ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ ಸುತ್ತಲಿನ ಭೂಮಿಗೆ ಕಂಟಕ

ರಿಯಲ್‌ ಎಸ್ಟೇಟ್‌: ನಿವೇಶನಗಳಾಗಿ ಪರಿವರ್ತನೆಯಾಗುತ್ತಿರುವ ರೈತರ ಜಮೀನುಗಳು
Published 3 ಜೂನ್ 2024, 5:50 IST
Last Updated 3 ಜೂನ್ 2024, 5:50 IST
ಅಕ್ಷರ ಗಾತ್ರ

ಗಜೇಂದ್ರಗಡ: ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಗಜೇಂದ್ರಗಡ ಪಟ್ಟಣದ ಸುತ್ತಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಗಜೇಂದ್ರಗಡ ಸೇರಿದಂತೆ ಸುತ್ತಲಿನ ರಾಜೂರ, ಕುಂಟೋಜಿ, ರಾಮಾಪುರ ವ್ಯಾಪ್ತಿಯ ಗ್ರಾಮಗಳ ಫಲವತ್ತಾದ ಜಮೀನುಗಳನ್ನೂ ನಿವೇಶನಗಳಾಗಿ ಪರಿವರ್ತಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ.

ಗಜೇಂದ್ರಗಡ, ರೋಣ ತಾಲ್ಲೂಕಿನ ಜನರು ಸೇರಿದಂತೆ ನೆರೆಯ ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳ ಕುಷ್ಟಗಿ, ಯಲಬುರ್ಗಾ, ಹುನಗುಂದ, ಬಾದಾಮಿ ತಾಲ್ಲೂಕಿನ ಹಲವು ಹಳ್ಳಿಗರು ಗಜೇಂದ್ರಗಡ ಪಟ್ಟಣವನ್ನು ವ್ಯಾಪಾರ-ವಹಿವಾಟಿಗೆ ಅವಲಂಬಿಸಿದ್ದಾರೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಖಾಸಗಿ ಪವನ ವಿದ್ಯುತ್‌ ಉತ್ಪಾದನೆ ಕಂಪನಿಗಳು ಫ್ಯಾನ್‌, ವಿದ್ಯುತ್‌ ಕಂಬಗಳನ್ನು ಅಳವಡಿಸುವುದು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಜನರು ಗಜೇಂದ್ರಗಡ ಸುತ್ತಮುತ್ತಲಿನ ಜಮೀನು ಖರಿದಿಗೆ ಮುಂದಾಗುತ್ತಿದ್ದಾರೆ.

ವಹಿವಾಟು ಬೆಳೆದಂತೆಲ್ಲ ಪಟ್ಟಣ ಸಹ ಬೆಳೆಯುತ್ತಿದೆ. ಹೀಗಾಗಿ ಸುತ್ತಲಿನ ಗ್ರಾಮಗಳಲ್ಲಿನ ಜಮೀನುಗಳಿಗೆ ಬಂಗಾರದ ಬೆಲೆ ಬಂದಿದೆ.
ಕೆಲವು ರೈತರು ತಮ್ಮ ಜಮೀನಿನಲ್ಲಿ ಯಾವುದಾದರೂ ಸರ್ಕಾರಿ ರಸ್ತೆ, ಇನ್ಯಾವುದೋ ಸರ್ಕಾರಿ ಕಚೇರಿಗಳು ಅಥವಾ ಖಾಸಗಿ ಕಂಪನಿ ಫ್ಯಾನ್‌, ವಿದ್ಯುತ್ ಕಂಬಗಳು (ಗ್ರಿಡ್) ಬಂದರೆ ಈ ಬೆಲೆ ಸಿಗುವುದಿಲ್ಲ ಎಂದು ತಮ್ಮ ಜಮೀನನ್ನು ಹೆಚ್ಚಿನ ಬೆಲೆಗೆ ಮಾರಿ ಬೇರೆ ಕಡೆಗಳಲ್ಲಿ ಕಡಿಮೆ ಬೆಲೆಗೆ ಜಮೀನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದು, ಯಾರಾದರೂ ಜಮೀನು ಮಾರುವವರು, ಜಮೀನಿನ ಕುರಿತು ಮನೆಯಲ್ಲಿ ಕಲಹ ಇರುವಂತವರನ್ನು ಗುರುತಿಸಿ ಅಂತವರಿಗೆ ಹಣದ ಆಸೆಯೊಡ್ಡಿ ಜಮೀನು ಖರೀದಿಸಿ ಭೂ ಪರಿವರ್ತನೆ ಮಾಡಿಸಿ ಪ್ಲಾಟುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಗಜೇಂದ್ರಗಡ ಸುತ್ತಲಿನ ಫಲವತ್ತಾದ ಕೃಷಿ ಜಮೀನುಗಳು ನಿವೇಶನಗಳಾಗಿ ಪರಿವರ್ತನೆ ಹೊಂದುತ್ತಿವೆ.

2023ರ ನಿಯಮದ ಪ್ರಕಾರವೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನ, ಕೃಷಿ ಭೂಮಿಯ ದರ ನಿಗದಿಪಡಿಸಲಾಗಿದೆ. ಆದರೆ, ವಾಸ್ತವ ಬೆಲೆ ನೋಡಿದರೆ ತಾಳೆಯಾಗುವುದಿಲ್ಲ.

ರೈತರ ಜಮೀನುಗಳಿಗಿಲ್ಲ ಕಿಮ್ಮತ್ತು: ‌
ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 367 ನಿರ್ಮಾಣಕ್ಕೆ ಎನ್‌ಎ ಆದ ಪ್ಲಾಟುಗಳಿಗೆ ಚದರ ಮೀ.ಗೆ ₹2,500 ನೀಡಿದರೆ, ರೈತರ ಜಮೀನಿಗೆ ಚದರ ಮೀ.ಗೆ ₹80 ನೀಡಲಾಗಿದೆ. ಅದರಂತೆ ಖಾಸಗಿ ಕಂಪನಿಗಳ ವಿದ್ಯುತ್‌ ಕಂಬಗಳನ್ನು ಜಮೀನುಗಳಲ್ಲಿ ಹಾಕುವಾಗಲೂ ರೈತರಿಗೆ ಕಡಿಮೆ ಪರಿಹಾರ ನೀಡುತ್ತಿದ್ದಾರೆ. ಹೀಗಾಗಿ ಎನ್.ಎ ಆದ ಜಮೀನಿನ ಪಕ್ಕದಲ್ಲಿ ಉಳುಮೆ ಮಾಡುತ್ತಿರುವ ರೈತರು ನಮ್ಮ ಜಮೀನಿಗೆ ಕಿಮ್ಮತ್ತಿಲ್ಲವೇ ಎಂದು ಗೊಣಗುವಂತಾಗಿದೆ.

ಖಾಲಿ ನಿವೇಶನಗಳಿಂದ ಕಿರಿ ಕಿರಿ:
ಗಜೇಂದ್ರಗಡ ಪಟ್ಟಣದ ಸುತ್ತಲಿನ ಭೂಮಿಗೆ ಬೆಲೆ ಬಂದಿರುವುದರಿಂದ ಹಣವಂತರು, ನೌಕರಸ್ಥರು ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಖರೀದಿಸುವ ಮೂಲಕ ನಿವೇಶನದ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಖರೀದಿಸಿದ ನಿವೇಶನಗಳನ್ನು ಖಾಲಿ ಬಿಡುತ್ತಿರುವುದರಿಂದ ಅಲ್ಲಿ ಮುಳ್ಳು ಕಂಟಿಗಳು ಬೆಳೆಯುವುದರ ಜೊತೆಗೆ ಕಸ, ಇನ್ನಿತರ ತ್ಯಾಜ್ಯ ಎಸೆಯುವ ಸ್ಥಳಗಳಾಗಿ ಮಾರ್ಪಾಡಾಗುತ್ತಿವೆ.

ಖಾಸಗಿ ಕಂಪನಿಯವರ ಕಿರಿಕಿರಿ:
ತಾಲ್ಲೂಕಿನ ಗುಳಗುಳಿ ಗ್ರಾಮದಲ್ಲಿ ಪವನ ವಿದ್ಯುತ್‌ ಕಂಪನಿಯ ಪವರ್‌ ಸ್ಟೇಷನ್‌ ನಿರ್ಮಾಣವಾಗಿದ್ದು, ಕೊಪ್ಪಳ ಜಿಲ್ಲೆ, ರೋಣ-ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಅಳವಡಿಸಿರುವ ಫ್ಯಾನ್‌ಗಳಿಂದ ಉತ್ಪತ್ತಿಯಾಗುವ ಪವನ ವಿದ್ಯುತ್‌ನ್ನು 7 ಲೈನ್‌ಗಳ ಮೂಲಕ ಗುಳಗುಳಿ ಪವರ್‌ ಸ್ಟೇಷನ್‌ನಲ್ಲಿ ಶೇಖರಿಸಿ ಇಲ್ಲಿಂದ ಆಲಮಟ್ಟಿ ಪವರ್‌ ಸ್ಟೇಷನ್‌ಗೆ ರವಾನಿಸಿ ಅಲ್ಲಿಂದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಕೂಡಗಿ ಪವರ್‌ ಸ್ಟೇಷನ್‌ಗೆ ರವಾನೆಯಾಗುತ್ತದೆ. ಹೀಗಾಗಿ ರೈತರ ಜಮೀನುಗಳಲ್ಲಿ ನೂರಾರು ವಿದ್ಯುತ್‌ ಕಂಬಗಳನ್ನು (ಟವರ್) ಅಳವಡಿಸಲಾಗಿದ್ದು, ರೈತರಿಗೆ ಅತ್ಯಂತ ಕಡಿಮೆ ಪರಿಹಾರ ನೀಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ಈ ಕಂಬಗಳಿಂದ ರೈತರು ಜಮೀನಿನಲ್ಲಿ ಉಳುಮೆ ಮಾಡಲು ತೊಂದರೆಯಾಗುತ್ತಿದೆ. ಅಲ್ಲದೆ ತಾಲ್ಲೂಕಿನಲ್ಲಿ ಹೊಸದಾಗಿ ಪವನ ವಿದ್ಯುತ್‌ ಉತ್ಪಾದನೆ ಫ್ಯಾನ್‌ ಹಾಗೂ ಸೌರ ಫಲಕಗಳನ್ನು ಅಳವಡಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ರೈತರು ಜಮೀನು ಕೊಡಲು ನಿರಾಕರಿಸಿದಾಗ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಮತ್ತೇ ಕೆಲವರಿಗೆ ನೀವೇನೇ ಮಾಡಿದರೂ ನಿಮ್ಮ ಹೊಲದಲ್ಲಿಯೇ ಫ್ಯಾನ್‌ ಅಥವಾ ವಿದ್ಯುತ್‌ ಕಂಬ ಹಾಕುವುದನ್ನು ತಪ್ಪಿಸಲು ಆಗುವುದಿಲ್ಲ ಎಂಬ ಭಯ ಸೃಷ್ಟಿಸಿ ಜಮೀನು ಪಡೆಯುವ ಕಾರ್ಯಕ್ಕೆ ಪವನ ಕಂಪನಿಯವರು ಮುಂದಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಅಕ್ರಮದ ಹಣ ರಿಯಲ್‌ ಎಸ್ಟೆಟ್‌ ಗೆ ಹೂಡಿಕೆ
ಪಟ್ಟಣ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಜನರು ವಿವಿಧ ಮೂಲಗಳಿಂದ ಅಕ್ರಮವಾಗಿ ಗಳಿಸಿದ ಹಣದಲ್ಲಿ ಗಜೇಂದ್ರಗಡ ಸುತ್ತಲಿನ ಜಮೀನು ಖರೀದಿಸಿ ಕಪ್ಪು ಹಣ ನಂಬರ್‌ ಒನ್‌ ಮಾಡಿಕೊಳ್ಳುತ್ತಿದ್ದಾರೆ. ನೋಂದಣಾಧಿಕಾರಿ ಕಚೇರಿಯಲ್ಲಿರುವ ದರಕ್ಕೂ ಜಮೀನು ಖರೀದಿಸುವಾಗ ಕೊಡುವ ದರಕ್ಕೂ ಅಜಗಜಾಂತರ ಅಂತರವಿರುವುದರಿಂದ ನೋಂದಣಾಧಿಕಾರಿ ಕಚೇರಿಯಲ್ಲಿ ದರದ ಹೊರತಾಗಿ ನೀಡಬೇಕಾದದ್ದನ್ನು ಅಕ್ರಮವಾಗಿ ಗಳಿಸಿದ ಕಪ್ಪು ಹಣ ನೀಡುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಗಜೇಂದ್ರಗಡ ಸಮೀಪದ ಗ್ರಾಮಗಳ ಜಮೀನುಗಳಲ್ಲಿ ಹಾದು ಹೋಗಿರುವ ಪವನ ವಿದ್ಯುತ್‌ ಉತ್ಪಾದನೆ ಕಂಪನಿಗಳ ವಿದ್ಯುತ್‌ ಕಂಬಗಳು
ಗಜೇಂದ್ರಗಡ ಸಮೀಪದ ಗ್ರಾಮಗಳ ಜಮೀನುಗಳಲ್ಲಿ ಹಾದು ಹೋಗಿರುವ ಪವನ ವಿದ್ಯುತ್‌ ಉತ್ಪಾದನೆ ಕಂಪನಿಗಳ ವಿದ್ಯುತ್‌ ಕಂಬಗಳು
ಗಜೇಂದ್ರಗಡದ ಹೊರ ವಲಯದಲ್ಲಿ ಜಮೀನೊಂದನ್ನು ಎನ್.ಎ ಮಾಡಿರುವುದು
ಗಜೇಂದ್ರಗಡದ ಹೊರ ವಲಯದಲ್ಲಿ ಜಮೀನೊಂದನ್ನು ಎನ್.ಎ ಮಾಡಿರುವುದು
ಗಜೇಂದ್ರಗಡದ ಹೊರ ವಲಯದಲ್ಲಿ ಜಮೀನೊಂದನ್ನು ಎನ್.ಎ ಮಾಡಿರುವುದು
ಗಜೇಂದ್ರಗಡದ ಹೊರ ವಲಯದಲ್ಲಿ ಜಮೀನೊಂದನ್ನು ಎನ್.ಎ ಮಾಡಿರುವುದು
ಗಜೇಂದ್ರಗಡ ಪಟ್ಟಣದಲ್ಲಿ ಖಾಲಿಯಿರುವ ನಿವೇಶನದಲ್ಲಿ ಮುಳ್ಳು ಕಂಟಿಗಳು ಬೆಳೆದು ಕೊಳಚೆ ನೀರು ಸಂಗ್ರಹವಾಗಿರುವುದು
ಗಜೇಂದ್ರಗಡ ಪಟ್ಟಣದಲ್ಲಿ ಖಾಲಿಯಿರುವ ನಿವೇಶನದಲ್ಲಿ ಮುಳ್ಳು ಕಂಟಿಗಳು ಬೆಳೆದು ಕೊಳಚೆ ನೀರು ಸಂಗ್ರಹವಾಗಿರುವುದು
ಮುತ್ತಣ್ಣ ತಳವಾರ ಯುವ ಮುಖಂಡರು ಕಾಲಕಾಲೇಶ್ವರ.
ಮುತ್ತಣ್ಣ ತಳವಾರ ಯುವ ಮುಖಂಡರು ಕಾಲಕಾಲೇಶ್ವರ.
ಬಿ.ಎಂ.ಕುಂಬಾರ ವಕೀಲರು ಗಜೇಂದ್ರಗಡ
ಬಿ.ಎಂ.ಕುಂಬಾರ ವಕೀಲರು ಗಜೇಂದ್ರಗಡ
ರೇಣುಕಯ್ಯ ಅಂಗಡಿ ಕೊಡಗಾನೂರ ಗ್ರಾಮಸ್ಥ.
ರೇಣುಕಯ್ಯ ಅಂಗಡಿ ಕೊಡಗಾನೂರ ಗ್ರಾಮಸ್ಥ.
ಮಲ್ಲಿಕಾರ್ಜುನ ಗಾರಗಿ ಯುವ ಮುಖಂಡರು ಗೋಗೇರಿ.
ಮಲ್ಲಿಕಾರ್ಜುನ ಗಾರಗಿ ಯುವ ಮುಖಂಡರು ಗೋಗೇರಿ.
ಮುತ್ತಯ್ಯ ಬಾಳಿಕಾಯಿಮಠ ಯುವ ಮುಖಂಡ ಕೊಡಗಾನೂರ.
ಮುತ್ತಯ್ಯ ಬಾಳಿಕಾಯಿಮಠ ಯುವ ಮುಖಂಡ ಕೊಡಗಾನೂರ.
ರಮೇಶ ಗೂಳಿ ಯುವ ರೈತ ರಾಜೂರ.
ರಮೇಶ ಗೂಳಿ ಯುವ ರೈತ ರಾಜೂರ.
ವೀರುಪಾಕ್ಷಯ್ಯ ಚೌಕಿಮಠ ಉಪ ನೋಂದಣಿ ಅಧಿಕಾರಿ ಉಪ ನೋಂದಣಾಧಿಕಾರಿ ಕಚೇರಿ ಗಜೇಂದ್ರಗಡ.
ವೀರುಪಾಕ್ಷಯ್ಯ ಚೌಕಿಮಠ ಉಪ ನೋಂದಣಿ ಅಧಿಕಾರಿ ಉಪ ನೋಂದಣಾಧಿಕಾರಿ ಕಚೇರಿ ಗಜೇಂದ್ರಗಡ.
‌ಕಿರಣಕುಮಾರ ಕುಲಕರ್ಣಿ ತಹಶೀಲ್ದಾರರು ಗಜೇಂದ್ರಗಡ.
‌ಕಿರಣಕುಮಾರ ಕುಲಕರ್ಣಿ ತಹಶೀಲ್ದಾರರು ಗಜೇಂದ್ರಗಡ.
ರೈತರ ಮತ್ತು ಖಾಸಗಿ ಕಂಪನಿಗಳ ನಡುವೆ ಒಡಂಬಡಿಕೆ ಆಗಿರುತ್ತದೆ. ಅದರಂತೆ ಕಂಪನಿಯವರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿರುತ್ತಾರೆ. ಎಲ್ಲವೂ ಕಾನೂನು ರೀತಿಯಲ್ಲಿಯೇ ನಡೆಯುತ್ತದೆ ‌
‌ಕಿರಣಕುಮಾರ ಕುಲಕರ್ಣಿ ತಹಶೀಲ್ದಾರರು ಗಜೇಂದ್ರಗಡ

ಪಟ್ಟಿ ಮಾಡಿಸಿ.... ಗಜೇಂದ್ರಗಡಲ್ಲಿ ನಿವೇಶನ ಕೃಷಿ ಜಮೀನಿನ ಉಪ ನೋಂದಣಾಧಿಕಾರಿ ಕಚೇರಿಯ ಸದ್ಯದ ಮೌಲ್ಯ (2023ರ ಪರಿಸ್ಕೃತ ದರ) ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ;ಪ್ರತಿ ಚದರ ಮೀ.ಗೆ₹1600ರಿಂದ ₹3500 ಕೃಷಿ ಜಮೀನು;ಪ್ರತಿ ಎಕರೆಗೆ ₹4ಲಕ್ಷದಿಂದ ₹10 ಲಕ್ಷ ಕುಂಟೋಜಿ ರಾಮಾಪುರ ರಾಜೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ;ಪ್ರತಿ ಚದರ ಮೀ.ಗೆ₹1000ರಿಂದ ₹1500 ಕೃಷಿ ಜಮೀನು;ಪ್ರತಿ ಎಕರೆಗೆ ₹2 ಲಕ್ಷದಿಂದ ₹4 ಲಕ್ಷ

ಯಾರು ಏನಂತಾರೆ? ತೆರಿಗೆ ಹಣ ಅಭಿವೃದ್ಧಿಗೆ ಬಳಕೆಯಾಗಲಿ ಜಮೀನನ್ನು ನಿವೇಶನವಾಗಿ ಪರಿವರ್ತಿಸುವಾಗ ಕಟ್ಟಿಸಿಕೊಳ್ಳುವ ತೆರಿಗೆಯನ್ನು ಅದೇ ಬಡಾವಣೆ ಅಭಿವೃದ್ಧಿಗೆ ಬಳಕೆಯಾಗುವಂತಾಗಬೇಕು. ಅಂದಾಗ ಮಾತ್ರ ತೆರಿಗೆ ಹಣ ಪೋಲಾಗುವುದು ಭ್ರಷ್ಟರ ಪಾಲಾಗುವುದು ತಪ್ಪುವುದರ ಜೊತೆಗೆ ಬಡಾವಣೆ ನಿವಾಸಿಗಳಿಗೆ ಮೂಲ ಸೌಲಭ್ಯಗಳು ಲಭಿಸುತ್ತವೆ. –ಮುತ್ತಣ್ಣ ತಳವಾರ ಯುವ ಮುಖಂಡರು ಕಾಲಕಾಲೇಶ್ವರ ರೈತರು ಮೋಸದ ಜಾಲ ಅರಿಯಬೇಕು ಗಜೇಂದ್ರಗಡ ತಾಲ್ಲೂಕಿನಲ್ಲಿ ಪವನ ವಿದ್ಯುತ್‌ ಉತ್ಪಾದನೆ ಕಂಪನಿಯವರು ರೈತರ ಜಮೀನುಗಳನ್ನು ವರ್ಷಕ್ಕೆ ₹10-₹15 ಸಾವಿರಕ್ಕೆ 30 ವರ್ಷಕ್ಕೆ ಗುತ್ತಿಗೆ ಪಡೆದು 30 ವರ್ಷದ ಗುತ್ತಿಗೆ ಹಣ ರೈತರಿಗೆ ನೀಡುತ್ತಿದ್ದಾರೆ. ಸದ್ಯ ಅದು ರೈತರಿಗೆ ದೊಡ್ಡ ಮೊತ್ತವಾಗಿ ಕಾಣುತ್ತಿದೆ. ಆದರೆ ಮುಂದಿನ ಹತ್ತು ವರ್ಷಕ್ಕೆ ಈ ದರ ನೂರು ಪಟ್ಟು ಹೆಚ್ಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದರಲ್ಲಿ ರೈತರ ಫಲವತ್ತಾದ ಭೂಮಿ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದರ ಜೊತೆಗೆ ರೈತರಿಗೆ ಮೊಸವಾಗುತ್ತಿದೆ. ಕಂಪನಿಯವರಿಗೆ ಲಾಭವಾಗುತ್ತಿದೆ –ಬಿ.ಎಂ.ಕುಂಬಾರ ವಕೀಲರು ಗಜೇಂದ್ರಗಡ. ಸರ್ಕಾರ ಎಚ್ಚರವಹಿಸಬೇಕಿದೆ ರೈತರ ಫಲವತ್ತಾದ ಭೂಮಿಗಳನ್ನು ಇದೇ ರೀತಿ ಭೂ ಪರಿವರ್ತನೆ ಮಾಡುತ್ತ ಹೋದರೆ ಮುಂದಿನ ದಿನಗಳಲ್ಲಿ ಆಹಾರದ ಅಭದ್ರತೆ ಕಾಡುವುದರ ಜೊತೆಗೆ ಸಕಾಲದಲ್ಲಿ ಮಳೆ-ಬೆಳೆಗಳು ಬರುವುದಿಲ್ಲ. ಹಣದ ಆಸೆಗೆ ಜಮೀನು ಮಾರಿದರೆ ಮುಂದೆ ಅನ್ನದ ಬದಲು ಹಣ ತಿನ್ನಲು ಆಗುವುದಿಲ್ಲ. ಹೀಗಾಗಿ ಸರ್ಕಾರ ಫಲವತ್ತಾದ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಮಾಡಲು ಹಾಗೂ ಖಾಸಗಿ ಕಂಪನಿಯವರಿಗೆ ಪರಭಾರೆ ಮಾಡಲು ಅವಕಾಶ ನೀಡಬಾರದು –ರೇಣುಕಯ್ಯ ಅಂಗಡಿ ಕೊಡಗಾನೂರ ಗ್ರಾಮಸ್ಥ. ಅಂಗಲಾಚುವ ದಿನ ದೂರವಿಲ್ಲ: ಎಚ್ಚೆತ್ತುಕೊಳ್ಳಿ ಬರಡು ಭೂಮಿಯಲ್ಲಿ ಪವನ ಹಾಗೂ ಸೌರ ವಿದ್ಯುತ್‌ ಉತ್ಪಾದನೆ ಉದ್ಯಮ ಸ್ಥಾಪಿಸಿದರೆ ತೊಂದರೆಯಿಲ್ಲ. ಆದರೆ ಔಧ್ಯೋಗಿಕರಣದ ಹೆಸರಿನಲ್ಲಿ ಫಲವತ್ತಾದ ಭೂಮಿ ಬಳಸಿಕೊಳ್ಳುವುದು ಯಾವ ನ್ಯಾಯ? ರೈತರು ಜಮೀನಿನಲ್ಲಿ ಪ್ರತಿ ವರ್ಷ ಒಂದೆರಡು ಫಸಲು ಬೆಳೆಯುತ್ತಾರೆ. ಆ ಫಸಲು ಮಾರುಕಟ್ಟೆಗೆ ಬಂದು ಅಲ್ಲಿಂದ ಬೇರೆ ಬೇರೆ ಕಡೆಗಳಿಗೆ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ನೂರಾರು ಜನರಿಗೆ ಉದ್ಯೋಗ ಲಭಿಸುತ್ತದೆ. ಸರ್ಕಾರಕ್ಕೆ ತೆರಿಗೆ ಬರುತ್ತದೆ. ಈ ರೀತಿ ಖಾಸಗಿ ಕಂಪನಿಗಳಿಗೆ ಜಮೀನು ನೀಡುವುದರಿಂದ ರೈತರಿಗಷ್ಟೇ ನಷ್ಟವಾಗುವುದಿಲ್ಲ. ಬದಲಾಗಿ ಸರ್ಕಾರಕ್ಕೂ ನಷ್ಟವಾಗುತ್ತದೆ. ಇಂದು ಕಂಪನಿಯವರು ರೈತರ ಮನೆ ಬಾಗಿಲಿಗೆ ಬಂದು ಜಮೀನು ಖರೀದಿ ಅಥವಾ ಗುತ್ತಿಗೆ ಪಡೆಯುತ್ತಿದ್ದಾರೆ. ಮುಂದಿನ ಒಂದೆರಡು ದಶಕಗಳಲ್ಲಿ ಕುಟುಂಬದವರಿಗೆ ಫಸಲು ಬೆಳೆಯಲು ಒಂದು ಎಕರೆ ಜಮೀನು ನೀಡಿ ಎಂದು ಬಹುರಾಷ್ಟ್ರೀಯ ಕಂಪನಿಗಳ ಬಾಗಿಲಿಗೆ ರೈತರು ಹೋಗುವ ದಿನಗಳು ಬರುತ್ತವೆ–ಮಲ್ಲಿಕಾರ್ಜುನ ಗಾರಗಿ ಯುವ ಮುಖಂಡರು ಗೋಗೇರಿ. ರಂಗೋಲಿ ಕೆಳಗೆ ನುಸುಳುವ... ಧಾರ್ಮಿಕ ಸಂಸ್ಥೆಗಳಾದ ದೇವಸ್ಥಾನ ಮಸೀದಿ ಮಠಗಳಿಗೆ ನೀಡಿದ ಜಮೀನನ್ನು ಇನಾಂ ರದ್ದತಿ ಕಾಯ್ದೆ ಅಡಿಯಲ್ಲಿ ಭೂ ಪರಿವರ್ತನೆ ಮಾಡಲು ಅವಕಾಶವಿಲ್ಲ. ಆದರೆ ಧಾರ್ಮಿಕ ಸಂಸ್ಥೆಗಳ ಜಮೀನನ್ನು ಉಳುವವನೇ ಭೂಮಿಯ ಒಡೆಯ ಕಾಯ್ದೆ ಹೆಸರಿನಲ್ಲಿ ಪೂಜಾರಿಗಳ ಹೆಸರಿಗೆ ಮಾಡಿ ಅವರಿಂದ ಮತ್ತೇ ಬೇರೆಯವರು ಖರೀದಿಸಿ ಭೂ ಪರಿವರ್ತನೆ ಮಾಡಿ ಇನಾಂ ರದ್ದತಿ ಕಾಯ್ದೆ ಉಲ್ಲಂಘಿಸಿರುವುದಕ್ಕೆ ಕೋಡಗಾನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಮೀನು ಪರಭಾರೆ ಮಾಡಿರುವ ನಿದರ್ಶನವಿದೆ–ಮುತ್ತಯ್ಯ ಬಾಳಿಕಾಯಿಮಠ ಯುವ ಮುಖಂಡ ಕೊಡಗಾನೂರ. ಭೂ ಪರಿವರ್ತನೆ ತಡೆಯಿರಿ ಒಂದೆರಡು ಎಕರೆ ಫಲವತ್ತಾದ ಕೃಷಿಯನ್ನೇ ನೆಚ್ಚಿಕೊಂಡು ಹಲವಾರು ಬಡ ಹಾಗೂ ಮಧ್ಯಮ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಇಂತಹ ಕೃಷಿ ಭೂಮಿಯನ್ನು ಹಣದ ಆಸೆಗೆ ಭೂ ಪರಿವರ್ತನೆ ಮಾಡಿದರೆ ಕೃಷಿ ಭೂಮಿ ಕಡಿಮೆಯಾಗಿ ಆಹಾರದ ಅಭದ್ರತೆ ಕಾಡಲಿದೆ. ಅಲ್ಲದೆ ಪಕ್ಕದ ಜಮೀನು ಭೂ ಪರಿವರ್ತನೆಯಾಗಿ ನಿವೇಶನಗಳು ನಿರ್ಮಾಣವಾದರೆ ನಮ್ಮ ಜಮೀನಿಗೂ ಹಲವು ಕಂಟಕಗಳು ಎದುರಾಗುತ್ತವೆ. ಹೀಗಾಗಿ ಸರ್ಕಾರ ಫಲವತ್ತಾದ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಮಾಡುವುದನ್ನು ತಡೆಯಬೇಕು –ರಮೇಶ ಗೂಳಿ ಯುವ ರೈತ ರಾಜೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT