ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ಸರ್ಕಾರಿ ಪಿಯು ಕಾಲೇಜು: ಕಾಯಂ ಉಪನ್ಯಾಸಕರ ಕೊರತೆ

ಉನ್ನತ ಶಿಕ್ಷಣಕ್ಕೆ ಮೂಲಸೌಭ್ಯಗಳಿಲ್ಲ: ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ
Published 23 ಮೇ 2024, 6:23 IST
Last Updated 23 ಮೇ 2024, 6:23 IST
ಅಕ್ಷರ ಗಾತ್ರ

ಗಜೇಂದ್ರಗಡ: ತಾಲ್ಲೂಕಿನಲ್ಲಿ ನಾಲ್ಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಬಹುತೇಕ ಎಲ್ಲ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಸಮಸ್ಯೆಯಿದ್ದು, ಬೋಧನೆಗೆ ಅತಿಥಿ ಉಪನ್ಯಾಸಕರ ಅವಲಂಬನೆ ಅನಿವಾರ್ಯವಾಗಿದೆ.

ಗಜೇಂದ್ರಗಡ, ನರೇಗಲ್‌ ಪಟ್ಟಣಗಳು ಸೇರಿದಂತೆ ಮುಶಿಗೇರಿ, ನಿಡಗುಂದಿ ಗ್ರಾಮಗಳಲ್ಲಿ ತಲಾ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು, ಗಜೇಂದ್ರಗಡ ಹಾಗೂ ನರೇಗಲ್‌ ಕಾಲೇಜುಗಳಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿವೆ. ನಿಡಗುಂದಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗಗಳಿದ್ದು, ಮುಶಿಗೇರಿ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರ ಇದೆ.

ನರೇಗಲ್‌ ಹೊರತುಪಡಿಸಿ ಎಲ್ಲ ಕಾಲೇಜುಗಳಲ್ಲಿ ಪ್ರಭಾರ ಪ್ರಾಚಾರ್ಯರಿದ್ದು, ಅರ್ಧದಷ್ಟು ಉಪನ್ಯಾಸಕರು ಹಾಗೂ ಡಿ ಗ್ರುಪ್‌ ಮತ್ತು ಪ್ರಥಮ ದರ್ಜೆ ಸಹಾಯಕರ ಕೊರತೆಯಿದೆ. ಗಜೇಂದ್ರಗಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 11 ಕಾಯಂ ಉಪನ್ಯಾಸಕರಿರಬೇಕು. ಆದರೆ 6 ಉಪನ್ಯಾಸಕರು ಹಾಗೂ 5 ಅತಿಥಿ ಉಪನ್ಯಾಸಕರಿದ್ದಾರೆ. ‌

ನಿಡಗುಂದಿಯ ಡಾ.ವೀರಪ್ಪ ಸಂಕನೂರ ಸರ್ಕಾರಿ ಪಿಯು ಕಾಲೇಜಿಗೆ ಪ್ರತಿವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ. ಕಾಲೇಜಿನಲ್ಲಿ ಓಟ್ಟು 7 ಕಾಯಂ ಉಪನ್ಯಾಸಕರಿರಬೇಕು. ಸದ್ಯ 4 ಜನರಿದ್ದು, ಇಬ್ಬರು ಅತಿಥಿ ಉಪನ್ಯಾಸಕರ ಜೊತೆಗೆ ಬೇರೆ ಕಾಲೇಜಿನ ಒಬ್ಬ ಉಪನ್ಯಾಸಕರನ್ನು ನಿಯುಕ್ತಿ ಮಾಡಿಕೊಳ್ಳಲಾಗಿತ್ತು.

ಅಲ್ಲದೆ ಈ ತಿಂಗಳ (ಮೇ) ತಿಂಗಳ ಅಂತ್ಯಕ್ಕೆ ಸಮಾಜಶಾಸ್ತ್ರ ಉಪನ್ಯಾಸಕರು ನಿವೃತ್ತಿ ಹೊಂದಲಿದ್ದಾರೆ. ನರೇಗಲ್‌ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 14 ಖಾಯಂ ಉಪನ್ಯಾಸಕರಿರಬೇಕು. ಆದರೆ ಇಂಗ್ಲಿಷ್‌, ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಅಕೌಂಟೆನ್ಸಿ, ರಸಾಯನ ವಿಜ್ಞಾನ, ಗಣಿತ, ಜೀವ ವಿಜ್ಞಾನ ವಿಷಯಗಳ ಕಾಯಂ ಉಪನ್ಯಾಸಕರ ಕೊರತೆಯಿದೆ. ಅಲ್ಲದೆ ಸದ್ಯದಲ್ಲಿಯೇ ಕನ್ನಡ ಉಪನ್ಯಾಸಕರು ಪದೋನ್ನತಿ ಹೊಂದಲಿದ್ದಾರೆ. ಮುಶಿಗೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ 7 ಕಾಯಂ ಉಪನ್ಯಾಸಕರ ಪೈಕಿ ಇಬ್ಬರು ಮಾತ್ರ ಇದ್ದಾರೆ.

ಗಜೇಂದ್ರಗಡದ ಕಾಲೇಜಿನಲ್ಲಿ ಮಹಿಳಾ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆಯಿದ್ದು, ಉಳಿದ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕಿದೆ.

ʼಗಜೇಂದ್ರಗಡ ಮತ್ತು ನರೇಗಲ್‌ ಪಟ್ಟಣಗಳಲ್ಲಿ ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ಅವುಗಳಲ್ಲಿ ಪ್ರವೇಶ ಪಡೆಯುವುದು ಬಹಳಷ್ಟು ವಿದ್ಯಾರ್ಥಿಗಳ ಮೊದಲ ಆದ್ಯತೆಯಾಗಿದೆ. ಅಲ್ಲಿ ಪ್ರವೇಶ ಸಿಗದಿದ್ದಾಗ ಪರ್ಯಾಯವೆಂಬಂತೆ ಸರ್ಕಾರಿ ಕಾಲೇಜುಗಳನ್ನು ಅವಲಂಬಿಸಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಉಪನ್ಯಾಸಕರು, ಸಿಬ್ಬಂದಿ ನೀಡುವುದರ ಜೊತೆಗೆ ಮೂಲ ಸೌಲಭ್ಯ ಒದಗಿಸಲು ಜನಪ್ರತಿನಿಧಿಗಳು ಮತ್ತು ಸರ್ಕಾರ ಕ್ರಮ ಕೈಗೊಂಡಲ್ಲಿ ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗಿಂತ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವುದರಲ್ಲಿ ಸಂಶಯವಿಲ್ಲʼ ಎಂದು ಹೆಸರು ಹೇಳಲಿಚ್ಚಿಸದ ಉಪನ್ಯಾಸಕರೊಬ್ಬರು ಹೇಳಿದರು.

ʼಕೋವಿಡ್‌-19 ಬಳಿಕ ವಿದ್ಯಾರ್ಥಿಗಳಲ್ಲಿ ಕಾಲೇಜಿಗೆ ಬರುವುದಕ್ಕೆ ಆಸಕ್ತಿ ಕಡಿಮೆಯಾಗಿದ್ದು ಬಹಳಷ್ಟು ವಿದ್ಯಾರ್ಥಿಗಳು ಗೈರಾಗುತ್ತಿರುವುದರಿಂದ ಇತ್ತೀಚಿನ ವರ್ಷಗಳಿಂದ ಕಾಲೇಜಿನ ಫಲಿತಾಂಶ ಕಡಿಮೆಯಾಗುತ್ತಿದೆ
ಬಿ.ಬಿ.ಗುರಿಕಾರ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಗಜೇಂದ್ರಗಡ
ನಮ್ಮ ಕಾಲೇಜಿಗೆ ಪ್ರತಿವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ. ಕಾಲೇಜಿನಲ್ಲಿ ಪ್ರಾಚಾರ್ಯರು ಮೂವರು ಉಪನ್ಯಾಸಕರು ಹಾಗೂ ಡಿ ದರ್ಜೆ ನೌಕರರ ಕೊರತೆಯಿದೆ. ಅಲ್ಲದೆ ಕಟ್ಟಡದ ಬಣ್ಣ ಮಾಸಿದ್ದು ಕಾಲೇಜಿನ ಅಂದ ಮಾಸಿದಂತಿದೆ
ಎಸ್.ಆರ್.ಕರಮಡಿ ಪ್ರಭಾರ ಪ್ರಾಚಾರ್ಯ ಡಾ.ವೀರಪ್ಪ ಸಂಕನೂರ ಸರ್ಕಾರಿ ಪಿಯು ಕಾಲೇಜು ನಿಡಗುಂದಿ
ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದ್ದು ಖಾಲಿಯಿರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೀಡಲಾಗಿದೆ
ಜಿ.ಎನ್.ಕುರ್ತಕೋಟಿ ಡಿಡಿಪಿಐ ಗದಗ
ಕಾಲೇಜಿಗೆ ಕಿಡಿಗೇಡಿಗಳ ಕಾಟ
ಗಜೇಂದ್ರಗಡದ ಸರ್ಕಾರಿ ಪಿಯು ಕಾಲೇಜು ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಬಾಲಕರ ಸರ್ಕಾರಿ ಪ್ರೌಢಶಾಲೆ ಮೌಲಾನಾ ಆಜಾದ್‌ ಶಾಲೆ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿವೆ. ಆವರಣಕ್ಕೆ ಎರಡು ಮುಖ್ಯದ್ವಾರಗಳಿದ್ದು ಒಂದು ಕಡೆ ಗೇಟ್‌ ಅಳವಡಿಸಿಲ್ಲ. ಹೀಗಾಗಿ ಆವರಣದಲ್ಲಿ ಹೊರಗಿನ ಜನರು ಆಟವಾಡುವುದು ಸೇರಿದಂತೆ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿವೆ. ಅಲ್ಲದೆ ಕಿಡಿಗೇಡಿಗಳು ಶಾಲೆ-ಕಾಲೇಜುಗಳ ಕಿಟಕಿ ಗಾಜು ಒಡೆಯುವುದು ಎಲ್ಲೆಂದರಲ್ಲಿ ಗಲಿಜು ಮಾಡುವುದು ಸಾಮಾನ್ಯವಾಗಿದೆ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT