ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಂಬಳ | ಅನ್ನಭಾಗ್ಯ ಯೋಜನೆ: ಪರಿಹಾರವಾಗದ ಗೊಂದಲ, ಮೃತರ ಖಾತೆಗೂ ಹಣ ಜಮಾ

ಬ್ಯಾಂಕ್‌, ನ್ಯಾಯಬೆಲೆ ಅಂಗಡಿ ಎಡತಾಕುತ್ತಿರುವ ಜನತೆ
Published 5 ಆಗಸ್ಟ್ 2023, 6:07 IST
Last Updated 5 ಆಗಸ್ಟ್ 2023, 6:07 IST
ಅಕ್ಷರ ಗಾತ್ರ

ಡಂಬಳ: ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ ಐದು ಕೆಜಿ ಅಕ್ಕಿಯ ಜತೆಗೆ ಹೆಚ್ಚುವರಿ ಐದು ಕೆಜಿ ಅಕ್ಕಿಯ ನಗದನ್ನು ನೇರವಾಗಿ ಅರ್ಹ ಫಲಾನುವಿಗಳ ಖಾತೆಗೆ ವರ್ಗಾಯಿಸುತ್ತಿರುವ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭವಾಗಿದ್ದರಿಂದ ಅರ್ಹ ಫಲಾನುಭವಿಗಳು ಜಮಾ ಆಗಿರುವದನ್ನು ಖಚಿತ ಪಡಿಸಿಕೊಳ್ಳಲು ಬ್ಯಾಂಕಿನತ್ತ ಮುಖ ಮಾಡಿದ್ದಾರೆ.

ಇನ್ನೂ 2021ರಿಂದ 2023ರ ಅವಧಿಯಲ್ಲಿ ವಿವಿಧ ದರ್ಜೆಯ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ತಾಲ್ಲೂಕಿನ ಒಟ್ಟು 841 ಫಲಾನುಭವಿಗಳು ಅರ್ಜಿ ಸಲ್ಲಿಸಿ ವರ್ಷ ಕಳೆದರು ಇನ್ನೂ ಅರ್ಹ ಜನರಿಗೆ ಪಡಿತರ ಚೀಟಿ ಬಾಕಿ ಇರುವುದರಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ನಗದು ಹಣದಿಂದ ನೂರಾರು ಸಾರ್ವಜನಿಕರು ವಂಚಿತರಾಗಿದ್ದಾರೆ.

ಎರಡು ದಿನದಿಂದ ಜಿಟಿಜಿಟಿ ಮಳೆ ಪ್ರಾರಂಭವಾಗಿದ್ದರಿಂದ ಬಹುತೇಕ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ತಮಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯೋ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್‌ನತ್ತ ಮುಖ ಮಾಡಿದ್ದರಿಂದ ಬ್ಯಾಂಕಿನಲ್ಲಿ ಯೋಜನೆಯ ನೂರಾರು ಫಲಾನುಭವಿಗಳು ಸರತಿಯಲ್ಲಿ ನಿಂತುಕೊಂಡುಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಪ್ರಜಾವಾಣಿ ಗೆ ಮಾಹಿತಿ ನೀಡಿದ ಮುಂಡರಗಿ ತಾಲ್ಲೂಕ ಆಹಾರ ನಿರೀಕ್ಷಕ ಜಗದೀಶ ಭರಮಪ್ಪ ಅಮಾತಿ ತಾಲ್ಲೂಕಿನಲ್ಲಿ ಅಂತ್ಯೋದಯ 5256, ಬಿಪಿಎಲ್ 30952, ಎಪಿಎಲ್ 831 ಕಾರ್ಡುಗಳಿವೆ. ಇದರಲ್ಲಿ 3226 ಪಡಿತರ ಚೀಟಿದಾರರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್ ಮಾಡಿಸಿಕೊಂಡಿಲ್ಲ. ಪಡಿತರ ಕಾರ್ಡ್‌ದಾರರು ಇಕೆವೈಸಿ ಮಾಡಿಸಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸಿಕೊಳ್ಳದೆ ಇರುವವರು ತಕ್ಷಣ ಮಾಡಿಸಬೇಕು ಎಂದು ಅರ್ಹ ಪಡಿತರ ಚೀಟಿದಾರರಿಗೆ ಸೂಚೆನೆ ನೀಡುತ್ತಾರೆ.

2021ರಿಂದ 2023 ಸಾಲಿನಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಲ್ ಕಾರ್ಡ್‌ಗಾಗಿ 841 ಸಾರ್ವಜನಿಕರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ಹಲವು ಕಾರಣಾಂತರದಿಂದ ಅಪ್ರೋವಲ್‌ ಆಗದೇ ಬಾಕಿ ಇವೆ. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಗಳ ಗಮನಕ್ಕೂ ತರುತ್ತೇನೆ ಎನ್ನುತ್ತಾರೆ ಆಹಾರ ನಿರೀಕ್ಷಕ ಜಗದೀಶ ಭರಮಪ್ಪ ಅಮಾತಿ.

ಮೃತರ ಖಾತೆಗೂ ಹಣ ಜಮಾ
‘ನಮ್ಮ ಅತ್ತೆಯವರಾದ ಹಾಲವ್ವ ವೆಂಕಟೇಶಪ್ಪ ಗದಗಿನ ಕಳೆದ ವರ್ಷ ನಿಧನ ಹೊಂದಿದ್ದಾರೆ. ಅತ್ತೆ ಸೇರಿ ಒಟ್ಟು ಐದು ಜನ ಪಡಿತರ ಚೀಟಿಯಲ್ಲಿ ಸದಸ್ಯರಿದ್ದು ನಮ್ಮದು ಬಿಪಿಎಲ್ ಕಾರ್ಡ್‌ ಇದೆ. ಆದ್ರೆ ಸರ್ಕಾರದ ಅನ್ನಭಾಗ್ಯ ಯೋಜನೆಯ ಐದು ಕೆಜಿ ಅಕ್ಕಿ ಹಣ ₹ 850 ನಮ್ಮ ಅತ್ತೆವರ ಅವರ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದರಿಂದ ಈ ಯೋಜನೆಯಿಂದ ನಮ್ಮ ಕುಟುಂಬ ವಂಚಿತವಾಗಿದೆ’ ಬಿಪಿಎಲ್‌ ಚೀಟಿದಾರರಾದ ಗ್ರಾಮದ ಶೋಭಾ ಭೀಮಪ್ಪ ಗದಗಅಸಮಾಧಾನ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ ನಾವು ಎಲ್ಲ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಂಡಿದ್ದೇವೆ. ಇನ್ನೂ ಹಣ ಜಮಾ ಆಗಿಲ್ಲ
-ರೇಣುಕಾ ಸಿದ್ದಣ್ಣ ಯತ್ನಳ್ಳಿ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT