ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಕೂಲಿಕಾರರಿಗೆ ಬೇಡಿಕೆಯಾಧಾರಿತ ಕೆಲಸ ನೀಡಿ: ಸಿಇಒ

ನರೇಗಾ ಯೋಜನೆಯ ವಿವಿಧ ಕಾಮಗಾರಿಗಳ ಪರಿಶೀಲನೆ
Published 30 ಮೇ 2024, 16:00 IST
Last Updated 30 ಮೇ 2024, 16:00 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ನರೇಗಾ ಯೋಜನೆ ಅಡಿಯಲ್ಲಿ ಬೇಡಿಕೆಯಾಧಾರಿತ ಕೂಲಿಕಾರರಿಗೆ ಕೆಲಸ ನೀಡಿ. ಕೂಲಿಕಾರರಿಗೆ ಅಳತೆಗೆ ತಕ್ಕಂತೆ ಕಟ್ಟೆ (ಪಡ) ಕಡಿಯುವಂತೆ ಸೂಚಿಸುವುದರ ಜೊತೆಗೆ ಅಳತೆಗೆ ತಕ್ಕಂತೆ ಕೂಲಿ ಪಾವತಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್. ಹೇಳಿದರು.

ಸಮೀಪದ ಚಿಲಝರಿಯಲ್ಲಿ ಗುರುವಾರ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆ ವರದಾನವಾಗಿದ್ದು, ಕೆಲಸಕ್ಕೆ ಬರುವ ಕೂಲಿಕಾರರಿಗೆ ಸರಿಯಾಗಿ ಎನ್.ಎಂ.ಎಂ.ಎಸ್ ಮೂಲಕ ಹಾಜರಾತಿ ಹಾಕಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ ಕೂಲಿಕಾರರಿಗೆ ಸರಿಯಾಗಿ ಕೂಲಿ ಪಾವತಿಸಬೇಕು’ ಎಂದರು.

ತಾಲ್ಲೂಕಿನ ವಿವಿಧ ಕಾಮಗಾರಿಗಳ ವೀಕ್ಷಣೆ:

ಶಾಂತಗೇರಿ ಗ್ರಾಮ ಸಾಮೂಹಿಕ ಬದುವು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರ ಸಂಖ್ಯೆ, ಹಾಜರಾತಿ, ಎನ್.ಎಂ.ಆರ್ ಹಾಜರಾತಿ, ಕೂಲಿಕಾರರು ಗೈರು ಕುರಿತು ಪರಿಶೀಲಿಸಿದರು. ಬಳಿಕ ಕಾಮಗಾರಿ ವೀಕ್ಷಿಸಿದರು.

ಮುಶೀಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಲ್ಲೂರು ಸಸ್ಯ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಬೆಳೆಸಿ, ನಿರ್ವಹಣೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ನರೇಗಾ ಯೋಜನೆಯಡಿ ರಸ್ತೆ ಬದಿ ನೆಡುತೋಪಿಗೆ 9000 ಸಸಿಗಳು, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಿಗೆ 7500, ರೈತರಿಗಾಗಿ 25000 ಸಸಿಗಳು ವಿತರಿಸಲು ಸಿದ್ದವಾಗಿವೆ ಎಂದು ಆರ್.ಎಫ್.ಒ ಮಾಹಿತಿ ನೀಡಿದರು.

ಸಮೀಪದ ಸೂಡಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ದಾಸ್ತಾನು, ಹೆರಿಗೆ, ಒಳರೋಗಿಗಳ ಕೊಠಡಿ, ಔಷಧಿ ಕೊಠಡಿ ಸೇರಿದಂತೆ ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಿದರು. ನಂತರ ರೋಗಿಗಳ ಕುಂದು ಕೊರತೆಗಳನ್ನು ಆಲಿಸಿದರು.

ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಿ ಚಿಕಿತ್ಸೆ ಒದಗಿಸಬೇಕು. ಪ್ರತಿ ಗುರುವಾರ ವೈದ್ಯರು ಇಡೀ ದಿನ ಆಸ್ಪತ್ರೆಯಲ್ಲಿ ಇದ್ದು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಇಒ ಬಸವರಾಜ ಬಡಿಗೇರ, ಜಿಲ್ಲಾ ಸಹಾಯಕ ಸಮನ್ವಯ ಸಂಯೋಜಕ ಕಿರಣಕುಮಾರ, ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಒ ರಾಮಣ್ಣ ಪೂಜಾರ ಇದ್ದರು.

ಗಜೇಂದ್ರಗಡ ತಾಲ್ಲೂಕಿನ ನೆಲ್ಲೂರ ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಪಾಲನಾ ಕೇಂದ್ರಕ್ಕೆ ಜಿಲ್ಲಾ ಪಂಚಾಯ್ತಿ ಸಿಇಓ ಭರತ್‌ ಎಸ್.‌ ಭೇಟಿ ನೀಡಿ ಪರಿಶೀಲಿಸಿದರು
ಗಜೇಂದ್ರಗಡ ತಾಲ್ಲೂಕಿನ ನೆಲ್ಲೂರ ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಪಾಲನಾ ಕೇಂದ್ರಕ್ಕೆ ಜಿಲ್ಲಾ ಪಂಚಾಯ್ತಿ ಸಿಇಓ ಭರತ್‌ ಎಸ್.‌ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT