ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮಾವಿಗೆ ಮಾರುಕಟ್ಟೆ ಸಮಸ್ಯೆ

ಆಪೂಸ್ ಹಣ್ಣು ಕೆ.ಜಿ.ಗೆ ₹80ರಿಂದ ₹150ರವರೆಗೆ ಮಾರಾಟ
Last Updated 12 ಮೇ 2021, 6:05 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮಾವಿನಹಣ್ಣು ಎಂದಾಕ್ಷಣ ಎಲ್ಲ ಬಾಯಲ್ಲೂ ನೀರೂರುವುದು ಸಹಜ. ಅದರ ಸುವಾಸನೆಗೆ ಮರುಳಾಗದವರು ವಿರಳ. ಅದಕ್ಕೇ ಮಾವಿನಹಣ್ಣಿಗೆ ಹಣ್ಣುಗಳ ರಾಜ ಎಂದು ಕರೆಯುತ್ತಾರೆ.

ಏಪ್ರಿಲ್‌ ಮೂರನೇ ವಾರದಿಂದ ಪಟ್ಟಣದ ಬಜಾರಕ್ಕೆ ಮಾವಿನಹಣ್ಣುಗಳು ಲಗ್ಗೆ ಇಟ್ಟಿವೆ. ಆದರೆ ಲಾಕ್‍ಡೌನ್‍ನಿಂದಾಗಿ ಮಾರಾಟ ಆಗುತ್ತಿಲ್ಲ. ಇದರಿಂದಾಗಿ ರೈತರು ಮತ್ತು ವ್ಯಾಪಾರಸ್ಥರಿಗೆ ನಷ್ಟ ಉಂಟಾಗುತ್ತಿದೆ.

ಆಪೂಸ್, ಕಲ್ಮಿ, ಜೀರಿಗಿ, ತೋತಾಪುರಿ, ಈಷಾಡಿ ಹೀಗೆ ಹತ್ತಾರು ಜಾತಿಯ ಮಾವಿನಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಆಪೂಸ್ ಹಣ್ಣು ತನ್ನ ರುಚಿ, ಬಣ್ಣ, ವಾಸನೆಯಿಂದಾಗಿ ಸದಾಕಾಲ ಬೇಡಿಕೆ ಉಳಿಸಿಕೊಂಡು ಬಂದಿದೆ. ಹೀಗಾಗಿ ಇದರ ಬೆಲೆ ಜಾಸ್ತಿ. ಸದ್ಯ ಆಪೂಸ್ ಹಣ್ಣು ಕೆ.ಜಿ.ಗೆ ₹80ರಿಂದ ಆರಂಭವಾಗಿ ₹150ರವರೆಗೆ ಮಾರಾಟ ಆಗುತ್ತಿದೆ. ಕಲ್ಮಿ ಹಣ್ಣುಗಳು ಇನ್ನೂ ಪೇಟೆಗೆ ಬಂದಿಲ್ಲ. ಆದರೆ ತೋತಾಪುರಿ ಮಾರಾಟ ಜೋರಾಗಿದೆ.

ತಾಲ್ಲೂಕಿನ ಹತ್ತಾರು ಹೆಕ್ಟೇರ್‌ನಲ್ಲಿ ರೈತರು ಮಾವಿನಹಣ್ಣು ಬೆಳೆಯುತ್ತಿದ್ದರೂ ಧಾರವಾಡ, ಹಾನಗಲ್‌, ಶಿರಸಿ, ಯಲ್ಲಾಪುರ, ಶಿಗ್ಗಾವ್‌, ಸವಣೂರು, ಕಲಘಟಗಿ, ಬೆಳಗಾವಿಗಳಿಂದ ಲಕ್ಷ್ಮೇಶ್ವರ ಮಾರುಕಟ್ಟೆಗೆ ಹಣ್ಣು ಬರುತ್ತದೆ. ಪಟ್ಟಣದಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಲ್ಪ ಸಮಯದಲ್ಲಿ ಗ್ರಾಹಕರು ಹಣ್ಣು ಖರೀದಿಸಲು ಆಗುವುದಿಲ್ಲ. ವಾರ್ಡ್‍ಗಳಲ್ಲಿ ತಳ್ಳುವ ಗಾಡಿಗಳಲ್ಲಿ ಹಣ್ಣು ಮಾರಾಟಕ್ಕೂ ಅನುಮತಿ ಇದೆ. ಆದರೆ ದೂರದ ಪ್ರದೇಶಗಳಿಗೆ ಗಾಡಿಗಳು ಹೋಗುವುದಿಲ್ಲ. ಹೀಗಾಗಿ ಗ್ರಾಹಕರ ಕೈಗೆ ಹಣ್ಣುಗಳು ನಿಲುಕುತ್ತಿಲ್ಲ.

‘ಮಾವಿನಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಕೂಡಿದ್ದು ನಿಯಮಿತವಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ’ ಎಂದು ವೈದ್ಯ ನಾಗರಾಜ ವಾಲಿ ಸಲಹೆ ನೀಡುತ್ತಾರೆ.

‘ಈ ವರ್ಷ ಮಾವಿನಹಣ್ಣು ತಡವಾಗಿ ಬಂದಿದೆ. ಇಷ್ಟೊತಿಗಾಗಲೇ ಎರಡ್ಮೂರು ಬಾರಿ ಸೀಕರಣೆ ಊಟ ಮಾಡುತ್ತಿದ್ದೇವು’ ಎಂದು ಶಿಕ್ಷಕ ಬಿ.ಎಸ್.ಹೆಬ್ಬಾಳ ಬಾಯಿ ಚಪ್ಪರಿಸಿದರು.

‘ಮಾವಿನಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಈ ವರ್ಷ ಲಾಕ್‌ಡೌನ್‌ದಿಂದಾಗಿ ಹಣ್ಣುಗಳನ್ನು ಖರೀದಿಸಲಾಗುತ್ತಿಲ್ಲ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ
ಪರಿಷತ್ತಿನ ಅಧ್ಯಕ್ಷೆ ಡಾ.ಜಯಶ್ರೀ ಹೊಸಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT