ಶನಿವಾರ, ಮಾರ್ಚ್ 6, 2021
19 °C
ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ

ಈರುಳ್ಳಿಗೆ ₹ 200 ಪ್ರೋತ್ಸಾಹಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮುಂಡರಗಿ: 'ಈರುಳ್ಳಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ₹ 200 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈರುಳ್ಳಿ ಬೆಳೆದಿರುವ ರೈತರು ಡಿ.17ರೊಳಗೆ ತಾವು ಬೆಳೆದ ಈರುಳ್ಳಿಯನ್ನು ಪರವಾನಗಿ ಹೊಂದಿರುವ ವ್ಯಾಪಾರಸ್ಥರಲ್ಲಿ ಮಾರಾಟ ಮಾಡಬೇಕು' ಎಂದು ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಗುರುವಾರ ತರಕಾರಿ ವ್ಯಾಪಾರಸ್ಥರು, ಎಪಿಎಂಸಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

'ಸರ್ಕಾರ ಈರುಳ್ಳಿಗೆ ಗರಿಷ್ಠ ₹ 700 ಮೂಲ ಬೆಲೆಯನ್ನು ನಿಗದಿಗೊಳಿಸಿದ್ದು, ರೈತರಿಗೆ ವ್ಯತ್ಯಾಸದ ದರವನ್ನು ಮಾತ್ರ ನೀಡಲಾಗುವುದು. ಒಬ್ಬ ರೈತ ಗರಿಷ್ಠ 75 ಕ್ವಿಂಟಲ್ ಈರುಳ್ಳಿಯನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಸರ್ಕಾರದ ಹೋಜನೆಯ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.

ತರಕಾರಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ವಿಜಯಕುಮಾರ ಅಕ್ಕಿ ಮಾತನಾಡಿ, 'ಪ್ರತಿದಿನ ತರಕಾರಿ ಮಾರುಕಟ್ಟೆಗೆ ಬರುವ ಸುಮಾರು 500 ಕ್ವಿಂಟಲ್ ಈರುಳ್ಳಿಯನ್ನು ಖರೀದಿಸಲಾಗುವುದು. ಆ ಮೂಲಕ ರೈತರಿಗೆ ನೆರವು ನೀಡಲಾಗುವುದು' ಎಂದು ತಿಳಿಸಿದರು.

'ಪಟ್ಟಣದ ತರಕಾರಿ ವ್ಯಾಪಾರಸ್ಥರು ರೈತರಿಂದ ಈರುಳ್ಳಿ ಖರೀದಿಸಿದರೆ, ಸಂಗ್ರಹಿಸಿಕೊಳ್ಳಲು ಎಪಿಎಂಸಿಯಲ್ಲಿರುವ ಉಗ್ರಾಣವನ್ನು ಉಚಿತವಾಗಿ ನೀಡಲಾಗುವುದು. ಅಗತ್ಯವಿದ್ದವರಿಗೆ ಕಂಪ್ಯೂಟರ್ ಹಾಗೂ ಒಬ್ಬ ಕಂಪ್ಯೂಟರ್ ನಿರ್ವಾಹಕರನ್ನು ನೀಡಲಾಗುವುದು' ಎಂದು ಅಧ್ಯಕ್ಷರು ಭರವಸೆ ನೀಡಿದರು.

ರೈತ ಮುಖಂಡ ಹೊಸಮನಿ ಮಾತನಾಡಿ, 'ನ.28ಕ್ಕಿಂತ ಪೂರ್ವದಲ್ಲಿ ರೈತರು ಮಾರಾಟ ಮಾಡಿರುವ ಈರುಳ್ಳಿಗೂ ₹ 200 ಪ್ರೋತ್ಸಾಹ ಧನ ನೀಡಬೇಕು' ಎಂದು ಮನವಿ ಮಾಡಿದರು. 'ಈ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳಬೇಕು' ಎಂದು ಅಧ್ಯಕ್ಷರು ತಿಳಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, 'ರಾಜ್ಯದಲ್ಲಿ ಸುಮಾರು 1.53 ಹೆಕ್ಟೆರ್ ಪ್ರದೇಶದಲ್ಲಿ ಅಂದಾಜು 29 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗಿದೆ. ಅದಕ್ಕೆ ಪ್ರೋತ್ಸಾಹ ಧನ ನೀಡಲು ಸರ್ಕಾರ ₹ 50ರಿಂದ ₹ 75 ಕೋಟಿ ಬಳಸಲು ನಿರ್ಧರಿಸಿದೆ' ಎಂದು ಮಾಹಿತಿ ನೀಡಿದರು.

ಎಪಿಎಂಸಿ ಉಪಾಧ್ಯಕ್ಷ ವಿರೂಪಾಕ್ಷಗೌಡ್ರ ಮರಿಗೌಡ್ರ, ಕಾರ್ಯದರ್ಶಿ ಎನ್.ಎಚ್.ಈಶ್ವರಾಚಾರಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಈರಣ್ಣ ಬೇವಿನಮರದ, ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಫರೀದ್ ಲೈನದ, ಕೊಟ್ರೇಶ ಅಂಗಡಿ, ಕಂದಾಯ ಇಲಾಖೆ ಹಿರೇಮಠ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು