಳ್ಳಿ ಶೇಂಗಾ ನಾಶವಾಗಿವೆ. ಅದರಂತೆ ಬಿಟಿ ಹತ್ತಿ ಮತ್ತು ಮೆಣಸಿನ ಕಾಯಿ ಹೊಲಗಳಲ್ಲಿ ನೀರು ನಿಂತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.