ಮುಂಡರಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹರಿದಿರುವ ತುಂಗಭದ್ರಾ ನದಿ, ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಬೃಹತ್ ಏತ ನೀರಾವರಿ ಯೋಜನೆ, ತಾಲ್ಲೂಕಿನ ವಿವಿಧೆಡೆಗಳಲ್ಲಿರುವ ಹಲವಾರು ಕೆರೆಗಳು ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಜಲಮೂಲಗಳಿವೆ. ಹೀಗಿದ್ದರೂ ತಾಲ್ಲೂಕಿನ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯದಿರುವುದು ಬೇಸರದ ಸಂಗತಿ ಎಂದು ತಾಲ್ಲೂಕಿನ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಎಲ್ಲ ರೈತರ ಬವಣೆ ನೀಗಲಿ ಎನ್ನುವ ಆಶಯ ಮತ್ತು ಕನಸಿನೊಂದಿಗೆ ಮೂರು ದಶಕಗಳ ಹಿಂದೆ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರ ಏತ ನೀರಾವರಿ ಯೊಜನೆ ಆರಂಭಿಸಲಾಯಿತು. ಜತೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿಶಾಲವಾದ ಹಲವಾರು ಕೆರೆಗಳನ್ನು ನಿರ್ಮಿಸಲಾಯಿತು. ಹೀಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ರೈತರ ಜಮೀನುಗಳಿಗೆ ನೀರು ಹರಿಯದಾಗಿದೆ. ತಾಲ್ಲೂಕಿನಲ್ಲಿ ಸಾಕಷ್ಟು ಜಲ ಸಂಪನ್ಮೂಲವಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜನತೆಗೆ ಸಾಧ್ಯವಾಗದಂತಾಗಿದೆ.
ತಾಲ್ಲೂಕಿನ ಡಂಬಳ, ತಾಂಬ್ರಗುಂಡಿ, ಬಸಾಪುರ, ಮುಂಡವಾಡ, ಮುರುಡಿ, ಚಿಕ್ಕವಡ್ಡಟ್ಟಿ, ವೆಂಕಟಾಪುರ, ಕೆಲೂರ, ಜಂತ್ಲಿ-ಶಿರೂರ ಮೊದಲಾದ ಗ್ರಾಮಗಳಲ್ಲಿ ಹಲವಾರು ಕೆರೆಗಳಿವೆ. ಅವುಗಳಲ್ಲಿ ಕೆಲವು ನೀರಾವರಿ ಉದ್ದೇಶಕ್ಕೆ ನಿರ್ಮಿಸಲಾದ ಕೆರೆಗಳಾಗಿದ್ದು, ಇನ್ನು ಕೆಲವು ಕೆರೆಗಳನ್ನು ಗ್ರಾಮಸ್ಥರು ಹಾಗೂ ಗ್ರಾಮದ ಜಾನುವಾರುಗಳ ದೈನಂದಿನ ಬಳಕೆಗೆ ನೀರೊದಗಿಸಲು ನಿರ್ಮಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ನೀರಾವರಿಗೆ, ಜನಕ್ಕೆ ಹಾಗೂ ಜಾನುವಾರುಗಳ ಬಳಕೆಗೆ ಪ್ರತ್ಯೇಕ ಕೆರೆಗಳನ್ನು ನಿರ್ಮಿಸಲಾಗಿದೆ.
ಡಂಬಳ ಗ್ರಾಮದಲ್ಲಿರುವ ವಿಕ್ಟೋರಿಯಾ ರಾಣಿ ಕೆರೆಯು ತಾಲ್ಲೂಕಿನಲ್ಲಿಯೇ ಬಹುದೊಡ್ಡ ಕೆರೆಯಾಗಿದ್ದು, ಅದರ ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. 2,075 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗಿದ್ದು, ಈ ಕೆರೆಯಿಂದ ಡಂಬಳ ಸೇರಿದಂತೆ ಡಂಬಳದ ಸುತ್ತಮುತ್ತಲಿನ ಸುಮಾರು ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸಬಹುದಾಗಿದೆ.
ಆದರೆ, ರೈತರ ಜಮೀನುಗಳಿಗೆ ನೀರೊದಗಿಸುವ ಕಿರು ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ರೈತರ ಜಮೀನುಗಳಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿಯುತ್ತಿಲ್ಲ. ಪ್ರತಿ ವರ್ಷ ಹಮ್ಮಿಗಿ ಗ್ರಾಮದ ಶಿಂಗಟಾಲೂರ ಏತ ನೀರಾವರಿ ಯೊಜನೆಯಿಂದ ಡಂಬಳ ಕೆರೆಯನ್ನು ತುಂಬಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ನೀರು ತುಂಬಿಸುವ ಕಾರ್ಯ ಕೈಗೊಳ್ಳದೆ ಇರುವುದರಿಂದ ಕೆರೆಯು ಭರ್ತಿಯಾಗದಂತಾಗಿದೆ. ಕೆರೆಗೆ ನೀರು ತುಂಬಿಸುವ ಕಾಲುವೆಗಳು ಹಾಳಾಗಿರುವುದರಿಂದ ಕೆರೆಯ ಒಡಲನ್ನು ಸೇರಬೇಕಾದ ಸಾಕಷ್ಟು ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತದೆ. ಕೆರೆಗೆ ನೀರು ತುಂಬಿಸಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ರೈತರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು ಅಧಿಕಾರಿಗಳು ಸುಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಈಚೆಗೆ ಡಂಬಳ ಕೆರೆಗೆ ಭೇಟಿ ನೀಡಿದ್ದ ಶಾಸಕ ಜಿ.ಎಸ್.ಪಾಟೀಲ ಅವರು ಕೆರೆಗೆ ನೀರು ತುಂಬಿಸಿ ಕಾಲುವೆಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ತಾಲ್ಲೂಕಿನ ತಾಂಬ್ರಗುಂಡಿ ಗ್ರಾಮದಲ್ಲಿ ಎರಡು ಪ್ರತ್ಯೇಕ ಕೆರೆಗಳಿದ್ದು, ಒಂದು ನೀರಾವರಿಗೆ ಹಾಗೂ ಮತ್ತೊಂದು ಜನರ ಬಳಕೆಗೆ ನಿರ್ಮಿಸಲಾಗಿದೆ. ಸುಮಾರು 700 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಾಮರ್ಥ್ಯ ಹೊಂದಿರುವ ತಾಂಬ್ರಗುಂಡಿ ನೀರಾವರಿ ಕೆರೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಕೆರೆಯ ನೀರನ್ನು ನಂಬಿರುವ ರೈತರು ಪ್ರತಿ ವರ್ಷ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಜಮೀನುಗಳಿಗೆ ನೀರು ಒದಗಿಸುವ ಕಾಲುವೆಗಳನ್ನು ದುರಸ್ತಿಗೊಳಿಸದೇ ಇರುವುದರಿಂದ ರೈತರ ಜಮೀನುಗಳಿಗೆ ಸಾಕಷ್ಟು ನೀರು ಹರಿಯದಾಗಿದೆ. ನೀರಾವರಿ ಜತೆಗೆ ಜನ ಹಾಗೂ ಜಾನುವಾರು ಬಳಕೆಗೆ ಗ್ರಾಮದ ಹೊರವಲಯದಲ್ಲಿ ಮತ್ತೊಂದು ಪ್ರತ್ಯೇಕ ಕೆರೆ ನಿರ್ಮಿಸಲಾಗಿದೆ.
ತಾಲ್ಲೂಕಿನ ಮುಂಡವಾಡ ಗ್ರಾಮದಲ್ಲಿರುವ ಕೆರೆ ವಿಶಾಲವಾಗಿದ್ದು, ಪ್ರತಿ ವರ್ಷ ಹತ್ತಿರದ ಶಿಂಗಟಾಲೂರ ಏತ ನೀರಾವರಿಯ ಬೃಹತ್ ಕಾಲುವೆಯ ಮೂಲಕ ಕೆರೆ ತುಂಬಿಸಲಾಗುತ್ತದೆ. ಆದರೆ ಬ್ಯಾರೇಜಿನಿಂದ ಕೆರೆಗೆ ನೀರು ಹರಿಸುವ ಕಾಲುವೆಯ ಮಧ್ಯದಲ್ಲಿ ಅಕ್ಕಪಕ್ಕದ ನೂರಾರು ರೈತರು ಮಧ್ಯದಲ್ಲಿಯೇ ನೀರನ್ನು ತಮ್ಮ ಜಮೀನುಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆರೆಗೆ ಹರಿಸುವ ನೀರು ಮಧ್ಯದಲ್ಲಿಯೇ ಬಳಕೆಯಾಗುತ್ತಿದೆ. ಕೆರೆಗೆ ಸಾಕಷ್ಟು ನೀರು ತಲುಪುತ್ತಿಲ್ಲ. ಹೀಗಾಗಿ ಮುಂಡವಾಡ ಕೆರೆ ತುಂಬಿಸುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ತಾಲ್ಲೂಕಿನ ಚಿಕ್ಕವಡ್ಡಟ್ಟಿ, ಕೆಲೂರ, ಮುರುಡಿ ಮೊದಲಾದ ಗ್ರಾಮಗಳಲ್ಲಿ ವಿಶಾಲವಾದ ಕೆರೆಗಳಿವೆ. ಕೆರೆ ಹಾಗೂ ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಅವು ಗ್ರಾಮಸ್ಥರಿಗೆ ಇದ್ದೂ ಇಲ್ಲದಂತಾಗಿವೆ. ಜನ ಹಾಗೂ ಜಾನುವಾರುಗಳ ಬಳಕೆಗೆ ಮೀಸಲಿರುವ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದು, ಅದು ಇನ್ನು ಕೆಲವು ದಿನಗಳಲ್ಲಿ ಬತ್ತಿಹೋಗಲಿವೆ.
ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆರೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಆದರೆ ಅದು ಕೆರೆಯ ಪೂರ್ಣ ಅಭಿವೃದ್ಧಿಗೆ ನೆರವಾಗದಂತಾಗಿದೆ. ಗ್ರಾಮ ಪಂಚಾಯಿತಿಯವರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆ ದುರಸ್ತಿಯ ಪೂರಕ ಕೆಲಸಗಳನ್ನು ನಿರ್ವಹಿಸಲು ಮಾತ್ರ ಸಾಧ್ಯವಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಈಚೆಗೆ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಕೆರೆಗೆ ಮೆಸ್ ಅಳವಡಿಸಲಾಗಿದೆ. ಮುಂಡವಾಡ ಕೆರೆಯ ಹೂಳೆತ್ತಲಾಗಿದೆ.
ಜ್ಯಾಲವಾಡಿಗೆ ಏತ ನೀರಾವರಿ ಯೋಜನೆ ನನೆಗುದಿಗೆ: ತಾಲ್ಲೂಕಿನ ಜ್ಯಾಲವಾಡಿಗೆ ಏತ ನೀರಾವರಿ ಯೋಜನೆಯು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸರ್ಕಾರ ಇದಕ್ಕಾಗಿ ₹197 ಕೋಟಿ ಮೀಸಲಿರಿಸಿದ್ದು, ಅದರ ಅನುಷ್ಠಾನ ವಿಳಂಬವಾಗುತ್ತಲೇ ಇದೆ.
ಜ್ಯಾಲವಾಡಿಗೆ ಏತ ನೀರಾವರಿಯು ಸಮರ್ಪಕವಾಗಿ ಅನುಷ್ಠಾನಗೊಂಡರೆ ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕುಗಳ ಒಟ್ಟು 31 ಕೆರೆಗಳಿಗೆ ಸಾಕಷ್ಟು ಪ್ರಮಾಣದ ನೀರು ಹರಿಯಲಿದೆ. ಇದರಿಂದ ಆಯಾ ಭಾಗಗಳ ರೈತರ ಬದುಕು ಹಸನಾಗಲಿದೆ.
ಮುಂಡರಗಿ ಪಟ್ಟಣಕ್ಕೆ ಹಿರೇಹಳ್ಳವನ್ನು ಹೊರತುಪಡಿಸಿ ಬೇರಾವುದೇ ಜಲಮೂಲವಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಿರೇಹಳ್ಳದಲ್ಲಿಯೂ ನೀರು ಹರಿಯದಾಗಿದೆ. ಇದನ್ನು ಮನಗಂಡು ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಮುಂಡರಗಿ ಪಟ್ಟಣದ ಘಟ್ಟಿರಡ್ಡಿಹಾಳ ರಸ್ತೆಯ ಬಳಿ ನಾರಾಯಣಪ್ಪ ಇಲ್ಲೂರು ಕುಟುಂಬಕ್ಕೆ ಸೇರಿದ ಸುಮಾರು 40 ಎಕರೆ ಜಮೀನು ಖರಿದೀಸಿ ಅಲ್ಲಿ ಕೆರೆ ನಿರ್ಮಿಸುವ ಯೋಜನೆ ರೂಪಿಸಿದ್ದರು. ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬಾರದಂತಾಯಿತು. ಅದು ಕಾರ್ಯರೂಪಕ್ಕೆ ಬಂದಿದ್ದರೆ ಮುಂಡರಗಿ ಪಟ್ಟಣದ ಜನ ಹಾಗೂ ಜಾನುವಾರುಗಳಿಗೆ ತುಂಬಾ ಅನುಕೂಲವಾಗುತ್ತಿತ್ತು. ಜತೆಗೆ ಪಟ್ಟಣದ ಸುತ್ತಮುತ್ತಲಿನ ಕೊಳವೆಬಾವಿಗಳು ಪ್ರತಿ ವರ್ಷ ಮರುಪೂರಣಗೊಳ್ಳಲು ಅನುಕೂಲವಾಗುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ನೀರಾವರಿ ಯೋಜನೆಗಳನ್ನು ಸರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಧಿಕಾರಿಗಳು ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು
-ಶಿವಾನಂದ ಇಟಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ
ಚಿಕ್ಕವಡ್ಡಟ್ಟಿ ಕೆರೆ ಸೇರಿದಂತೆ ತಾಲ್ಲೂಕಿನ ಕೆರೆಗಳನ್ನು ತುಂಬಿಸದೆ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಸದ್ಯಲ್ಲಿಯೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು
-ರಾಮನಗೌಡ ಹಳೆಮನಿ ಚಿಕ್ಕವಡ್ಡಟ್ಟಿ ಯುವ ಮುಖಂಡ
ಕೆಲೂರ ಕೆರೆಯನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ಕೆಲೂರ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಕುರಿತು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು
- ಜ್ಯೋತಿ ಮೇವುಂಡಿ ಕೆಲೂರ ಗ್ರಾಮದ ರೈತ ಮಹಿಳೆ
ಹಿಂದಿನ ಸರ್ಕಾರ ಜ್ಯಾಲವಾಡಿಗೆ ಏತ ನೀರಾವರಿ ಯೋಜನೆಗೆ ₹197 ಕೋಟಿ ಮೀಸಲಿಟ್ಟು ಅದಕ್ಕೆ ಚಾಲನೆ ನೀಡಿತ್ತು. ಆದರೆ ಅದು ಈಗ ಸರ್ಕಾರದ ಹಂತದಲ್ಲಿಯೇ ನನೆಗುದಿಗೆ ಬಿದ್ದಿದೆ
-ಡಾ.ಚಂದ್ರು ಲಮಾಣಿ ಶಾಸಕ
ಜಮೀನು ಸ್ವಾಧೀನ: ಪರಿಹಾರಕ್ಕೆ ಅಲೆದಾಟ
ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ತಾಲ್ಲೂಕಿನ ತಾಂಬ್ರಗುಂಡಿ ಗ್ರಾಮದ ನೀರಾವರಿ ಕೆರೆಯ ಒಡ್ಡು ಒಡೆದು ಕೆರೆಯ ಅಕ್ಕಪಕ್ಕದ ರೈತರ ಜಮೀನು ಪ್ರತಿವರ್ಷ ಹಾಳಾಗುತ್ತಲಿತ್ತು. ಹಾಳಾದ ಜಮೀನಿಗೆ ಹಾಗೂ ಜಮೀನಿನಲ್ಲಿದ್ದ ಪೈರಿಗೆ ಪರಿಹಾರ ಪಡೆದುಕೊಳ್ಳಲು ರೈತರು 2007ರಿಂದ ಪ್ರತಿವರ್ಷ ಹೋರಾಟ ಮಾಡುತ್ತಲಿದ್ದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಒಂದು ಗುಂಟೆಗೆ ₹1 ಸಾವಿರ ದರ ನಿಗದಿಗೊಳಿಸಿ 2018ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿತ್ತು. ಜಮೀನಿನ ದರವನ್ನು ಹೆಚ್ಚಿಸಬೇಕು ಎಂದು ರೈತರು ಪುನಃ ಹೋರಾಟಕ್ಕಿಳಿದರು. ಸರ್ಕಾರ ಒಂದು ಗುಂಟೆಗೆ ₹1 ಸಾವಿರ ಬದಲಾಗಿ ₹6 ಸಾವಿರ ನಿಗದಿಗೊಳಿಸಿತು. ಅದರಂತೆ ಸರ್ಕಾರ ರೈತರಿಗೆ ಅರ್ಧ ಭಾಗ ಪರಿಹಾರ ನೀಡಿ ಇನ್ನುಳಿದ ಪರಿಹಾರ ನೀಡಲು ಸತಾಯಿಸುತ್ತಲಿದೆ. ಸರ್ಕಾರದ ನಡೆಯನ್ನು ಖಂಡಿಸಿ ಆಗಸ್ಟ್ 27ರಂದು ರೈತರು ಕೆರೆ ದಂಡೆಯ ಮೇಲೆ ಹೋರಾಟ ಹಮ್ಮಿಕೊಳ್ಳಲು ಮುಂದಾಗಿದ್ದರು. ಪೊಲೀಸರು ಮಧ್ಯಪ್ರವೇಶಸಿ ರೈತರೊಂದಿಗೆ ಚರ್ಚಿಸಿ ಹೋರಾಟವನ್ನು ನಿಲ್ಲಿಸಿದ್ದಾರೆ.
ಕೆರೆಗೆ ಕೋಡಿ: ಸಂಚಾರಕ್ಕೆ ವ್ಯತ್ಯಯ
ತಾಲ್ಲೂಕಿನ ಬಸಾಪೂರ ಗ್ರಾಮದ ಕೆರೆ ಸಾಮಾನ್ಯವಾಗಿ ಪ್ರತಿವರ್ಷ ಕೋಡಿ ಬೀಳುತ್ತದೆ. ಕೋಡಿಬಿದ್ದ ಕೆರೆಯ ನೀರು ಪಕ್ಕದಲ್ಲಿರುವ ಮುಖ್ಯರಸ್ತೆಯ ಮೇಲೆ ಹರಿಯುತ್ತಲಿದೆ. ಇದರಿಂದ ವಾಹನ ಚಾಲಕರು ಹಾಗೂ ಪಾದಚಾರಿಗಳು ನಿತ್ಯ ಪರದಾಡುವಂತಾಗಿದೆ. ರಸ್ತೆಗೆ ಅಡ್ಡಲಾಗಿ ಕಿರು ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಹಲವಾರು ಬಾರಿ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೂ ಕಿರು ಸೇತುವೆ ನಿರ್ಮಾಣವಾಗದಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ.
ಅಧಿಕಾರಿಗಳ ಬಳಿ ಮಾಹಿತಿ ಕೊರತೆ!
ತಾಲ್ಲೂಕಿನ ಬೃಹತ್ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಹಲವಾರು ಹಿರಿಯ ಕಿರಿಯ ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಲಿದ್ದಾರೆ. ಆದರೆ ತಾಲ್ಲೂಕಿನಲ್ಲಿ ಒಟ್ಟು ಎಷ್ಟು ಕೆರೆಗಳಿವೆ? ಪ್ರತಿಯೊಂದು ಕೆರೆಯ ವಿಸ್ತೀರ್ಣವೆಷ್ಟು? ಕೆರೆಯ ನೀರು ಸಂಗ್ರಹ ಸಾಮರ್ಥ್ಯವೆಷ್ಟು? ಕೆರೆಯ ನೀರು ಎಷ್ಟು ಎಕರೆ ಜಮೀನಿಗೆ ಹರಿಯಬಹುದು? ಕೆರೆ ಹಾಗೂ ಕಾಲುವೆ ನಿರ್ವಹಣೆ ಹಾಗೂ ದುರಸ್ತಿಗೆ ಮಂಜೂರಾದ ಹಾಗೂ ಖರ್ಚಾದ ಅನುದಾನವೆಷ್ಟು? ಯಾವ ಯಾವ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗಿದೆ? ಎಷ್ಟು ಕೆರೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಎಷ್ಟು ಕೆರೆಗಳಿಗೆ ಇನ್ನೂ ನೀರು ಹರಿಸಬೇಕಾಗಿದೆ? ಇಂತಹ ಪ್ರಾಥಮಿಕ ಮಾಹಿತಿ ಕೂಡ ಅವರ ಬಳಿ ಇಲ್ಲ. ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಅಧಿಕಾರಿಗಳು ತಡಬಡಿಸುತ್ತಾರೆ. ಕೆರೆಗಳ ಸಮಗ್ರ ಮಾಹಿತಿ ಪಡೆದುಕೊಳ್ಳಲು ‘ಪ್ರಜಾವಾಣಿ’ ಪ್ರತಿನಿಧಿಯು ಮೂರ್ನಾಲ್ಕು ದಿನಗಳಿಂದ ಆರೇಳು ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ಯಾವ ಅಧಿಕಾರಿಯೂ ಈ ಕುರಿತು ಸಮರ್ಪಕ ಮಾಹಿತಿ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.