ಶನಿವಾರ, ಮೇ 21, 2022
23 °C

2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಹೋರಾಟ: ಪುಟ್ಟಸಿದ್ಧಶೆಟ್ಟಿ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಡಕ್ಕೆ ಮಣಿದು ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದ್ದೇ ಆದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತೇವೆ’ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಂವಿಧಾನ ಆರ್ಟಿಕಲ್‌ 15(4)ರಲ್ಲಿ ಶಿಕ್ಷಣಕ್ಕೆ, 16(4)ರಲ್ಲಿ ಉದ್ಯೋಗಕ್ಕೆ ‘2ಎ’ನಲ್ಲಿ ಇರುವ 105 ಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ನೀಡಿದೆ. ‘2ಎ’ನಲ್ಲಿ ಇರುವ ಎಲ್ಲವೂ ಕುಲಕಸುಬು ಆಧರಿತ ಜಾತಿಗಳು. ಇವರಲ್ಲಿ ಹೆಚ್ಚಿನವರಿಗೆ ಭೂಮಿ ಇಲ್ಲ. ದಿನದ ದುಡಿಮೆಯೇ ಇವರ ಜೀವನಕ್ಕೆ ಆಧಾರವಾಗಿದೆ. ಆದರೆ, ಬಲಿಷ್ಠವಾಗಿರುವ ವೀರಶೈವ ಲಿಂಗಾಯತ ಸಮುದಾಯದ ಉಪಜಾತಿಯಾದ  ಪಂಚಮಸಾಲಿಗಳನ್ನು 2ಎಗೆ ಸೇರಿಸಬೇಕು ಎಂದು ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ, ಇದು ಎಷ್ಟರ ಮಟ್ಟಿಗೆ ಸರಿ’  ಎಂದು ಅವರು ಕಿಡಿಕಾರಿದರು.

‘ಯಾವುದೇ ಒಂದು ಪಂಗಡಕ್ಕೆ ಸೇರಿದ ಉಪಜಾತಿಯನ್ನು ಅದರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಷ್ಟು ಸಾಮಾನ್ಯ ಜ್ಞಾನ ಇಲ್ಲದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಜನರಿಗೆ ಸುಳ್ಳು ಹೇಳಿ, ದಿಕ್ಕು ತಪ‍್ಪಿಸುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುವುದರ ಮೂಲಕ ಗುಂಪುಗಾರಿಕೆ ಮಾಡುತ್ತಿದ್ದಾರೆ’ ಎಂದು ಆರೋಪ ಮಾಡಿದರು.

‘ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿಯೇ ಒಗ್ಗಟ್ಟಿಲ್ಲ. ಹೋರಾಟದಲ್ಲಿ ಇದ್ದವರೇ ಮೀಸಲಾತಿ ಕೂಗು ಸರಿಯಲ್ಲ. ಆತುರದ ಹೋರಾಟ ಬೇಡ ಎಂದು ಹಿಂದೆ ಸರಿದಿದ್ದಾರೆ. ಆದರೆ, ಸ್ವಾಮೀಜಿ ಯಾರ ಮಾತನ್ನೂ ಕೇಳದೆ ಮುಂದುವರಿದು ಪಂಚಮಸಾಲಿಗಳನ್ನು ಮೂರು ಭಾಗ ಮಾಡಿದ್ದಾರೆ. ನಿರಾಣಿ ಬೆಂಬಲದಿಂದ ಈಗ ಮೂರನೇ ಪೀಠ ಆರಂಭಗೊಂಡಿದೆ’ ಎಂದು ವ್ಯಂಗ್ಯವಾಡಿದರು.

‘ಪಂಚಮಸಾಲಿಗಳು 3ಬಿಯಲ್ಲಿ ಇರುವುದರಿಂದ ಅವರನ್ನು ಮತ್ತೊಮ್ಮೆ ಸೇರಿಸಲು ಬರುವುದಿಲ್ಲ. ಸ್ವಾಮೀಜಿ ಬೆದರಿಕೆಗೆ ಸಿಎಂ ಬೊಮ್ಮಾಯಿ ಮಣೆ ಹಾಕಬಾರದು. ಪಂಚಮಸಾಲಿಗಳು ಮೀಸಲಾತಿ ಪಡೆದುಕೊಳ್ಳಲು ನಮ್ಮ ವಿರೋಧ ಇಲ್ಲ. ಆದರೆ, ಅವರನ್ನು 2ಎಗೆ ಸೇರ್ಪಡೆ ಮಾಡುವುದಕ್ಕೆ ನಮ್ಮ ಪ್ರಬಲ ವಿರೋಧ ಇದೆ’ ಎಂದು ಹೇಳಿದರು.

ಕಾರ್ಯಾಧ್ಯಕ್ಷ ಶಿವಪುತ್ರಪ್ಪ ಇಟಗಿ, ಮಲ್ಲಿಕಾರ್ಜುನ ಐಲಿ, ಫಕ್ಕೀರಪ್ಪ ಬಿ.ಮಡಿವಾಳರ, ದಶರಥರಾಜ ಕೊಳ್ಳಿ, ಹರೀಶ್‌ ಕಡ್ಲಿಕೊಪ್ಪ ಇದ್ದರು.

ಪುನರ್‌ ವಿಂಗಡಣೆಗೆ ಒತ್ತಾಯಿಸಲಿ– ಸವಾಲು

‘ಮೀಸಲಾತಿಗೆ ಆಗ್ರಹಿಸುವ ಬದಲು ಪುನರ್‌ ವಿಂಗಡಣೆಗೆ ಒತ್ತಾಯಿಸಲಿ. ಅದು ಬಿಟ್ಟು 2ಎ ಹೋರಾಟ ಮುಂದುವರಿಸಿದರೆ ಯಶಸ್ಸು ಖಂಡಿತವಾಗಿಯೂ ಸಿಗುವುದಿಲ್ಲ ಎಂದು ಕೆ.ಸಿ.ಪುಟ್ಟಸಿದ್ಧಶೆಟ್ಟಿ ಹೇಳಿದರು.

‘ಆರ್ಥಿಕವಾಗಿ ಹಿಂದುಳಿದವರಿಗಾಗಿ ಕೇಂದ್ರ ಸರ್ಕಾರ ಇಡಬ್ಲ್ಯುಎಸ್‌ ಮೀಸಲಾತಿ ಜಾರಿಗೆ ತಂದಿದೆ. ಎಲ್ಲ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಜನರು ಇದ್ದಾರೆ. ₹8 ಲಕ್ಷಕ್ಕಿಂತ ಕಡಿಮೆ ಆದಾಯ ಇದ್ದವರು ಶೇ 10ರಷ್ಟು ಮೀಸಲಾತಿ ಪಡೆದುಕೊಳ್ಳಬಹುದು. ಸ್ವಾಮೀಜಿಗಳು ಒಂದು ಸಮುದಾಯಕ್ಕೆ ಸೀಮಿತ ಆಗದೇ ಸರ್ವಧರ್ಮಕ್ಕೂ ಸ್ವಾಮೀಜಿ ಆಗಬೇಕು’ ಎಂದು ತಿಳಿಹೇಳಿದರು.

‘ಸೋಲೋಪ್ಪಿಕೊಂಡು ಪೀಠತ್ಯಾಗ ಮಾಡಿ’

‘ಯಾವುದೇ ಆಯೋಗದಲ್ಲೂ ಪಂಚಮಸಾಲಿಗಳನ್ನು ಹಿಂದುಳಿದ ವರ್ಗ ಅಂತ ಹೇಳಿಲ್ಲ. ಅಲ್ಲದೇ ರಚನೆಯಾಗಿರುವ ಆಯೋಗಗಳು ಸ್ವಾಯತ್ತ ಸಂಸ್ಥೆಗಳು. ಅದರಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಸಾಧ್ಯವಿಲ್ಲ. ಇಷ್ಟೂ ಜ್ಞಾನವಿಲ್ಲದ ಸ್ವಾಮೀಜಿ ತಾಕೀತು ಮಾಡುತ್ತಾರೆ, ಗಡುವು ನೀಡುತ್ತಾರೆ. ಹೋರಾಟದಲ್ಲಿ ಸೋತಿರುವ ಅವರು ಸೋಲೋಪ್ಪಿಕೊಂಡು ಪೀಠ ತ್ಯಾಗ ಮಾಡಬೇಕು’ ಎಂದು ಕೆ.ಸಿ.ಪುಟ್ಟಸಿದ್ಧಶೆಟ್ಟಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು