ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಕುರಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ

ಪದವೀಧರರೇ ಇಲ್ಲಿ ‘ನರೇಗಾ’ ಕಾರ್ಮಿಕರು..!

Published:
Updated:
Prajavani

ಹೊಳೆಆಲೂರ: ಹೋಬಳಿ ವ್ಯಾಪ್ತಿಯ ಕುರಹಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ, ಕಾಲುವೆಗಳ ಸ್ವಚ್ಛತಾ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ 10ಕ್ಕೂ ಹೆಚ್ಚು ಪದವೀಧರರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. 

ಬೆಳಿಗ್ಗೆ  8 ಗಂಟೆಗೆ ಗುದ್ದಲಿ ಸಲಕೆ, ಪಿಕಾಸು ಹಿಡಿದು, ಕೆಲಸ ನಡೆಯುವ ಸ್ಥಳಕ್ಕೆ ಬರುವ ಈ ಯುವಕರು, ಕಾಲುವೆಯಲ್ಲಿ ಬೆಳೆದಿರುವ ಮುಳ್ಳುಗಳನ್ನು ಕಡಿದು, ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. 400ಕ್ಕೂ ಹೆಚ್ಚು ಕಾರ್ಮಿಕರು ಈ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಎಂ.ಎ, ಬಿಇಡಿ ಪದವೀಧರರಾದ ಶಿವಾನಂದ ಹಿರೇಮನಿ ಎಂಬುವವರು ಇಲ್ಲಿ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ.‘ಮೊದಲು ರೋಣದ ಖಾಸಗಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ₹5 ಸಾವಿರ ವೇತನ ಲಭಿಸುತ್ತಿತ್ತು. ನಮ್ಮೂರಿನಿಂದ ರೋಣ ಪಟ್ಟಣಕ್ಕೆ ಹೋಗಿಬರಲೇ ಪ್ರತಿ ದಿನ ₹20 ಖರ್ಚಾಗುತ್ತದೆ. ದುಡಿದ ₹5 ಸಾವಿರದಲ್ಲಿ ಅರ್ಧ ಅಲ್ಲಿಯೇ ಖರ್ಚಾಗುತ್ತಿತ್ತು. ಇದರ ಬದಲು ನಮ್ಮೂರಿನಲ್ಲೇ ಪ್ರಾರಂಭವಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಸೇರಿದೆ. ಪ್ರತಿದಿನ ₹249 ಲಭಿಸುತ್ತದೆ. ಇಲ್ಲಿ ಕೆಲಸ ಮಾಡುವುದೇ ಉತ್ತಮ ಎನಿಸಿದೆ’ ಎಂದು ಅವರು ಹೇಳಿದರು. 

ಶಿವಾನಂದ ಹಿರೇಮನಿ ಅವರ ಜತೆಗೆ, ಪದವೀಧರರಾದ ರಾಮಣ್ಣ ನಾಯ್ಕರ, ಶಿವಪ್ಪ ಮಾದರ, ಸಿದ್ದನಗೌಡ ಪಾಟೀಲ, ಭೀಮನಗೌಡ ಪಾಟೀಲ, ನಭಿಸಾಬ ನದಾಫ್, ಕಿರಣ ಮಲ್ಲಾಪೂರ ಅವರೂ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕ ಅರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ. ಬರಗಾಲ ಇರುವುದರಿಂದ ಸ್ಥಳೀಯ ಮಟ್ಟದಲ್ಲಿ ‘ನರೇಗಾ’ ಬಿಟ್ಟು, ಸದ್ಯ ಬೇರೆ ಯಾವುದೇ ಉದ್ಯೋಗಾವಕಾಶಗಳಿಲ್ಲ ಎನ್ನುತ್ತಾರೆ ಈ ಪದವೀಧರರು.

‘ದೂರದ ಊರುಗಳಿಗೆ ಹೋಗಿ ಕಡಿಮೆ ವೇತನಕ್ಕೆ ದುಡಿಯುವ ಬದಲು, ಇಲ್ಲಿಯೇ ಕೂಲಿ ಮಾಡುವುದು ಉತ್ತಮ. ಆ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ನಮಗೆ ವರದಾನವಾಗಿದೆ’ ಎನ್ನುತ್ತಾರೆ ಹೆಚ್ಚಿನ ಯುವಕರು.

‘ಮನೆಯಲ್ಲಿ ಬಡತನ. ತಂದೆ, ತಾಯಿ ಕಷ್ಟಪಟ್ಟು ಬಿ.ಎ ತನಕ ಓದಿಸಿದರು. ಅಲ್ಲದೇ ಒಂದು ವರ್ಷ ಕಂಪ್ಯೂಟರ್‌ ತರಬೇತಿ ಸಹ ಕೊಡಿಸಿದರು. ಆದರೂ, ಯಾವುದೇ ಕೆಲಸ ಸಿಗಲಿಲ್ಲ. ಕುಟುಂಬಕ್ಕೆ ಹೊರೆಯಾಗಬಾರದು ಎಂದು ನರೇಗಾದಡಿ ಕೆಲಸ ಮಾಡುತ್ತಿದ್ದೇನೆ’ ಎಂದು ದಾಕ್ಷಾಯಿಣಿ ಐಹೊಳಿ ಅಸಹಾಯಕತೆ ವ್ಯಕ್ತಪಡಿಸಿದರು.

Post Comments (+)