ಬುಧವಾರ, ಜನವರಿ 27, 2021
21 °C
ಜಿಲ್ಲಾ ಮಟ್ಟದ ಕಿಸಾನ್ ಚರ್ಚಾಗೋಷ್ಠಿಯಲ್ಲಿ ಅಧಿಕಾರಿಗಳಿಗೆ ಡಿ.ಸಿ ಸಲಹೆ

ರೈತರ ಆರ್ಥಿಕ ಸಬಲತೆಗೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಕಾನೂನಿನ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಿಸಾನ್ ಚರ್ಚಾಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸಹಕರಿಸಬೇಕು. ರೈತರ ಸಮಸ್ಯೆ, ಕೃಷಿ ಕ್ಷೇತ್ರದಲ್ಲಿನ ಸವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಲು ಚರ್ಚಾಗೋಷ್ಠಿ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ನಿರಂತರ ನಡೆಸಿ ಅನ್ನದಾತನನ್ನು ಆರ್ಥಿಕವಾಗಿ ಸದೃಢಗೊಳಿಬೇಕು’ ಎಂದು ತಿಳಿಸಿದರು.

‘ರೈತರ ಬೆಳೆಗಳು ಅತಿವೃಷ್ಟಿಗೆ ತುತ್ತಾದಲ್ಲಿ 72 ಗಂಟೆಗಳಲ್ಲಿ ರೈತರು ಸಂಬಂಧಿಸಿದ ವಿಮಾ ಕಂಪನಿಗಳಿಗೆ ಪರಿಹಾರಕ್ಕೆ ಅರ್ಜಿ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಗಿರುವ ಅತಿವೃಷ್ಟಿ ಗಮನಿಸಿ ರೈತರು ಅರ್ಜಿ ಸಲ್ಲಿಸಲು 20 ದಿನಗಳ ಕಾಲಾವಕಾಶ ನೀಡಿ, 27 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಎಲ್ಲ ಅರ್ಹ ರೈತರಿಗೂ ಪರಿಹಾರ ನೀಡಲಾಗುವುದು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ‘ಜಿಲ್ಲೆಯ ಏಳು ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಸರ್ಕಾರ ಘೋಷಿಸಿದೆ. 1.80 ಲಕ್ಷ ರೈತರಿಗೆ ಬೆಳೆಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈಗಾಗಲೇ ಜಿಲ್ಲೆಯ ರೈತರಿಗೆ ₹57.60 ಕೋಟಿ ಪರಿಹಾರ ನೀಡಲಾಗಿದೆ. ಬಾಕಿ ಹಣವನ್ನು ಸದ್ಯದಲ್ಲೇ ವಿತರಿಸಲಾಗುವುದು’ ಎಂದು ಹೇಳಿದರು.

‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಎಂಬುದರಲ್ಲಿ ಗದಗ ಜಿಲ್ಲೆಗೆ ಬ್ಯಾಡಗಿ ಮೆಣಸಿನಕಾಯಿ ಬೆಳೆಯನ್ನು ನಿಗದಿಪಡಿಸಲಾಗಿದೆ. ಬ್ಯಾಡಗಿಯ ಕೆಂಪು ಮೆಣಸಿನಕಾಯಿಯನ್ನು ಬೇರೆಡೆ ರಪ್ತು ಮಾಡುವ ಉದ್ದೇಶ ಹೊಂದಲಾಗಿದ್ದು, ಇದಕ್ಕಾಗಿ 20 ಸಂಸ್ಕರಣಾ ಘಟಕ ತೆರೆಯಲು ಸರ್ಕಾರವು ಪ್ರತಿ ಘಟಕಕ್ಕೆ ₹10 ಲಕ್ಷ ಸಬ್ಸಿಡಿ ನೀಡಲಿದೆ’ ಎಂದು ತಿಳಿಸಿದರು.

ರೈತ ಸಂಘಗಳ ಪದಾಧಿಕಾರಿಗಳಾದ ಶಿವಾನಂದ ಇಟಗಿ, ಈರಣ್ಣ ಮಜ್ಜಗಿ, ಶಂಕರ ಅಂಬ್ಲಿ, ಬಸವರಾಜ ಸುಗ್ನಳ್ಳಿ, ಮಲ್ಲಯ್ಯ ಸೊಪ್ಪಿನಮಠ ಮಾತನಾಡಿ, ‘ಎಸ್‌ಬಿಐ ಬ್ಯಾಂಕ್ ರೈತರನ್ನು ಋಣಮುಕ್ತರನ್ನಾಗಿ ಮಾಡುತ್ತಿದೆ. ಅದೇರೀತಿ ಇತರ ಬ್ಯಾಂಕ್‌ಗಳು ಮಾಡಬೇಕು. ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಡಿ ರೈತರ ಹೊಲಗಳ ರಸ್ತೆ ಸುಧಾರಿಸಬೇಕು. ಪ್ರತಿ ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲಿ ಸಹ ಗುಣಮಟ್ಟದ ಶೀಥಲೀಕರಣ ಘಟಕ ಆರಂಭಿಸಿ ರೈತರಿಗೆ ನೆರವಾಗಬೇಕು. ರೈತರಿಗೆ ಕೃಷಿ ಉಪಕರಣಗಳು ರಿಯಾಯಿತಿ ದರದಲ್ಲಿ ಸಕಾಲಕ್ಕೆ ದೊರೆಯಬೇಕು. ಸಾವಯವ ಬೆಳೆ ಬೆಳೆಯಲು ಪ್ರೋತ್ಸಾಹ ಅಗತ್ಯ.ರೈತರ ಬೆಳೆಗಳ ಮೌಲ್ಯವರ್ಧನೆಗೆ ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕು’ ಎಂದರು.

ಕಿಸಾನ್‌ ಚರ್ಚಾಗೋಷ್ಠಿಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಜಿ.ಬಿ.ಮನಗುಳಿ, ಕೃಷಿ ಸಂಶೋಧಕ ಸಿ.ಎಂ.ರಫೀಕ್, ಲೀಡ್ ಬ್ಯಾಂಕ್ ಮ್ಯಾನೇಜರ್‌ ಮುರಳೀಧರ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ರೈತ ಮುಖಂಡರು ಇದ್ದರು.

ರೈತಸ್ನೇಹಿ ಯೋಜನೆ ರೂಪಿಸಿ

ರೈತ ಮುಖಂಡರಾದ ಹೊಸಳ್ಳಿಯ ದೇವೆಂದ್ರಪ್ಪ, ರೋಣದ ಶಿವಪ್ಪ, ಮುಂಡರಗಿ ಸುರೇಶ ಹಲವಾಗಲ ಮಾತನಾಡಿ, ‘ರೈತ ಸ್ವಾವಲಂಬಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಲಿ. ರಾಸಾಯನಿಕ ಕಡಿಮೆ ಮಾಡುವ ಮೂಲಕ ಭೂಮಿಯ ಫಲವತ್ತತೆ ಅಧಿಕಗೊಳಿಸಬೇಕು. ರೈತರಿಗೆ ಬಿತ್ತನೆ ಬೀಜಗಳು ಉತ್ತಮ ಸಬ್ಸಿಡಿಯಲ್ಲಿ ಸಕಾಲಕ್ಕೆ ದೊರೆಯುವಂತಾಗಲಿ. ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಆಗುವುದನ್ನು ತಪ್ಪಿಸಬೇಕು. ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ನಿರಂತರವಾಗಿ ತೆರೆದಿರುವ ಮೂಲಕ ಉತ್ತಮ ಬೆಲೆ ದೊರಕಿಸಿಕೊಡಬೇಕು’ ಎಂದರು.

**

ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ

2020–21ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ 10 ಮಂದಿ ರೈತರಿಗೆ ಪ್ರದಾನ ಮಾಡಿ ಗೌರವಿಸಿದರು.

ಗದಗ ತಾಲ್ಲೂಕಿನ ನಾಗರಾಜ ಪಾಟೀಲ, ಅಶೋಕ ಹಾಲಕೇರಿ, ಮುಂಡರಗಿ ತಾಲ್ಲೂಕಿನ ಈರಪ್ಪ ಮಜ್ಜಗಿ, ಪ್ರಕಾಶಗೌಡ ಕರಿಸೋಮನಗೌಡರ, ನರಗುಂದ ತಾಲ್ಲೂಕಿನ ಸಂಗಪ್ಪ ಹಳೇಹೊಳಿ, ಮಲ್ಲಿಕಾರ್ಜುನ ಪಾಟೀಲ, ರೋಣ ತಾಲ್ಲೂಕಿನ ಮಲ್ಲಯ್ಯ ಗುರುಬಸಪ್ಪನವರಮಠ, ಶಿರಹಟ್ಟಿ ತಾಲ್ಲುಕಿನ ಮಲ್ಲನಗೌಡ ಪಾಟೀಲ, ಚನ್ನಬಸಪ್ಪ ಜಗಲಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.