ಶುಕ್ರವಾರ, ಜೂನ್ 25, 2021
30 °C

ಕಾಳಜಿ ಕೇಂದ್ರ ಬೇಡ; ಶೆಡ್ ಹಾಕಿಸಿಕೊಡಿ: ಸಚಿವರಿಗೆ ಗ್ರಾಮಸ್ಥರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಮಲಪ್ರಭೆಯ ನವಿಲುತೀರ್ಥ ಜಲಾಶಯ ಭರ್ತಿಯಾಗಲು ಕೇವಲ ನಾಲ್ಕು ಅಡಿ ಬಾಕಿ ಇದ್ದು, ತಾಲ್ಲೂಕಿನ ಮಲಪ್ರಭಾ ಹೊಳೆ ಅಂಚಿನಲ್ಲಿರುವ ಲಕಮಾಪುರ ಗ್ರಾಮ ಪ್ರವಾಹದ ಭೀತಿ ಎದುರಿಸುತ್ತಿದೆ.

2,079.50 ಅಡಿ ಸಾಮರ್ಥ್ಯವಿರುವ ನವಿಲುತೀರ್ಥ ಜಲಾಶಯ ಭಾನುವಾರ 2,075.60 ಅಡಿಗೆ ತಲುಪಿದೆ. ಒಳಹರಿವು ಹೆಚ್ಚಾಗುತ್ತಿರುವುದಿಂದ 12 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗಿದೆ. ಇದರಿಂದ ಯಾವುದೇ ಕ್ಷಣದಲ್ಲೂ ಪ್ರವಾಹ ಬರುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.

ಬೆಳ್ಳೇರಿ ಕೃಷಿ ಡಿಪ್ಲೊಮಾ ಕಾಲೇಜನ್ನು ಪ್ರವಾಹದ ಸಲುವಾಗಿ ಕಾಳಜಿ ಕೇಂದ್ರವಾಗಿ ಮಾಡಲಾಗಿದೆ. ಅಲ್ಲಿಗೆ ತೆರಳಿ ಸುರಕ್ಷತೆಯಿಂದ ಇರಲು ಸಚಿವರು ಗ್ರಾಮಸ್ಥರಿಗೆ ಸೂಚಿಸಿದರು.

ಸಂತ್ರಸ್ತರ ನಕಾರ: ‘ಪ್ರತಿ ವರ್ಷ ನಮಗೆ ಮಳೆ ಆಗದಿದ್ದರೂ ಪ್ರವಾಹ ಬಂದು ಮನೆ, ಬೆಳೆ ಹಾನಿಯಾಗುತ್ತಿದೆ. ನಮಗೆ ಶಾಶ್ವತ ಸ್ಥಳಾಂತರ ಬೇಕು. ವರ್ಷವಾದರೂ ನಮಗೆ ವ್ಯವಸ್ಥೆ ಮಾಡಿಲ್ಲ’ ಎಂದು ಸಚಿವರ ಎದುರಿಗೆ ಸಂತ್ರಸ್ತರು ಅಳಲನ್ನು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

‘ಈಗ ಸಂತ್ರಸ್ತರಿಗಾಗಿ ಮಾಡಿದ ಬೆಳ್ಳೇರಿಯ ಕೃಷಿ ಡಿಪ್ಲೊಮಾ ಕಾಲೇಜನ್ನು ಕಾಳಜಿ ಕೇಂದ್ರವಾಗಿಸುವ ಮೊದಲು ‘ಕೋವಿಡ್ ಸೆಂಟರ್’ ಮಾಡಲಾಗಿತ್ತು. ಅಲ್ಲಿ ಕೊರೊನಾ ಸಂಪರ್ಕಿತರಿದ್ದರು. ಆದ್ದರಿಂದ ಅಲ್ಲಿಗೆ ಹೇಗೆ ತೆರಳುವುದು?’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ, ಅಲ್ಲಿಗೆ ಹೋಗಲು ನಿರಾಕರಿಸಿದರು.

‘ಕಳೆದ ವರ್ಷ ಇದ್ದಂತೆ ನಮ್ಮೂರಿನ ರಸ್ತೆ ಮೇಲ್ಭಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿಸಿಕೊಡಿ, ಅಲ್ಲಿಯೇ ಇರುತ್ತೇವೆ’ ಗ್ರಾಮಸ್ಥರು ಹೇಳಿದರು. ಸಚಿವರು ಹಾಗೂ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದರು. ಕೊನೆಗೂ ಸ್ಥಳಾಂತರಕ್ಕೆ ಒಪ್ಪಿದರು.

ಶೆಡ್ ಹಾಕಲು ಕ್ರಮ: ‘ಲಕಮಾಪುರ ಗ್ರಾಮಸ್ಥರ ಬೇಡಿಕೆ ಮೇರೆಗೆ ರಸ್ತೆ ಮೇಲ್ಭಾಗದ ಪಕ್ಕದಲ್ಲಿ ಶೆಡ್ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ 250 ಕುಟುಂಬಗಳಿದ್ದು, 600 ಮಂದಿ ಇದ್ದಾರೆ. ಎಲ್ಲರೂ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಒಪ್ಪಿದ್ದು, ಕೆಲವರು ಈಗಾಗಲೇ ಅಲ್ಲಿಗೆ ಹೋಗಿದ್ದಾರೆ. ಕಂದಾಯ ಇಲಾಖೆ ವತಿಯಿಂದ ಅವರು ಯೋಗಕ್ಷೇಮ ನೋಡಿಕೊಳ್ಳಲಾಗುವುದು’ ಎಂದು ಗದಗ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಎಂ. ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು