ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ!

ಬೇಡಿಕೆಯಷ್ಟು ಪೂರೈಕೆಯಾಗದ ಲಸಿಕೆ, ಆಮೆಗತಿಯಲ್ಲಿ ಸಾಗುತ್ತಿರುವ ಲಸಿಕೆ ಪ್ರಕ್ರಿಯೆ
Last Updated 5 ಜುಲೈ 2021, 4:19 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಲಸಿಕೆ ಪ್ರಕ್ರಿಯೆಯು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಆದರೆ, ಪೂರೈಕೆಯಾಗುವ ಲಸಿಕೆ ಪ್ರಮಾಣ ಮಾತ್ರ ತುಂಬಾ ಕಡಿಮೆ ಇದೆ. ಆದ್ಯತಾ ವಲಯದವರ ಜತೆಗೆ ಕಾಲೇಜು ವಿದ್ಯಾರ್ಥಿಗಳಿಗೂ ಲಸಿಕೆ ನೀಡುವಂತೆ ಸರ್ಕಾರ ನಿರ್ದೇಶನ ನೀಡಿರುವುದರಿಂದ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಯಾಗಿದ್ದು, ಒಬ್ಬರಿಗೆ ಲಸಿಕೆ ಹಾಕಿದರೆ ಮತ್ತೊಂದು ವರ್ಗದ ಜನರಿಗೆ ಕೊರತೆ ಬೀಳುತ್ತಿದೆ.

ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸುವ ಮುನ್ನ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ಹಾಕಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಗದಗ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಪದವಿ ಕಾಲೇಜುಗಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 30 ಸಾವಿರ ಮಂದಿ ಇದ್ದಾರೆ. ಇವರೆಲ್ಲರಿಗೂ ಜುಲೈ 7ರ ಒಳಗೆ ಲಸಿಕೆ ಹಾಕಿ ಮುಗಿಸುವುದು ಜಿಲ್ಲಾಡಳಿತಕ್ಕೆ ಸವಾಲಿನ ಸಂಗತಿಯೇ ಆಗಿದೆ.

ಪ್ರತಿದಿನ ಲಭ್ಯವಾಗುವ ಲಸಿಕೆಯಲ್ಲೇ ಹಂಚಿಕೆ ಮಾಡಿ ವಿದ್ಯಾರ್ಥಿಗಳಿಗೂ ಲಸಿಕೆ ಹಾಕಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಈಗಾಗಲೇ ಕೆಲವು ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಲಸಿಕೆ ಕಾರ್ಯಕ್ರಮ ಪ್ರಾರಂಭಗೊಂಡಿವೆ. ಜತೆಗೆ ವಿದ್ಯಾರ್ಥಿಗಳು ಕೂಡ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಲಸಿಕಾ ಕೇಂದ್ರಗಳ ಬಳಿ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಬೇಗ ಬಂದವರಿಗೆ ಮಾತ್ರ ಲಸಿಕೆ ಎಂಬ ಸ್ಥಿತಿ ಜಿಲ್ಲೆಯಲ್ಲಿದ್ದು, ಪ್ರತಿದಿನ ಹಂಚಿಕೆಯಾಗಿರುವ ಲಸಿಕೆಗಿಂತಲೂ ಮೂರು, ನಾಲ್ಕು ಪಟ್ಟು ಜನರು ಕೇಂದ್ರಗಳ ಮುಂದೆ ಜಮಾಯಿಸಿರುತ್ತಾರೆ. ಒಂದೆರಡು ಗಂಟೆಗಳಲ್ಲಿ ಲಸಿಕೆ ಮುಗಿದ ತಕ್ಷಣ ‘ನೋ ಸ್ಟಾಕ್‌’ ಫಲಕ ತೂಗು ಬಿಡುವ ಸಿಬ್ಬಂದಿಯನ್ನು ಶಪಿಸುತ್ತಾ ಜನರು ಮನೆಗೆ ತೆರಳುವ ದೃಶ್ಯಗಳು ನಿತ್ಯವೂ ಕಾಣಸಿಗುತ್ತದೆ.

‘ಜಿಲ್ಲೆಗೆ ಪ್ರತಿದಿನ ಸರಾಸರಿ 5ರಿಂದ 10 ಸಾವಿರ ಲಸಿಕೆಗಳು ಬರುತ್ತಿವೆ. ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ 60 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಲಸಿಕೆಯನ್ನು ಎಲ್ಲ ಕೇಂದ್ರಗಳಿಗೂ ಸಮನಾಗಿ ಹಂಚಿಕೆ ಮಾಡುತ್ತೇವೆ. ಒಂದು ಕೇಂದ್ರಕ್ಕೆ 100 ಹಂಚಿಕೆ ಮಾಡಿದರೂ 60 ಕೇಂದ್ರಗಳಿಂದ 6 ಸಾವಿರ ಲಸಿಕೆಗಳು ಮುಗಿದು ಹೋಗುತ್ತವೆ. 100 ಲಸಿಕೆಗಳು ಪೂರೈಕೆಯಾದ ಕೇಂದ್ರಕ್ಕೆ ಒಂದೇ ದಿನ 300– 400 ಜನರು ಬಂದರೆ ಲಸಿಕೆ ಸಿಗುವುದಿಲ್ಲ. ಅದೂ ಅಲ್ಲದೇ ಈಗ ಮೊದಲಿನಂತೆ ಹೆಚ್ಚು ಲಸಿಕೆಗಳು ಜಿಲ್ಲೆಗೆ ಪೂರೈಕೆ ಆಗುತ್ತಿಲ್ಲ’ ಎಂದು ಡಿಎಚ್‌ಒ ಡಾ.ಸತೀಶ್‌ ಬಸರಿಗಿಡದ ತಿಳಿಸಿದರು.

‘ಗದಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಸೇರಿ ಒಟ್ಟು 30 ಸಾವಿರ ಮಂದಿ ಇದ್ದಾರೆ. ಅವರಲ್ಲಿ ಕೆಲವು ಶಿಕ್ಷಕರು, ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದಿರುವವರಿಗೆ ಇನ್ನು ಒಂದು ವಾರದಲ್ಲಿ ಲಸಿಕೆ ಹಾಕಿಸಲು ಕ್ರಮವಹಿಸಲಾಗುವುದು. ವಿದ್ಯಾರ್ಥಿಗಳು ತಾವಿರುವಸ್ಥಳದ ಸಮೀಪದಲ್ಲಿರುವ ಲಸಿಕಾ ಕೇಂದ್ರಕ್ಕೆ ಹೋಗಿ ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಬಹುದು. ಇದರ ಜತೆಗೆ ಶಿಕ್ಷಣ ಸಂಸ್ಥೆಗಳ ಜತೆಗೆ ಸಮನ್ವಯ ಸಾಧಿಸಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅಲ್ಲೇ ಹೋಗಿ ಲಸಿಕೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಲಸಿಕೆ ಕೊಡಿಸಲು ಕ್ರಮ

ಲಕ್ಷ್ಮೇಶ್ವರ: ಕೊರೊನಾ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಸರ್ಕಾರ ಕಾಲೇಜುಗಳನ್ನು ಆರಂಭಿಸಲು ಮುಂದಾಗಿದೆ. ಆದರೆ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ಹಾಕುವವರೆಗೆ ಕಾಲೇಜು ಆರಂಭಿಸುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಹೀಗಾಗಿ ತಾಲ್ಲೂಕಿನ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ತಯಾರಿ ನಡೆದಿದೆ.

ಇಲ್ಲಿನ ಪುರಸಭೆ ಪದವಿ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳು ಇದ್ದು ಎಲ್ಲರಿಗೂ ಲಸಿಕೆ ಹಾಕಿಸಲು ಪ್ರಾಚಾರ್ಯ ಉಗ್ರದ ಮುಂದಾಗಿದ್ದಾರೆ.

‘ಈಗಾಗಲೇ ಸಂಬಂಧಿಸಿದ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಲಸಿಕೆ ಕೊಡಿಸಲಾಗುವುದು. ಕಾಲೇಜಿನ ಕೆಲವು ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದರು.

ಕಾಲೇಜಿನಲ್ಲಿ ಲಸಿಕಾ ಅಭಿಯಾನ

ರೋಣ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಹೊಳೆಆಲೂರಿನಲ್ಲಿ ಮಾತ್ರ ಪದವಿ ಕಾಲೇಜು ಇದ್ದು ಅಲ್ಲಿಯೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಲಸಿಕಾ ಅಭಿಯಾನ ನಡೆದಿದೆ. ಹೊಳೆಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾಲೇಜಿಗೆ ಬಂದಾಗ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಲಸಿಕೆ ಪಡೆದಿರುತ್ತಾರೆ. ದೂರದ ಗ್ರಾಮಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಲಸಿಕೆ ಪಡೆಯಬೇಕಾಗಿದೆ.

ಲಸಿಕೆ ಆರಂಭ

ಗಜೇಂದ್ರಗಡ: ‘ನಮ್ಮಲ್ಲಿ ಲಸಿಕೆ ಕೊರತೆಯಿಲ್ಲ. ಈಗಾಗಲೇ ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ಲಸಿಕೆ ಪಡೆದಿದ್ದಾರೆ. ಜೂನ್‌ 30ರಿಂದ ಗಜೇಂದ್ರಗಡದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳು ಲಸಿಕೆ ಪಡೆಯುವುದರಿಂದ ಮುಂಬರುವ ದಿನಗಳಲ್ಲಿ ಕೋವಿಡ್‌ ತೀವ್ರತೆಯಿಂದ ತಪ್ಪಿಸಿ
ಕೊಳ್ಳಬಹುದು. ಹೀಗಾಗಿ, ಎಲ್ಲ ವಿದ್ಯಾರ್ಥಿಗಳು ಲಸಿಕಿ ಹಾಕಿಸಿಕೊಳ್ಳಬೇಕು’ ಎನ್ನುತ್ತಾರೆ ಗಜೇಂದ್ರಗಡದ ವೈದ್ಯ ರಮೇಶ
ದೀವಗಿಹಳ್ಳಿ.

ಲಸಿಕೆ ಹಾಕಿಸುವುದು ಸವಾಲು

ಮುಂಡರಗಿ: ಪಟ್ಟಣದಲ್ಲಿ ಎರಡು ಪದವಿ, ಎರಡು ಬಿ.ಎಡ್., ಒಂದು ಬಿಎಎಂಎಸ್ ಹಾಗೂ ಹಲವು ಪಿಯು ಕಾಲೇಜುಗಳು ಕಾರ್ಯ
ನಿರ್ವಹಿಸುತ್ತಿವೆ. ಸರ್ಕಾರದ ನಿರ್ದೇಶನದಂತೆ ಕಾಲೇಜುಗಳ ಮುಖ್ಯಸ್ಥರು ಆರೋಗ್ಯ ಇಲಾಖೆಯ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ.

ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಸ್ತುತ 1,001ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಅವರೆಲ್ಲರಿಗೂ ಲಸಿಕೆ ಹಾಕಿಸುವುದು ಕಾಲೇಜು ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಕೊಪ್ಪಳ, ಬಳ್ಳಾರಿ, ಗದಗ ಹಾಗೂ ಮತ್ತಿತರ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸುಲಭವಾಗಿ ಲಸಿಕೆ ನೀಡಬಹುದಾ
ಗಿದ್ದು, ಅನ್ಯ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಸಮಸ್ಯೆಯಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕಾಲೇಜು ಸಿಬ್ಬಂದಿ ಒಂದು ಪ್ರತ್ಯೇಕ ಮೊಬೈಲ್ ವ್ಯವಸ್ಥೆ ಮಾಡಿಕೊಂಡಿದ್ದು, ಮಕ್ಕಳು ಹಾಗೂ ಪಾಲಕರ ಮನವೊಲಿಸಿ ಲಸಿಕೆ ಹಾಕಿಸಲು ತಯಾರಿ ಮಾಡಿಕೊಂಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಾಲೇಜು ಸಿಬ್ಬಂದಿಯು ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿದ್ದಾರೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿ ಕುಳಿತುಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ. ಆದರೆ, ಇಂಗ್ಲಿಷ್ ಹಾಗೂ ಕನ್ನಡ ಭಾಷಾ ವಿಷಯಗಳ ತರಗತಿಗಳಿಗೆ ಹೆಚ್ಚು ವಿದ್ಯಾರ್ಥಿಗಳು ಇರುತ್ತಾರೆ. ಅಲ್ಲಿಯೂ ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುವುದು ಅಸಾಧ್ಯ. ಈ ಸಮಸ್ಯೆ ನಿವಾರಿಸಬೇಕಾದರೆ ಕೆಲವು ತರಗತಿಗಳನ್ನು ವಿಭಾಗಿಸಬೇಕಾಗುತ್ತದೆ. ಇದರಿಂದ ಉಪನ್ಯಾಸಕರಿಗೆ ಹೆಚ್ಚು ಕಾರ್ಯಭಾರ ಬೀಳುವ ಸಾಧ್ಯತೆ ಇದೆ. ಅದನ್ನು ಇಲಾಖೆಯು ಹೇಗೆ ನಿಭಾಯಿಸುತ್ತದೆಯೋ ಕಾದು ನೋಡಬೇಕಿದೆ.

ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ

ನರೇಗಲ್:‌ ಕೋವಿಡ್‌ ಎರಡನೇ ಅಲೆಯ ಹೊಡೆತದಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಇನ್ನು ಮೂರನೇ ಅಲೆಯ ಬಗ್ಗೆ ಆತಂಕವೂ ಮನೆಮಾಡಿದೆ.

ಆದರೆ ಸರ್ಕಾರ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಮೊದಲ ಲಸಿಕೆ ನೀಡಿದ ಬಳಿಕ ಭೌತಿಕ ತರಗತಿಗಳನ್ನು ಆರಂಭ ಮಾಡುತ್ತೇವೆ ಎಂದು ಹೇಳಿರುವುದು ಖುಷಿ ನೀಡಿದೆ. ಅದಕ್ಕಾಗಿ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ, ಅನ್ನದಾನೇಶ್ವರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕವಿದ್ದಲ್ಲಿ ಆರೋಗ್ಯ ಇಲಾಖೆಯ ವೈದ್ಯರನ್ನು ಭೇಟಿ ಮಾಡಿಸುವ ಮೂಲಕ ಪರಿಹರಿಸಲಾಗಿದೆ. ಅಭಿಯಾನವನ್ನು ಯಶಸ್ವಿಗೊಳಿಸಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಹುಲ್ಲೂರ ತಿಳಿಸಿದರು.

ಬಹುತೇಕ ವಿದ್ಯಾರ್ಥಿಗಳಿಗೆ ದೊರಕಿಲ್ಲ ಲಸಿಕೆ

ಮುಳಗುಂದ: ಇಲ್ಲಿನ ಆರ್.ಎನ್.ಡಿ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 480 ವಿದ್ಯಾರ್ಥಿ
ಗಳ ಪೈಕಿ 95 ವಿದ್ಯಾರ್ಥಿಗಳು ಮಾತ್ರ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ. ಲಸಿಕೆ ಲಭ್ಯವಿಲ್ಲದ ಕಾರಣ ಈ ಅಭಿಯಾನಕ್ಕೆಹಿನ್ನಡೆಯಾಗಿದೆ.

ಇಲ್ಲಿನ 24 ಉಪನ್ಯಾಸಕರು, ಸಿಬ್ಬಂದಿ ಪೈಕಿ 20 ಜನರು ಲಸಿಕೆ ಹಾಕಿಸಿಕೊಂಡಿದ್ದು ಇನ್ನೂ ನಾಲ್ವರು ಲಸಿಕೆಗಾಗಿ ಕಾಯುತ್ತಿದ್ದಾರೆ.‘18 ವರ್ಷ ಮೇಲ್ಪಟ್ಟವರ ಪಟ್ಟಿಯಲ್ಲಿ ಈಗಾಗಲೇ 95 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದು ಉಳಿದವರಿಗೆ ಲಸಿಕೆ ಹಾಕುವಂತೆ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ’ ಎಂದು ಪ್ರಾಚಾರ್ಯ ಎ.ಕೆ.ಜಮಾದಾರ ತಿಳಿಸಿದರು.

ಮುಳಗುಂದ ವ್ಯಾಪ್ತಿಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ ಆರಂಭಿಸಿಲ್ಲ. ಲಸಿಕೆ ಲಭ್ಯವಾದ ನಂತರ ಹಾಕಲಾಗುವುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೀತ್ ಖೋನಾ ತಿಳಿಸಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್‌, ಶೀಶೈಲ ಎಂ.ಕುಂಬಾರ, ಚಂದ್ರಶೇಖರ ಭಜಂತ್ರಿ.

ಲಸಿಕೆ ಹಾಕಿಸಿಕೊಂಡ ನಂತರವೇ ಕಾಲೇಜಿಗೆ ಹೋಗು ಎಂದು ತಂದೆ ತಾಯಿ ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಎದುರು ನೋಡುತ್ತಿರುವೆ.

ವಿನಾಯಕ, ವಿದ್ಯಾರ್ಥಿ ಲಕ್ಷ್ಮೇಶ್ವರ

ಕೋವಿಡ್‌ನಿಂದ ರಕ್ಷಣೆ ಪಡೆಯಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ತಪ್ಪು ಕಲ್ಪನೆಗಳನ್ನು ದೂರ ಮಾಡಲು ವಿವಿಯಿಂದ ಲಸಿಕೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ

ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ, ಕುಲಪತಿ, ಗ್ರಾಮೀಣಾಭಿವೃದ್ಧಿ ವಿವಿ

ಕೋವಿಡ್‌–19 ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಕಾಲೇಜಿನಲ್ಲಿ ಭೌತಿಕ ತರಗತಿಗಳು ಬೇಗ ಆರಂಭಿಸಿದರೆ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ

ಡಾ. ಜಗದೀಶ ಹುಲ್ಲೂರ, ಪ್ರಾಂಶುಪಾಲ

ಕೋವಿಡ್-19ನಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಗಮನಿಸಿ ಸರ್ಕಾರ ಲಸಿಕಾ ಅಭಿಯಾನ ಆಯೋಜಿಸುತ್ತಿರುವುದು ಸ್ವಾಗತಾರ್ಹ

ಪ್ರೊ.ಎಂ.ಬಿ. ಕೊಳವಿ, ಕೆಎಲ್‌ಇ ಮಹಾವಿದ್ಯಾಲಯದ ಪ್ರಾಂಶುಪಾಲ

ಗ್ರಾಮೀಣ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಣೆಯಾಗಲು ಕೋವಿಡ್ ಲಸಿಕೆ ಪೂರ್ಣಗೊಳಿಸಿ, ಕಾಲೇಜು ಆರಂಭಿಸುವುದು ಸೂಕ್ತ

ಡಾ. ಶಿವಯ್ಯ ಎ. ರೋಣದ, ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ವಿಭಾಗದ ಪ್ರಾಧ್ಯಾಪಕ, ರೋಣ

ತಜ್ಞರ ಅಭಿಪ್ರಾಯದಂತೆ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಕಾಲೇಜು ಆರಂಭಿಸುವ ಬದಲಿಗೆ ಲಸಿಕೆ ಪೂರ್ಣಗೊಳಿಸಬೇಕು

ಡಾ. ಎಚ್. ಎಲ್. ಗಿರಡ್ಡಿ, ವೈದ್ಯಾಧಿಕಾರಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT