ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳ ಸಾಗಣೆ ಜೀವಂತ; ಅಸೂಟಿ ಆತಂಕ

ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ- ನಿಯಂತ್ರಣಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ
Last Updated 31 ಜುಲೈ 2022, 6:08 IST
ಅಕ್ಷರ ಗಾತ್ರ

ಗದಗ: ‘ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ಹಂತದಲ್ಲಿ ದೇಶ ಇದ್ದರೂ ಕೂಡ ಮಾನವ ಕಳ್ಳ ಸಾಗಣೆ ಪಿಡುಗು ಇಂದಿಗೂ ಇದೆ. ಮಾನವ ಕಳ್ಳ ಸಾಗಣೆಯಲ್ಲಿ ಪ್ರಪಂಚದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ರಾಜ್ಯ ಐದನೇ ಸ್ಥಾನದಲ್ಲಿದೆ’ ಎಂದುಸಂಪನ್ಮೂಲ ವ್ಯಕ್ತಿ ಎಂ.ಎಫ್.ಅಸೂಟಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಅನಾದಿಕಾಲದ ಇತಿಹಾಸದಿಂದಲೂ ನಡೆದುಕೊಂಡ ಬಂದ ವಿಚಿತ್ರ ಪೀಡುಗು ಮಾನವ ಕಳ್ಳಸಾಗಣೆ. ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮಾನವ ಕಳ್ಳ ಸಾಗಣೆ ಇಂದಿಗೂ ನಡೆಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಕುರುಬೆಟ್‌ ಮಾತನಾಡಿ, ‘ಆಧುನಿಕ ಯುಗದಲ್ಲಿದ್ದರೂ ಹೆಣ್ಣಿನ ಮೇಲೆ ನಿರಂತರ ಶೋಷಣೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದೇಶ ಸಾಕಷ್ಟು ಮುಂದುವರಿದಿದ್ದರೂ ಮಾನವ ಕಳ್ಳ ಸಾಗಣೆ ನಡೆಯುತ್ತಿರುವುದು ಆತಂಕಕಾರಿ ವಿಚಾರ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಹೇಳಿದರು.

‘ಮಾನವ ಕಳ್ಳ ಸಾಗಣೆ ನಿಯಂತ್ರಣ ಹಾಗೂ ನಿಷೇಧಕ್ಕಾಗಿ ವಿಶ್ವ ಸಂಸ್ಥೆಯಿಂದ ಜುಲೈ 31ರಂದು ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಆಚರಣೆಗೆ ತರಲಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ಮಾನವ ಕಳ್ಳ ಸಾಗಣೆ ಕುರಿತು ಅರಿವು ಮೂಡಿಸಿ, ಅದರ ಸಂಪೂರ್ಣ ನಿಯಂತ್ರಣಕ್ಕೆ ನಾವೆಲ್ಲರೂ ಮುಂದಾಗಬೇಕು’ ಎಂದು ಹೇಳಿದರು.

‘ಮಾನವ ಕಳ್ಳ ಸಾಗಣೆ ಯಾವ ಯಾವ ಹಂತದಲ್ಲಿ ನಡೆಯುತ್ತದೆ, ಮಾನವ ಕಳ್ಳ ಸಾಗಣೆ ಮಾಡಿದಲ್ಲಿ ಇರುವ ಕಠಿಣ ಶಿಕ್ಷೆ ಹಾಗೂ ದಂಡದ ಕುರಿತು ತಿಳಿವಳಿಕೆ ನೀಡಲಾಗುವುದು. ಈ ಪಿಡುಗು ಹೋಗಲಾಡಿಸಲು ಎಲ್ಲ ಇಲಾಖಾ ಅಧಿಕಾರಿಗಳು ಸಹಕಾರ ನೀಡಬೇಕು. ಅದರಲ್ಲೂ ಶಿಕ್ಷಣ ಇಲಾಖೆ ಮಕ್ಕಳಲ್ಲಿ ಅರಿವು ಮೂಡಿಸಲು ಪ್ರಾಮುಖ್ಯತೆ ನೀಡಬೇಕು’ ಎಂದು ತಿಳಿಸಿದರು.

ಪ್ರಭಾರ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಪ್ರಭಾರ ಎಡಿಸಿ ಅನ್ನಪೂರ್ಣ ಮುದುಕಮ್ಮನವರ, ಸರ್ಕಾರಿ ಅಭಿಯೋಜಕಿ ಸವಿತಾ ಶಿಗ್ಲಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಇದ್ದರು.

ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷೆ ಅನ್ನಪೂರ್ಣ ಗಾಣಿಗೇರ ಪ್ರತಿಜ್ಞಾವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟಪ್ಪನವರ ಸ್ವಾಗತಿಸಿದರು.

ವಿವಿಧ ಉದ್ದೇಶಗಳಿಗೆ ಬಳಕೆ

ಪ್ರಾಯಪೂರ್ವ ಬಾಲಕಿಯರು, ಅವಿವಾಹಿತ ಮಹಿಳೆಯರು, ವಿಧವೆಯರು, ವಿಚ್ಛೇದನಕ್ಕೆ ಒಳಗಾದವರು, ಕಾನೂನು ಬಾಹಿರ ವಲಸಿಗರು, ದುಡಿಯುವ ಮಕ್ಕಳು, ಬೀದಿ ಮಕ್ಕಳು, ಕಾಣೆಯಾದ ಮಕ್ಕಳು, ನಿರ್ಲಕ್ಷಿತ ಮಕ್ಕಳು ಹೆಚ್ಚಾಗಿ ಮಾನವ ಕಳ್ಳ ಸಾಗಣೆಗೆ ಬಲಿಯಾಗುತ್ತಿದ್ದಾರೆ ಎಂದು ಎಂ.ಎಫ್.ಅಸೂಟಿ ತಿಳಿಸಿದರು.

ಕೂಲಿಗಾಗಿ, ಮನರಂಜನೆಗಾಗಿ, ಭಿಕ್ಷಾಟನೆ, ವೇಶ್ಯಾವಾಟಿಕೆ, ಅಂಗಾಂಗ ಮಾರಾಟ, ಕಳ್ಳತನ, ಅಕ್ರಮ ದಂಧೆ, ಕಳ್ಳಸಾಗಣೆ, ಅಕ್ರಮ ಔಷಧಿ ಪ್ರಯೋಗ, ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಮಾನವ ಕಳ್ಳ ಸಾಗಣೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಉಚಿತ ಸಹಾಯವಾಣಿಗೆ ತಿಳಿಸುವ ಮೂಲಕ ಮಾನವ ಕಳ್ಳ ಸಾಗಣೆ ನಿಯಂತ್ರಣಕ್ಕೆ ಕೈಜೋಡಿಸಬೇಕು. ಮಹಿಳೆಯರ ಸಹಾಯವಾಣಿ ಸಂಖ್ಯೆ 181, ಮಕ್ಕಳ ಸಹಾಯವಾಣಿ ಸಂಖ್ಯೆ 1098, ಅದೇ ರೀತಿ ಎಲ್ಲ ತರಹದ ಪ್ರಕರಣಗಳಿಗೆ ಪೊಲೀಸ್ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಂತ್ರಜ್ಞಾನವು ಸದ್ಬಳಕೆ ಹಾಗೂ ದುರ್ಬಳಕೆ ಎರಡೂ ತರಹ ಆಗುತ್ತಿದೆ. ಲೈಂಗಿಕ ಶೋಷಣೆಯಾದಲ್ಲಿ ಅತ್ಯಂತ ಕಠಿಣವಾದ ಪೊಕ್ಸೊ ಕಾಯ್ದೆ ಹಾಕುವ ಮೂಲಕ ಪ್ರಕರಣ ನಡೆಸಲಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳಲ್ಲಿ ಹೆಚ್ಚು ಅರಿವು ಮೂಡಿಸಬೇಕು
ಎಂ.ಎ.ಮೌಲ್ವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT