ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಉಪನ್ಯಾಸಕರ ಕೊರತೆ: ಕುಸಿಯುತ್ತಿದೆ ಶೈಕ್ಷಣಿಕ ಗುಣಮಟ್ಟ

Published 28 ಮೇ 2024, 6:11 IST
Last Updated 28 ಮೇ 2024, 6:11 IST
ಅಕ್ಷರ ಗಾತ್ರ

ಶಿರಹಟ್ಟಿ: ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ತೀವ್ರವಾಗಿದ್ದು, ಇದರಿಂದಾಗಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಅತಿಥಿ ಉಪನ್ಯಾಸಕರ ಅವಲಂಬನೆ, ನೇಮಕವಾಗದ ಕಾಯಂ ಉಪನ್ಯಾಸಕರು, ಕಾಳಜಿ ತಗೆದುಕೊಳ್ಳದ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಮಧ್ಯೆ ಸರ್ಕಾರಿ ಪಿಯು ಕಾಲೇಜುಗಳು ನರಳುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟು 9 ಪಿಯು ಕಾಲೇಜುಗಳಿದ್ದು, ಅದರಲ್ಲಿ 6 ಸರ್ಕಾರಿ, 3 ಖಾಸಗಿ ಕಾಲೇಜುಗಳಿವೆ. ಕಾಯಂ ಉಪನ್ಯಾಸಕರಿಲ್ಲದೇ ಅತಿಥಿ ಉಪನ್ಯಾಸಕರ ಬರುವಿಕೆಗಾಗಿ ಕಾಲೇಜುಗಳು ಬಕ ಪಕ್ಷಿಯಂತೆ ಕಾಯುವುದು ಪ್ರತಿವರ್ಷವೂ ಸಾಮಾನ್ಯವಾಗಿದೆ. ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರನ್ನು ತಡವಾಗಿ ನೇಮಕ ಮಾಡುತ್ತಿರುವುದರಿಂದ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ತಾಲ್ಲೂಕಿನಲ್ಲಿರುವ ಒಟ್ಟು 6 ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಸ್ಥಳೀಯ ಫಕ್ಕಿರಪ್ಪ ಭರಮಪ್ಪ ಪೂಜಾರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 11 ಜನ ಸಿಬ್ಬಂದಿ ಬೇಕಾಗಿದ್ದು, ಅದರಲ್ಲಿ ಪ್ರಾಚಾರ್ಯರನ್ನೊಳಗೊಂಡು ಕೇವಲ 3 ಜನ ಕಾಯಂ ಸಿಬ್ಬಂದಿ ಇದ್ದಾರೆ. 8 ಖಾಲಿ ಹುದ್ದೆಗಳಿದ್ದು, 3 ಜನ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಕಳೆದ ವರ್ಷ ಇಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸೇರಿ 330 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು.

ಕಡಕೋಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರ ಇದ್ದು, 6 ಕಾಯಂ ಹುದ್ದೆಗಳಿವೆ. ಅದರಲ್ಲಿ 2 ಕಾಯಂ ಹಾಗೂ 4 ಜನ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇಲ್ಲಿ ಪ್ರಭಾರ ಪ್ರಾಚಾರ್ಯರು ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ 67 ಜನ ವಿದ್ಯಾರ್ಥಿಗಳು ಇದ್ದರು.

ತಾಲ್ಲೂಕಿನ ಬೆಳ್ಳಟ್ಟಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಇರಬೇಕಾದ 11 ಹುದ್ದೆಗಳಲ್ಲಿ ಕೇವಲ 5 ಜನ ಕಾಯಂ ಉಪನ್ಯಾಸಕ, ಸಿಬ್ಬಂದಿ ಇದ್ದಾರೆ. 3 ಜನ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುವ ಪ್ರಸ್ತುತ ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗ ಇದೆ. ಕಳೆದ‌ ವರ್ಷ 223 ಜನ ವಿದ್ಯಾರ್ಥಿಗಳು ಇದ್ದರು.

ತಾಲ್ಲೂಕಿನ ಹೊಳೆ-ಇಟಗಿ ಗ್ರಾಮದಲ್ಲಿನ ಕಲಾ ವಿಭಾಗದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಬೇಕಾಗಿರುವ 9 ಉಪನ್ಯಾಸಕರ ಪೈಕಿ 5 ಜನ ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಲಾಗಿದೆ. ಪ್ರಭಾರ ಪ್ರಾಚಾರ್ಯರನ್ನು ಹೊಂದಿದ ಪ್ರಸ್ತುತ ಕಾಲೇಜಿನಲ್ಲಿ ಕಳೆದ ವರ್ಷ 34 ಜನ ವಿದ್ಯಾರ್ಥಿಗಳು ಇದ್ದರು.

ತಾಲ್ಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗವಿದ್ದು, ಒಟ್ಟು 9 ಹುದ್ದೆಗಳಿವೆ. ಅದರಲ್ಲಿ ಪ್ರಾಚಾರ್ಯರನ್ನು ಹೊರತುಪಡಿಸಿ 6 ಜನ ಅತಿಥಿ ಉಪನ್ಯಾಸಕರು, 1 ದ್ವಿತೀಯ ದರ್ಜೆ ಸಹಾಯಕ ಹಾಗೂ 1 ಡಿ ದರ್ಜೆ ನೌಕರ ಇದ್ದಾರೆ. ಕಳೆದ ವರ್ಷ 49 ಜನ ವಿದ್ಯಾರ್ಥಿಗಳಿದ್ದರು. ಪ್ರಸ್ತುತ ವರ್ಷ ಇರುವ ಪ್ರಾಚಾರ್ಯರೂ ವರ್ಗಾವಣೆಗೊಳ್ಳಲಿದ್ದು, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವವರೆಗೆ ಕಾಲೇಜಿಗೆ ದೇವರೇಗತಿ ಎಂಬುದು ಗ್ರಾಮಸ್ಥರ ಅಳಲು.

ತಾಲ್ಲೂಕಿನ ಮಾಗಡಿ ಪದವಿಪೂರ್ವ ಕಾಲೇಜಿನಲ್ಲಿ ಬೇಕಾಗಿರುವ 9 ಹುದ್ದೆಗಳಲ್ಲಿ 7 ಜನ ಕಾಯಂ ಉಪನ್ಯಾಸಕರಿದ್ದಾರೆ. ಕೇವಲ ಒಬ್ಬರನ್ನು ಮಾತ್ರ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗಿದೆ.

ಶೌಚಾಲಯಗಳ ಕೊರತೆ: ತಾಲ್ಲೂಕಿನ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಾಗಡಿ ಹಾಗೂ ಬೆಳ್ಳಟ್ಟಿಯ ಸರ್ಕಾರಿ ಪಿಯು ಕಾಲೇಜಿಗೆ ಪಿಂಕ್‌ ಶೌಚಾಲಯ ನಿರ್ಮಾಣ ಮಾಡಲು 3 ವರ್ಷಗಳ ಹಿಂದೆಯೇ ಅನುದಾನ ಬಿಡುಗಡೆಯಾಗಿದೆ. ಆದರೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಶೌಚಾಲಯ ನಿರ್ಮಾಣವಾಗಿಲ್ಲ. ಇದರಿಂದ ವಿದ್ಯಾರ್ಥಿನಿಯರ ಗೋಳಂತೂ ಹೇಳತೀರದಾಗಿದೆ.

ಕಾಲೇಜು ಪಕ್ಕದಲ್ಲಿನ ಗೋಡೆ, ಇಲ್ಲವೇ ಗಿಡಗಂಟಿಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ದುಃಸ್ಥಿತಿ ಬಂದೊದಗಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಕಾಲೇಜಿಗೆ ನೀಡಲಾದ ಪಿಂಕ್‌ ಶೌಚಾಲಯವನ್ನು ಬೇಗನೆ ನಿರ್ಮಾಣ ಮಾಡಲು ಕ್ರಮ ವಹಿಸಬೇಕು. ಕೊಠಡಿಗಳ ಕಾಮಗಾರಿಯನ್ನು ಶೀಘ್ರ ಮುಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
ಮೇಗಲಮನಿ ಬೆಳ್ಳಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ
ಕಾಲೇಜಿಗೆ ಕಾಂಪೌಂಡ್ ನಿರ್ಮಾಣದ ಅಗತ್ಯವಿದೆ. ನೀರಿನ ಸಮಸ್ಯೆ ನಿವಾರಣೆಗೆ ಸ್ಥಳೀಯ ಪಂಚಾಯ್ತಿ ಕ್ರಮ ವಹಿಸುವುದು ಸೂಕ್ತ
ಬಸವರಾಜ ಗಿರಿತಮ್ಮಣ್ಣವರ ಪ್ರಾಚಾರ್ಯ ಫಕ್ಕಿರಪ್ಪ ಭರಮಪ್ಪ ಪೂಜಾರ ಸರ್ಕಾರಿ ಪಿಯು ಕಾಲೇಜು
ಮೂಲಸೌಕರ್ಯದ ಕೊರತೆ
ಬಹುತೇಕ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸುರಕ್ಷತೆ ಇಲ್ಲ. ಕಾಂಪೌಂಡ್ ನಿರ್ಮಾಣವಾಗದೆ ತರಗತಿ ಬಿಟ್ಟ ನಂತರ ಪಡ್ಡೆ ಹುಡುಗರ ಅಡ್ಡವಾಗಿ ಮಾರ್ಪಾಡಾಗುತ್ತಿವೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಬಿಸಾಡುತ್ತಿದ್ದಾರೆ. ಮರುದಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬಾಟಲಿಯ ಚೂರುಗಳನ್ನು ಆಯ್ದು ಹೊರಹಾಕುವ ದುಃಸ್ಥಿತಿ ಎದುರಾಗಿದೆ. ಶಿರಹಟ್ಟಿ ಪಟ್ಟಣದಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ನೀರಿನ ಅಭಾವ ತಲೆದೋರಿದೆ. ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದು ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಬೆಳ್ಳಟ್ಟಿಯ ಸರ್ಕಾರಿ ಪಿಯು ಕಾಲೇಜಿನ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಿದ್ದು ಅದು ಆಮೆಗತಿಯಲ್ಲಿ ಸಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT