ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಹೆಚ್ಚಿಸಿದ ಮಳೆ: ಕೃಷಿ ಚಟುವಟಿಕೆ ಚುರುಕು

ಮುಂಗಾರು ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ
Last Updated 24 ಮೇ 2019, 19:45 IST
ಅಕ್ಷರ ಗಾತ್ರ

ಗದಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.45 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಬೇಕಾದ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನನ್ನೂ ಮಾಡಿಕೊಂಡಿದೆ.

ಹೆಸರು, ತೊಗರಿ, ಮೆಕ್ಕೆಜೋಳ, ಶೇಂಗಾ, ಬಿಟಿ ಹತ್ತಿ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳು. ಗುರುವಾರ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯು ರೈತರಲ್ಲಿ ಭರವಸೆ ಹೆಚ್ಚಿಸಿದೆ. ಕೆಲವೆಡೆ ಕೃಷಿಹೊಂಡಗಳಿಗೆ ಸಾಕಷ್ಟು ನೀರು ಹರಿದು ಬಂದಿದೆ. ಹೀಗಾಗಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಇಂತಹದೇ ಇನ್ನೊಂದೆರಡು ಮಳೆ ಲಭಿಸಿದರೆ ಕೃಷಿ ಹೊಂಡಗಳು ಬಹುತೇಕ ಭರ್ತಿಯಾಗಲಿವೆ ಎನ್ನುತ್ತಾರೆ ರೈತರು.

ಈಗಾಗಲೇ ಮಾರುಕಟ್ಟೆಯಲ್ಲಿ ಕೆಲವೆಡೆ ಹೆಸರು ಮತ್ತು ಹೈಬ್ರಿಡ್‌ ಜೋಳದ ಬಿತ್ತನೆ ಬೀಜದ ಮಾರಾಟ ಪ್ರಾರಂಭವಾಗಿದೆ. ಸಮೀಪದ ಸಹಕಾರಿ ಸಂಘ, ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಬೀಜ, ಗೊಬ್ಬರ ಖರೀದಿಗೆ ವಿಚಾರಿಸುತ್ತಿದ್ದಾರೆ. ಕಳೆದ ವರ್ಷವೂ ಮುಂಗಾರು ಪೂರ್ವದಲ್ಲೇ ಅಂದರೆ ಮೇ ಎರಡನೆಯ ವಾರದಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ರೈತರು ವಾಡಿಕೆಗಿಂತ ಮೊದಲೇ ಬಿತ್ತನೆ ಮಾಡಿದ್ದರು, ಈ ಬಾರಿಯೂ ಮೇ ಅಂತ್ಯದಲ್ಲಿ ಅಥವಾ ಜೂನ್‌ ಮೊದಲ ವಾರದಿಂದ ಬಿತ್ತನೆ ಆರಂಭವಾಗುವ ನಿರೀಕ್ಷೆ ಇದೆ.

ಕಳೆದೆರಡು ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಲಭಿಸಿರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದ ಪ್ರಮಾಣದ ಬಿತ್ತನೆ ಆಗಿರಲಿಲ್ಲ. ಈ ಬಾರಿ ಉತ್ತಮ ಮಳೆ ಲಭಿಸಿದರೆ ದ್ವಿದಳ ಧಾನ್ಯ ಬಿತ್ತನೆ ಪ್ರದೇಶದ ವಿಸ್ತೀರ್ಣ ಹೆಚ್ಚಾಗುವ ನಿರೀಕ್ಷೆ ಇದೆ.

‌ಒಟ್ಟು 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಗುರಿ ಇದ್ದು ಇದಕ್ಕೆ 800 ಕ್ವಿಂಟಲ್‌ ಬೀಜದ ಬೇಡಿಕೆ ಇದೆ. 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗುವ ನಿರೀಕ್ಷೆ ಇದ್ದು, ಇದಕ್ಕೆ 90 ಕ್ವಿಂಟಲ್‌ ಬೀಜದ ಬೇಡಿಕೆ ಇದೆ. 44 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಕಳೆದ ಬಾರಿ ಮುಂಗಾರಿನಲ್ಲಿ ಬಳ್ಳಿ ಶೇಂಗಾ ರೈತರ ಕೈ ಹಿಡಿದಿತ್ತು.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಾಗದಂತೆ ದಾಸ್ತಾನು ಮಾಡಿಕೊಂಡಿದ್ದೇವೆ. ಬೀಜ ನಿಗಮವು, ನೇರವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪೂರೈಕೆ ಮಾಡಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೂ ರೈತರಿಗೆ ಬಿತ್ತನೆ ಬೀಜ ಪೂರೈಕೆಯಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ ಬಾಲರೆಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳು (ಹೆಕ್ಟೇರ್‌ಗಳಲ್ಲಿ)
ಹೆಸರು; 1,00,000
ಗೋವಿನ ಜೋಳ; 45,000
ಶೇಂಗಾ; 44,000
ಬಿಟಿ ಹತ್ತಿ; 33,000
ಸೂರ್ಯಕಾಂತಿ; 6000
ಹೈಬ್ರಿಡ್‌ ಜೋಳ; 5,500
ತೊಗರಿ; 3000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT