ಸೋಮವಾರ, ಸೆಪ್ಟೆಂಬರ್ 27, 2021
28 °C
ಗದಗ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿರುವ ಡೆಂಗಿ, ಚಿಕುನ್‌ ಗೂನ್ಯ, ವೈದ್ಯರಿಂದ ಸ್ವಚ್ಛತೆಯ ಪಾಠ

ನಮ್ಮ ಜನ ನಮ್ಮ ಧ್ವನಿ: ಸಾಂಕ್ರಾಮಿಕ ರೋಗ ನಿರ್ವಹಣೆಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖಗೊಂಡ ನಂತರ ಜನರನ್ನು ಡೆಂಗಿ, ಚಿಕುನ್‌ಗುನ್ಯದಂತಹ ಸಾಂಕ್ರಾಮಿಕ ರೋಗಗಳು ಬಾಧಿಸುತ್ತಿವೆ. ರೋಗ ನಿಯಂತ್ರಿಸಿ ಜನರು ಉತ್ತಮ ಆರೋಗ್ಯ ಹೊಂದಲು ನೆರವಾಗುವಂತೆ ಜಿಲ್ಲಾ ಆರೋಗ್ಯ ಇಲಾಖೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಸೌಲಭ್ಯಗಳು ಜಿಲ್ಲೆಯ ಎಲ್ಲ ಗ್ರಾಮಗಳಿಗೂ ವಿಸ್ತರಣೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

‘ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದಲ್ಲಿ ಈ ವರ್ಷ ಗದಗ ಜಿಲ್ಲೆಯಲ್ಲಿ ಡೆಂಗಿ, ಚಿಕುನ್‌ಗುನ್ಯ ಪ್ರಕರಣಗಳ ಸಂಖ್ಯೆ ತೀವ್ರ ಇಳಿಮುಖವಾಗಿವೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 95 ಡೆಂಗಿ ಹಾಗೂ 39 ಚಿಕುನ್‌ಗುನ್ಯ ಪ್ರಕರಣಗಳು ಮಾತ್ರ ದಾಖಲಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು ಈಗ ಗುಣಮುಖರಾಗಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ಬಸರಿಗಿಡದ.

ಜಿಲ್ಲಾ ಆರೋಗ್ಯ ಇಲಾಖೆಯು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಸುತ್ತಮುತ್ತಲಿನ ಆವರಣವನ್ನು ಶುಚಿಯಾಗಿಟ್ಟುಕೊಳ್ಳುವಂತೆ ತಿಳಿವಳಿಕೆ ಮೂಡಿಸುತ್ತಿದೆ.

‘ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಪ್ರತಿ ಗ್ರಾಮದಲ್ಲೂ ಒಳಾಂಗಣ ಮತ್ತು ಹೊರಾಂಗಣ ಲಾರ್ವಾ ಸಮೀಕ್ಷೆ ಮಾಡಿಸಲಾಗುತ್ತಿದೆ. ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸಿಟ್ಟುಕೊಳ್ಳದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ. ಕೆರೆ, ಕಟ್ಟೆ, ಬಾವಿ, ಹಳ್ಳಗಳಿಗೆ ಲಾರ್ವಾ ಭಕ್ಷಕ ಮೀನು ಬಿಡುವುದರ ಮೂಲಕ ರೋಗ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಸ್‌.ಎಸ್.ನೀಲಗುಂದ ತಿಳಿಸಿದ್ದಾರೆ.

ಈ ಬಾರಿ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ, ಚಿಕುನ್‌ಗುನ್ಯ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಆದ್ದರಿಂದ, ಗ್ರಾಮೀಣ ಪ್ರದೇಶಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗಿದ್ದು, ಸೊಳ್ಳೆ ಉತ್ಪತ್ತಿಗೆ ಜಾಗ ಮಾಡಿಕೊಡದಂತೆ ಜಾಗೃತಿ ಮೂಡಿಸುತ್ತಿದ್ದೇವೆ. ರೋಗಲಕ್ಷಣ ಆಧರಿಸಿ ರೋಗಿಗಳನ್ನು ಉಪಚರಿಸಲಾಗುತ್ತದೆ. ಫಾಗಿಂಗ್‌ ಮಾಡಿಸುವುದರಿಂದ ಲಾರ್ವಾ ನಾಶ ಆಗುವುದಿಲ್ಲ. ವಯಸ್ಕ ಸೊಳ್ಳೆಗಳನ್ನು ಮಾತ್ರ ನಿಯಂತ್ರಿಸಬಹುದು. ಹಾಗಾಗಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಾರ್ವಾ ಉತ್ಪತ್ತಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಳ್ಳಿಗಳಲ್ಲಿ ಜ್ವರದ ಬಾಧೆ

ನರಗುಂದ: ಒಂದೂವರೆ ವರ್ಷಗಳ ಕಾಲ ಕಾಡಿದ ಕೊರೊನಾ ಈಗಷ್ಟೇ ತಗ್ಗಿದ್ದರೂ ಮತ್ತೇ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ನರಗುಂದ ತಾಲ್ಲೂಕಿನಲ್ಲಿ ಪಟ್ಟಣಕ್ಕಿಂತ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.

ಹಳ್ಳಿಗಳಲ್ಲಿ ಜನರನ್ನು ವಿವಿಧ ರೀತಿಯ ಜ್ವರದ ಬಾಧೆ ಕಾಡುತ್ತಿದೆ‌. ಇದು ಮಳೆಯ ಋತು ಆಗಿರುವುದರಿಂದ ತಗ್ಗು ಪ್ರದೇಶಳಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಿದೆ. ಇದು ವಿವಿಧ ಕಾಯಿಲೆಗಳು ಹರಡಲು ಕಾರಣವಾಗಿದೆ. ಪಂಚಾಯ್ತಿ, ಪುರಸಭೆ, ಆರೋಗ್ಯ ಇಲಾಖೆ ಸ್ವಚ್ಛತೆ ನಿರ್ವಹಿಸುವಲ್ಲಿ ಅಷ್ಟಾಗಿ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

‘ಆರೋಗ್ಯ ಇಲಾಖೆ ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಎಲ್ಲ ಕ್ರಮವಹಿಸಿದೆ. ಪಂಚಾಯ್ತಿ, ಪುರಸಭೆಗೆ ಸಹಕಾರ ನೀಡುತ್ತಿದೆ. ಜನವರಿಯಿಂದ ಈವರೆಗೆ ಡೆಂಗಿ 3, ಚಿಕುನ್‌ಗುನ್ಯ 7 ಪ್ರಕರಣಗಳು ಕಂಡು ಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ’ ಎಂದು ನರಗುಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗಗಳು ಇಲ್ಲ

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಟೈಫಾಯ್ಡ್‌ ಪ್ರಕರಣಗಳನ್ನು ಹೊರತುಪಡಿಸಿದರೆ ಇನ್ನಿತರ ಸಾಂಕ್ರಾಮಿಕ ರೋಗಗಳು ವರದಿ ಆಗಿಲ್ಲ. ಆದರೆ, ಪಟ್ಟಣದ ಜನ್ನತ್ ನಗರ ಮತ್ತು ಶಿಗ್ಲಿಯಲ್ಲಿ ಐದು ಸಂಶಯಾಸ್ಪದ ಡೆಂಗಿ ಪ್ರಕರಣಗಳು ಕಂಡು ಬಂದಿದ್ದವು. ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಎಲ್ಲವೂ ನೆಗೆಟಿವ್ ವರದಿ ಬಂದಿವೆ ಎಂದು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್. ಹಿರೇಮಠ ತಿಳಿಸಿದ್ದಾರೆ.

ಇನ್ನು ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಹೆಚ್ಚಾಗುತ್ತಿದೆ. ಈ ಕುರಿತು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಆದರೆ ಸಮೀಪದ ಬಾಲೆಹೊಸೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ. ಉಳಿದಂತೆ ಎಲ್ಲ ಆಸ್ಪತ್ರೆಗಳಲ್ಲೂ ಎಲ್ಲ ರೋಗಿಗಳಿಗೆ ಚಿಕಿತ್ಸೆ ಲಭ್ಯ ಇದೆ.

ಹೆಚ್ಚಿನ ಜನರಿಗೆ ಜ್ವರದ ಬಾಧೆ

ನರೇಗಲ್:‌ ಎರಡು ಮೂರು ವಾರಗಳಿಂದ ಜ್ವರ, ಕೆಮ್ಮು, ನೆಗಡಿ, ತೆಲೆನೋವು ಎಂದು ಸ್ಥಳೀಯರು ಹಾಗೂ ಗ್ರಾಮೀಣ ಭಾಗದ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಜುಲೈ, ಆಗಸ್ಟ್‌ನಲ್ಲಿ ಸೊಳ್ಳೆ ಹಾಗೂ ನೀರಿನ ತಾಣಗಳಿಂದ ಹರಡುವ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಆದರೆ ಇಲ್ಲಿಯವರೆಗೆ ಡೆಂಗಿ, ಚಿಕುನ್‌ಗುನ್ಯ ಪ್ರಕರಣಗಳು ದಾಖಲಾಗಿಲ್ಲ.

ಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಜಾಗೃತಿಗೆ ಅವಶ್ಯಕತೆ ಇರುವ ಅಗತ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ. ಸ್ಥಳೀಯ ಆಡಳಿತದ ಸಹಕಾರದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಎ.ಡಿ.ಸಾಮುದ್ರಿ ತಿಳಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಜನರು

ಗಜೇಂದ್ರಗಡ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಲವಾರು ಜನರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳು ಸರದಿ ಸಾಲಿನಲ್ಲಿರುವುದು ಸಾಮಾನ್ಯವಾಗಿದೆ.

ಬಹಳಷ್ಟು ಜನರು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಈ ಎಲ್ಲ ರೋಗಿಗಳ ಪೈಕಿ ಬಹುಪಾಲು ರೋಗಿಗಳು ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಸರತಿಯಲ್ಲಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.

ಆರೋಗ್ಯ ಇಲಾಖೆಯ ಬಹುಪಾಲು ಸಿಬ್ಬಂದಿಗಳು ಕೋವಿಡ್ ಲಸಿಕೆ ಹಾಕುವಲ್ಲಿ ನಿರತರಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತಿಲ್ಲ. ಅಲ್ಲದೆ ಗ್ರಾಮ ಪಂಚಾಯ್ತಿಯವರೂ ಸಹ ಮಳೆ ನೀರು ನಿಲ್ಲದಂತೆ ಚರಂಡಿ ಸ್ವಚ್ಛಗೊಳಿಸುವುದು, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ಅಲ್ಲಲ್ಲಿ ನಿಂತ ಮಳೆ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಹೆಚ್ಚಾಗಿ ಸೊಳ್ಳೆ ಕಾಟ ಹೆಚ್ಚಾಗಿದೆ.

‘ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಲಾರ್ವಾ ಸಮಿಕ್ಷೆ ನಡೆಸುವುದರ ಜೊತೆಗೆ ಜನರಿಗೆ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದರ ಜೊತೆಗೆ ವಾರದಲ್ಲಿ ಒಂದು ದಿನ ಕೋವಿಡ್ ಲಸಿಕಾ ಅಭಿಯಾನವೂ ನಡೆಯುತ್ತಿದೆ’ ಎಂದು ರೋಣ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾಹಿತಿ ನೀಡಿದರು.

ಕಾಡುವ ಸಾಂಕ್ರಾಮಿಕ ರೋಗಗಳ ಭೀತಿ

ರೋಣ: ಸಂಭಾವ್ಯ ಕೋವಿಡ್‌–19 ಮೂರನೇ ಅಲೆಯ ಆತಂಕದ ನಡುವೆಯೂ ಹಳ್ಳಿಗರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಕಾಡತೊಡಗಿದೆ. ತಾಲ್ಲೂಕಿನ ಹಳ್ಳಿಗಳಲ್ಲಿ ಚರಂಡಿ ನೀರು ಸರಾಗಮವಾಗಿ ಹರಿದು ಹೋಗದ ಪರಿಣಾಮ ಅಸ್ವಚ್ಛತೆಯಿಂದಾಗಿ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ, ಟೈಫಾಯ್ಡ್‌ನಂತಹ ರೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ತಾಲ್ಲೂಕು ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ಲಭ್ಯವಿದೆ. ಆದರೆ ಶೀತ, ಜ್ವರ,ಗಂಟಲು ಕೆರೆತ ಬಾಧೆಯಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಲುತ್ತಿರುವ ಕಾರಣ ಹಳ್ಳಿ, ಹಳ್ಳಿಗೆ ಬಂದು ಪ್ರತಿಯೊಬ್ಬರ ತಪಾಸಣೆಗೆ ಆರೋಗ್ಯ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಗ್ರಾಮೀಣರ ಬೇಡಿಕೆಯಾಗಿದೆ.

***

ಜಿಲ್ಲಾ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಸಮಸ್ಯೆಯ ತೀವ್ರತೆ ಕಳೆದ ವರ್ಷಕ್ಕಿಂತ ಕಡಿಮೆ ಇದೆ

- ಡಾ. ಸತೀಶ್‌ ಬಸರಿಗಿಡದ, ಗದಗ ಡಿಎಚ್‌ಒ

***

ಕೆಮ್ಮು, ನೆಗಡಿ, ಜ್ವರ, ಮೈಕೈ ನೋವಿನ ರೋಗಿಗಳ ಸಂಖ್ಯೆ ಜಾಸ್ತಿಯಾಗಿ ಅದಕ್ಕೆ ಅಗತ್ಯವಿರುವ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗಿದೆ

- ಡಾ. ಎ.ಡಿ.ಸಾಮುದ್ರಿ, ವೈದ್ಯಾಧಿಕಾರಿ, ನರೇಗಲ್‌

***

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಮನೆಯ ಒಳಗೆ, ಹೊರಗೆ ಸಂಗ್ರಹಿಸಿಟ್ಟುಕೊಳ್ಳದಂತೆ ಜಾಗೃತಿ ಮೂಡಿಸಲಾಗಿದೆ

- ಡಾ.ಎಸ್‌.ಎಸ್‌.ನೀಲಗುಂದ, ಟಿಎಚ್‌ಒ

***

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಡಾ. ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌, ಶ್ರೀಶೈಲ ಎಂ. ಕುಂಬಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.