ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಕೈಹಿಡಿದ ಕೃಷಿಯಾಧಾರಿತ ವೈವಿಧ್ಯ ಉದ್ಯೋಗ

ದೀರ್ಘಾವಧಿ ಫಸಲಿನ ಗಿಡ ನೆಟ್ಟು ಯಶ ಕಂಡ ಮುಂಡರಗಿಯ ರೈತ ದೇವಪ್ಪ ಕೋವಿ
Published 7 ಜೂನ್ 2024, 7:07 IST
Last Updated 7 ಜೂನ್ 2024, 7:07 IST
ಅಕ್ಷರ ಗಾತ್ರ

ಮುಂಡರಗಿ: ಸಾಂಪ್ರದಾಯಿಕ ಬೆಳೆಗಳೊಂದಿಗೆ ದೀರ್ಘಾವಧಿ ಫಸಲು ನೀಡುವ ಗಿಡ, ಮರಗಳನ್ನು ಬೆಳೆಯುವ ಮೂಲಕ ಮುಂಡರಗಿ ಪಟ್ಟಣದ ರೈತ ದೇವಪ್ಪ ಕೋವಿ ಅವರು ನಿಯಮಿತವಾಗಿ ಆದಾಯ ಪಡೆಕೊಳ್ಳುತ್ತಿದ್ದಾರೆ.

ಪಟ್ಟಣದಲ್ಲಿ ಕೇವಲ ಏಳೂವರೆ ಎಕರೆ ನೀರಾವರಿ ಜಮೀನು ಹೊಂದಿರುವ ದೇವಪ್ಪ ಅವರು ಕೃಷಿ ಚಟುವಟಿಕೆಗಳ ಜೊತೆಗೆ ಪ್ರತಿನಿತ್ಯ ಕೃಷಿಯಾಧಾರಿತ ವಿವಿಧ ವೈವಿಧ್ಯಮಯ ಉಪ ಉದ್ಯೋಗಗಳನ್ನು ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಕಳೆದ ಬೇಸಿಗೆ ಹಂಗಾಮಿನಲ್ಲಿ ಕೇವಲ ಒಂದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ ದೇವಪ್ಪ ಅವರು, ಅದರಲ್ಲಿ ಭರ್ಜರಿ 27ಕ್ವಿಂಟಲ್ ಮೆಕ್ಕೆಜೋಳ ಪಡೆದುಕೊಂಡಿದ್ದಾರೆ.

ಖರ್ಚು ಬೆಚ್ಚಗಳನ್ನು ಕಳೆದು ಅದೊಂದರಿಂದಲೇ ಸುಮಾರು ₹40 ಸಾವಿರ ಆದಾಯ ಗಳಿಸಿದ್ದಾರೆ.

ದೇವಪ್ಪ ಅವರು ತಲಾ ಒಂದೂವರೆ ಎಕರೆ ಜಮೀನಿನಂತೆ ಒಟ್ಟು ಆರು ಎಕರೆ ಜಮೀನಿನಲ್ಲಿ 1,500 ರಕ್ತಚಂದನ, 1,500 ಶ್ರೀಗಂಧ, 1,500 ಹೆಬ್ಬೇವು ಹಾಗೂ 1,500 ಮಾಗಣಿ ಗಿಡಗಳನ್ನು ಬೆಳೆದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ರಕ್ತಚಂದನ ಕಾಂಡವು ₹35 ಸಾವಿರಕ್ಕೆ, ಒಂದು ಕೆ.ಜಿ ಶ್ರೀಗಂಧ ₹7,500ಕ್ಕೆ ಮಾರಾಟವಾಗುತ್ತಲಿದೆ. ಅದೇ ರೀತಿ ಹೆಬ್ಬೇವು ಹಾಗೂ ಮಾಗಣಿ ಗಿಡಗಳಿಗೂ ಅಪಾರ ಬೇಡಿಕೆ ಹಾಗೂ ಬೆಲೆ ಇದೆ.

ದೇವಪ್ಪ ಅವರು ಧೀರ್ಘಾವಧಿ ಫಸಲು ನೀಡುವ ಸಸಿಗಳನ್ನು ನೆಟ್ಟು ಸುಮಾರು 12 -15ವರ್ಷಗಳು ಕಳೆದಿದ್ದು, ಗಿಡಗಳೆಲ್ಲ ಈಗ ಸಮೃದ್ಧವಾಗಿ ಬೆಳೆದು ನಿಂತಿವೆ. ಇನ್ನು ಕೆಲವೇ ಕೆಲವು ವರ್ಷಗಳು ಗತಿಸಿದರೆ ಗಿಡಗಳು ಕಟಾವಿಗೆ ಬರುತ್ತವೆ. ಅವುಗಳಿಂದ ದೇವಪ್ಪ ಅವರಿಗೆ ಲಕ್ಷಾಂತರ ರೂಪಾಯಿ ಆದಾಯ ಹರಿದು ಬರಲಿದೆ.

ಜಮೀನಿನ ಬದುಗಳಲ್ಲಿ 10 ತೆಂಗಿನ ಮರ, 4 ಚಿಕ್ಕು ಗಿಡ, ಎರಡು ಹನುಮಫಲ, ಎರಡು ರಾಮಫಲ ಗಿಡ, 8 ಪೇರಲ ಗಿಡಗಳನ್ನು ನೆಟ್ಟಿದ್ದು, ಅವುಗಳು ಈಗ ನಿಯಮಿತವಾಗಿ ಫಸಲು ನೀಡುತ್ತಲಿವೆ. ಬದುಗಳಲ್ಲಿ ನೆಟ್ಟಿರುವ ವಿವಿಧ ಗಿಡಗಳಿಂದ ದೇವಪ್ಪ ಅವರು ನಿತ್ಯ ಆದಾಯ ಪಡೆಯುತ್ತಿದ್ದಾರೆ.

ಜಮೀನುಗಳಲ್ಲಿ ಬೆಳೆದಿರುವ ಧೀರ್ಘಾವಧಿ ಫಸಲು ನೀಡುವ ಗಿಡ, ಮರಗಳಿಗೆ ದೇವಪ್ಪ ಅವರು ನಿಯಮಿತವಾಗಿ ಸಗಣಿ ಗೊಬ್ಬರ ನೀಡುತ್ತಿದ್ದಾರೆ. ಪ್ರತಿ ವರ್ಷ ಗಿಡದ ಕೆಳಗೆ ಬೀಳುವ ಅಪಾರ ಪ್ರಮಾಣದ ಗಿಡಗಳ ಎಲೆ ಹಾಗೂ ಮತ್ತಿತರ ತ್ಯಾಜ್ಯವು ನೃಸರ್ಗಿಕ ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಹೀಗಾಗಿ ಗಿಡ, ಮರಗಳು ತುಂಬಾ ಸೊಗಸಾಗಿ ಬೆಳೆದು ನಿಂತಿವೆ.

ಹೈನುಗಾರಿಕೆಗೂ ಆದ್ಯತೆ

ದೇವಪ್ಪ ಅವರು ಕೃಷಿಯ ಜೊತೆಗೆ ಕೃಷಿಯಾಧಾರಿತ ಹೈನುಗಾರಿಕೆ ಮೇಕೆ ಹಾಗೂ ಕುರಿ ಸಾಕಾಣಿಕೆ ಮೊದಲಾದವುಗಳನ್ನು ಕೈಗೊಂಡಿದ್ದಾರೆ. ಮನೆಯಲ್ಲಿ ಎರಡು ಹಸುಗಳನ್ನು ಸಾಕಿದ್ದು ಅವುಗಳಿಂದ ದೊರೆಯುವ ಹಾಲು ಹಾಗೂ ಮತ್ತಿತರ ಹೈನೋತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಮನೆಯಲ್ಲಿ ಕೆಲವು ಮೇಕೆ ಕುರಿ ಹಾಗೂ ಟಗರುಗಳನ್ನು ಸಾಕಿದ್ದಾರೆ. ಆರೆಂಟು ತಿಂಗಳಿನಲ್ಲಿ ಅವುಗಳನ್ನು ಮಾರಾಟ ಮಾಡಿ ಪುನಃ ಕುರಿ ಮರಿಗಳನ್ನು ಸಾಕುತ್ತಾರೆ. ಕುರಿಮರಿ ಸಾಕಣೆಯು ದೇವಪ್ಪ ಅವರ ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ. ಕುರಿಮರಿಗಳ ಮಾರಾಟದಿಂದ ಸಾಕಷ್ಟು ಅದಾಯ ಗಳಿಸುತ್ತಿದ್ದಾರೆ.

ರೈತರು ಕೇವಲ ಕೃಷಿ ಕಾಯಕ ಅವಲಂಬಿಸದೆ ಕೃಷಿಯಾಧಾರಿತ ಕಾಯಕಗಳನ್ನು ಕೈಗೊಳ್ಳಬೇಕು. ಇದರಿಂದ ನಷ್ಟದ ಪ್ರಮಾಣ ಕಡಿಮೆಮಾಡಿಕೊಳ್ಳಬಹುದು
-–ದೇವಪ್ಪ ಕೋವಿ, ‌ರೈತ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT