ಲಕ್ಷ್ಮೇಶ್ವರ: ‘ಒಂದೂವರೆ ತಿಂಗಳಿಂದ ಲಕ್ಷ್ಮೇಶ್ವರದ ಜನರಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಆಗದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಶನಿವಾರ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದರು. ಆದರೆ ಶುಕ್ರವಾರ ಇಲ್ಲಿನ ಪುರಸಭೆ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಂಗಳವಾರ ನೀರು ಪೂರೈಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಕಾರ್ಯಕರ್ತರು ಲಕ್ಷ್ಮೇಶ್ವರ ಬಂದ್ ಹಿಂಪಡೆದರು.
ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ ‘ಜಾಕ್‌ವೆಲ್‌ನಲ್ಲಿದ್ದ ಮೋಟಾರ್ ಸುಟ್ಟಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯ ಮೋಟಾರ್ ದುರಸ್ತಿ ನಡೆಯುತ್ತಿದ್ದು ಸೋಮವಾರದೊಳಗೆ ದುರಸ್ತಿಯಾದ ಮೋಟಾರ್ ಅಳವಡಿಸಿ ನೀರು ಪೂರೈಸಲಾಗುವುದು’ ಎಂದರು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ ಮಾತನಾಡಿ, ‘ಮಂಗಳವಾರ ಅಥವಾ ಬುಧವಾರ ನೀರು ಬರದಿದ್ದರೆ ಪುರಸಭೆ ಎದುರು ಅಮರಣಾಂತ ಉಪವಾಸ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.
ಪುರಸಭೆ ಸದಸ್ಯ ರಾಜಣ್ಣ ಕುಂಬಿ ಮಾತನಾಡಿ ‘ಮೋಟಾರ್ ದುರಸ್ತಿಗೆ ಅಧಿಕಾರಿಗಳು ಮತ್ತು ಸದಸ್ಯರು ಸತತ ಪ್ರಯತ್ನ ಮಾಡುತ್ತಿದ್ದೇವೆ. ಮಂಗಳವಾರ ನೀರು ಪೂರೈಸಲಾಗುವುದು’ ಎಂದು ತಿಳಿಸಿದರು.
ಸದಸ್ಯರಾದ ಮಹೇಶ ಹೊಗೆಸೊಪ್ಪಿನ, ಪ್ರವೀಣ ಬಾಳಿಕಾಯಿ ‘ಇಷ್ಟು ದಿವಸ ಆಡಳಿತ ಮಂಡಳಿ ಇರಲಿಲ್ಲ. ಇದೀಗ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಸಕಾಲಕ್ಕೆ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದರು.
ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ‘ಒಂದೂವರೆ ತಿಂಗಳಿಂದ ನೀರು ಬಿಟ್ಟಿಲ್ಲ. ಅಷ್ಟು ದಿನಗಳ ಕರ ವಸೂಲಿ ಮಾಡಬಾರದು’ ಎಂದು ಆಗ್ರಹಿಸಿದರು.