ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ನೀರಿಗಾಗಿ ಜನರ ಪರದಾಟ

Published 24 ಫೆಬ್ರುವರಿ 2024, 4:55 IST
Last Updated 24 ಫೆಬ್ರುವರಿ 2024, 4:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ನೀರಿಗೆ ಬರ ಬಂದಿದ್ದು, ಜನತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಶಕಗಳಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುತ್ತಿದ್ದ ತುಂಗಭದ್ರಾ ನದಿ ಈ ವರ್ಷ ಮಳೆ ಇಲ್ಲದ ಕಾರಣ ಸಂಪೂರ್ಣ ಬತ್ತಿ ಹೋಗಿದೆ. ಈ ನೀರನ್ನೇ ನೆಚ್ಚಿದ್ದ ಲಕ್ಷ್ಮೇಶ್ವರಕ್ಕೆ ನೀರಿನ ಕ್ಷಾಮ ಎದುರಾಗಿದೆ.

ಹಾವೇರಿ ಜಿಲ್ಲೆ ಮೇವುಂಡಿ ಹತ್ತಿರ ತುಂಗಭದ್ರಾ ನದಿಗೆ ನಿರ್ಮಿಸಿರುವ ಜಾಕ್‍ವೆಲ್‍ನಿಂದ ಲಕ್ಷ್ಮೇಶ್ವರಕ್ಕೆ ನದಿ ನೀರು ಪೂರೈಕೆ ಆಗುತ್ತಿತ್ತು. ಆದರೆ ನದಿ ಖಾಲಿ ಆಗಿದ್ದು ಗಂಭೀರ ಸಮಸ್ಯೆ ತಲೆದೋರಿದೆ. ನದಿ ನೀರು ಪೂರೈಕೆ ಆಗುವ ಪೂರ್ವದಲ್ಲಿ ಕೊಳವೆ ಬಾವಿಗಳ ಮೂಲಕ ಪುರಸಭೆ ನೀರು ಪೂರೈಕೆ ಮಾಡುತ್ತಿತ್ತು. ಆದರೆ ನದಿ ನೀರು ಬಂದ ಮೇಲೆ ಕೊಳವೆ ಬಾವಿಗಳತ್ತ ಪುರಸಭೆ ನಿರ್ಲಕ್ಷ್ಯ ಮಾಡಿತು. ಅಲ್ಲದೆ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದ್ದ ಪೈಪ್‍ಲೈನ್‍ನ್ನೂ ಸಹ ಪುರಸಭೆ ತೆಗೆದು ಹಾಕಿತು. ಹೀಗಾಗಿ ಕೊಳವೆ ಬಾವಿಗಳಿಂದ ಮನೆ ಮನೆಗೆ ನೀರು ಪೂರೈಕೆ ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ.

ಪಟ್ಟಣದಲ್ಲಿ ಪುರಸಭೆಗೆ ಸೇರಿದ 97 ಕೊಳವೆ ಬಾವಿಗಳಿದ್ದು ಅವುಗಳೇ ಈಗ ನೀರಿನ ಆಸರೆಯಾಗಿವೆ. ಎಲ್ಲ ವಾರ್ಡ್‍ಗಳಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಸಲು ಪುರಸಭೆ ಹಗಲೂ ರಾತ್ರಿ ಹೆಣಗಾಡುತ್ತಿದೆ. ಆದರೆ ಕೆಲ ಭಾಗಗಳಲ್ಲಿ ನೀರು ಬರುವುದೇ ಇಲ್ಲ. ಹೀಗಾಗಿ ಅಲ್ಲಿನ ಜನರು ನೀರಿಗಾಗಿ ಅಲೆದಾಡುವ ಸ್ಥಿತಿ ಇದೆ.

ಜೆಡಿಎಸ್‍ನ ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಘಟಕದ ಅಧ್ಯಕ್ಷ ಜಾಕೀರ್‌ಹುಸೇನ್ ಹವಾಲ್ದಾರ, ತೀವ್ರ ಸಮಸ್ಯೆ ಇರುವಲ್ಲಿ ಪ್ರತಿದಿನ ಉಚಿತವಾಗಿ ಟ್ರ್ಯಾಕ್ಟರ್ ಮೂಲಕ ಎರಡು ಟ್ಯಾಂಕರ್ ನೀರು ಕೊಡುತ್ತಿದ್ದಾರೆ.

‘ನಮ್ಮ ಓಣ್ಯಾಗ ನೀರ ಬರಂಗಿಲ್ರಿ. ಹಿಂಗಾಗಿ ದಿನಾ ನೀರಿಗಾಗಿ ಸುತ್ತಾಡಬೇಕಾಗೇತ್ರೀ’ ಎಂದು ಐದನೇ ವಾರ್ಡ್‍ನ ನಿವಾಸಿಗಳು ಅಳಲು ತೋಡಿಕೊಂಡರು.

‘ಈಗಾಗಲೇ ನದಿಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದಾರೆ. ಅದು ಮೇವುಂಡಿ ಜಾಕ್‍ವೆಲ್‍ಗೆ ಬರಲು ಇನ್ನೂ ನಾಲ್ಕೈದು ದಿನ ಬೇಕಾಗುತ್ತದೆ. ಸದ್ಯ ಕೊಳವೆ ಬಾವಿಗಳಿಂದ ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ತೀವ್ರ ಸಮಸ್ಯೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT